ಸಚಿವರಿಗೆ ಕ್ಟಾಟ್ರು ಬಾಟಲ್ ಇತ್ತು ನಿವೇದನೆ...
ಹಾಸನ: ಕುರ್ಚಿಗಾಗಿ ಕಾದ ಶಾಸಕರು... ಜಿಲ್ಲೆಯ ಸಮಸ್ಯೆಗಳ ಅಳ ಉದ್ದ ಗೊತ್ತಿಲ್ಲದೆ ಉತ್ತರಿಸಲು ತಡಬಡಾಯಿಸಿದ ಉಸ್ತುವಾರಿ ಸಚಿವರು... ಕ್ವಾಟ್ರೂ ಬಾಟಲ್ ತೋರಿಸಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪ ಮಾಡಿದ ಕಾಂಗ್ರೆಸ್ ಕಾರ್ಯಕರ್ತ.... ಎರಡಲ್ಲ.. ಇನ್ನೂ ಮೂರು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ಕೊಟ್ರೂ ನಿಭಾಯಿಸ್ತೀನಿ ಎಂದ ಜಿಲ್ಲಾ ಉಸ್ತುವಾರಿ ಸಚಿವರು....ಕಾರ್ಯಕರ್ತರು, ಮುಖಂಡರೇ ತುಂಬಿಕೊಂಡಿದ್ದರಿಂದ ಗೊಂದಲ, ಗದ್ದಲ..
ಇದು ಗುರುವಾರ ಹಾಸನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಎಸ್. ಮಹಾದೇವಪ್ಪ ಸುದ್ದಿಗೋಷ್ಠಿ ನಡೆಸಿದ ಕಾಲಕ್ಕೆ ನಡೆದ ಅನಂತ ಅವಾಂತರಗಳು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿ ಪ್ರವಾಸಿ ಮಂದಿರದ ಕೊಠಡಿಗೆ ಬಂದು 50 ನಿಮಿಷಗಳಾದರೂ ನಿಗದಿತ ವೇಳೆಗೆ ಸುದ್ದಿಗೋಷ್ಠಿಗೆ ಹಾಜರಾಗದ ಉಸ್ತುವಾರಿ ಸಚಿವರು, ಪತ್ರಕರ್ತರ ಒತ್ತಾಯದ ಮೇರೆಗೆ ಅಂತೂ ಇಂತೂ ಬಂದರು.
ಜಿಲ್ಲೆಯ ಆಗುಹೋಗುಗಳ ಬಗ್ಗೆ ಸಮಾಲೋಚನೆ: ಬಂದು ಕುಳಿತುಕೊಳ್ಳುತ್ತಿದ್ದಂತೆ, ಸಾರ್, ತಿಂಗಳಿಗೊಮ್ಮೆ ಬರುವೆನು ನಾನು. ಯಾವುದೇ ಕಾರಣಕ್ಕೂ ತಪ್ಪಿಸಿ ಕೊಳ್ಳುವುದಿಲ್ಲ ಎಂದು ಹೇಳಿದಿರಿ. ಅದರಂತೆ ನಡೆದುಕೊಳ್ಳಲಿಲ್ಲ. ಬೇಲೂರು ಕೆರೆಗೆ ಬಸ್ ಉರುಳಿ ಐವರು ಮೃತಪಟ್ಟು, ಹಲವಾರು ಮಂದಿ ಗಾಯಗೊಂಡರು. ಆದರೂ ಸ್ಥಳಕ್ಕೆ ಭೇಟಿ ಕೊಡಲಿಲ್ಲ.
ಅದು ಹೋಗಲಿ....ಮಳೆಯಿಂದ ಅತಿವೃಷ್ಟಿ ಉಂಟಾಗಿ ಬಹಳ ಪ್ರಮಾಣದಲ್ಲಿ ಬೆಳೆ, ಆಸ್ತಿಪಾಸ್ತಿ ನಷ್ಟವಾದರೆ, ಅರಸೀಕೆರೆ, ಚನ್ನರಾಯಪಟ್ಟಣದಲ್ಲಿ ಬರ ತಾಂಡವವಾಡುತ್ತಿದೆ. ಅದರೂ ಸರ್ಕಾರ ಬರ ಪಟ್ಟಿಗೆ ಇವನ್ನು ಸೇರಿಸಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಉಂಟಾದ ಸ್ಥಳಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಲಿಲ್ಲ.ಹೀಗೇಕೆ ಎಂದು ಪ್ರಶ್ನಿಸಲಾಯಿತು.
