ಶಿಕ್ಷಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸನ್ನಿವೇಶ: ಶಾಸಕ
ಕ.ಪ್ರ. ವಾರ್ತೆ ಅರಸೀಕೆರೆ ಸೆ. 5
ದಶಕಗಳ ಹಿಂದೆ ಗುರು, ಮುಂದೆ ಗುರಿಯೊಂದಿಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ದಾಹ ಇತ್ತು. ಆದರೆ ಇಂದು ವಿದ್ಯಾರ್ಥಿಗಳನ್ನು ತಿದ್ದಿ, ಶಿಕ್ಷಿಸಿ ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಪ್ರಯತ್ನಿಸಿದರೆ ಮಾಧ್ಯಮಗಳು ಅದನ್ನು ವೈಭವೀಕರಿಸಿ ಅಂತಹ ಶಿಕ್ಷಕನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಡಾ. ರಾಧಾಕೃಷ್ಣನ್ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ದಂಡಿಸಿ ತಿದ್ದಿ ಬುದ್ಧಿ ಹೇಳುವ ಅವಕಾಶಗಳು ಕಡಿಮೆಯಾಗುತ್ತಿದೆ ಎಂದು ಹೇಳಿದರು. ಪುರಾತನ ಕಾಲದಲ್ಲಿ ಗುರುವಿಗೆ ವಿಶೇಷ ಸ್ಥಾನ ನೀಡಲಾಗಿತ್ತು. ತಮ್ಮೂರಿನಲ್ಲಿಯೂ ಸೇವೆ ಸಲ್ಲಿಸಿ ವರ್ಗ್ಗಾವಣೆಗೊಂಡ ಶಿಕ್ಷಕರನ್ನು ಇಡೀ ಗ್ರಾಮದ ಜನರು ಸನ್ಮಾನಿಸಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿ ಕಣ್ಣೀರಿಟ್ಟು ಬೀಳ್ಕೊಟ್ಟ ಪ್ರಸಂಗ ತಮಗೆ ಈಗಲೂ ರೋಮಾಂಚನ ಸೃಷ್ಟಿಸುತ್ತದೆ. ಆದರೆ ಇಂದಿನ ವಿದ್ಯಾರ್ಥಿಗಳಲ್ಲಿ ಭಯ, ಭಕ್ತಿ ಕಾಣೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಕೇವಲ 12 ಜನ ಹಂಗಾಮಿ ಶಿಕ್ಷಕರ ಹುದ್ದೆಗೆ 800 ಹೆಚ್ಚು ಮಂದಿ ಅರ್ಜಿ ಸಲ್ಲಿಸಿ ಕೆಲಸಕ್ಕಾಗಿ ಮನೆ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂದರೆ ಉದ್ಯೋಗ ದೊರಕಿಸಲು ಸಾಧ್ಯವಿಲ್ಲದ ಸರ್ಕಾರ ವೃತ್ತಿ ಶಿಕ್ಷಣದಂತಹ ಡಿ.ಎಡ್.ಕಾಲೇಜುಗಳಿಗೆ ಅನುಮತಿ ನೀಡಿದ್ದಾದರೂ ಏಕೆ ಎಂದು ಪ್ರಶ್ನಿಸಿದರು. ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹುಚ್ಚೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಿದ್ದರಾಮಶೆಟ್ಟಿ ಬಿಇಓ ನಟರಾಜ್, ಬೋರೆಹಳ್ಳಿ ಸೋಮಶೇಖರ್, ಗಿರಿಗೌಡ, ರತ್ನಮ್ಮಇನ್ನಿತರರು ಇದ್ದರು.