ಅದಕ್ಕೆ ಉತ್ತರಿಸಿದ ಸಚಿವರು, ನಾನು ಬರಲಿಲ್ಲ ಸರಿ. ಆದರೂ ಜಿಲ್ಲಾಧಿಕಾರಿ, ಜಿಪಂ ಸಿಇಓ ಮತ್ತಿತರ ಅಧಿಕಾರಗಳೊಡನೆ ನಡುವೆ ಸಂಪರ್ಕ ಇಟ್ಟುಕೊಂಡು, ಜಿಲ್ಲೆಯ ಆಗುಹೋಗುಗಳ ಬಗ್ಗೆ ಸಮಾಲೋಚನೆ ನಡೆಸಿ, ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹರಿಸಿಕೊಳ್ಳಲು ಸೂಚಿಸಿದ್ದೇನೆ ಎಂದರು.
ಸಾರ್... ನಿಮಗೆ ಕೊಡಗು, ಹಾಸನ ಉಸ್ತುವಾರಿ ಸಚಿವರನ್ನಾಗಿ ಮಾಡಿರುವುದರಿಂದ ಸಮಸ್ಯೆ ಆಗಿದೆ. ಸಿಎಂ ಅವರನ್ನು ಒಂದು ಜಿಲ್ಲೆ ಉಸ್ತುವಾರಿ ನೀಡಿ, ಹಾಸನಕ್ಕೆ ಸ್ಥಳೀಯ ಶಾಸಕರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಕೇಳಬಾರದೇಕೆ ಎಂದು ಪ್ರಶ್ನಿಸಲಾಯಿತು.
ವಿಚಲಿತರಾದ ಸಚಿವ: ಇದರಿಂದ ಕೊಂಚ ವಿಚಲಿತರಾದಂತೆ ಕಂಡ ಸಚಿವರು, ಎರಡಲ್ಲ, ಇನ್ನೂ ಮೂರು ಜಿಲ್ಲೆಗಳ ಉಸ್ತುವಾರಿ ಕೊಟ್ಟರೂ ನಿಭಾಯಿಸಲಿಕ್ಕೆ ಸಿದ್ದನಿದ್ದೇನೆ. ಜಿಲ್ಲೆಯ ಶಾಸಕರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡುವುದು ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಉತ್ತರಿಸಿದರು.
ಬಜೆಟ್ನಲ್ಲಿ ಹಾಸನ ಜಿಲ್ಲೆಗೆ ನಯಾ ಪೈಸೆ ನಿಗದಿ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಮಲತಾಯಿ ಧೋರಣೆಯನ್ನೇ ಮುಂದುವರಿಸಲಾಗಿದೆ. ಹೀಗಾದರೇ ಹೇಗೆಂಬ ಪ್ರಶ್ನೆಗೆ ಸಚಿವರು, ಈಗಾಗಲೇ ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಹೇಳಿ, ಈ ಹಣ ಬಿಡುಗಡೆಯಾಗಿದೆಯೇ ಎಂದು ಜಿಪಂ ಸಿಇಓ ಉಪೇಂದ್ರ ಪ್ರತಾಪಸಿಂಗ್ ಅವರಿಗೆ ಕೇಳಿದರು. ಅದಕ್ಕೆ ಸಿಇಓ ಇಲ್ಲ ಸಾರ್ ಎಂದರು. ಆಗ ಅಸಮಾಧಾನಗೊಂಡ ಸಚಿವರು ಪಿಡ್ಬೂಡಿ ರುದ್ರಪ್ಪ ಕರೆಯಿರಿ ಅಂದರು. ಬಹಳ ಸಮಯದ ನಂತರ ಬಂದ ಲೋಕೋಪಯೋಗಿ ಅಧೀಕ್ಷಕ ಎಂಜಿನಿಯರ್ ಸಾರ್.. ಹೌದು... 21.19 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
11 ರಂದು ಪ್ರಗತಿ ಪರಿಶೀಲನಾ ಸಭೆ: ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ, ರಸ್ತೆಗಳ ಸಮಸ್ಯೆ, ಶಾಲೆ, ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳು ಇಲ್ಲದೇ ಇರುವುದು ಸೇರಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ಸೆಪ್ಟೆಂಬರ್ 11 ರಂದು ನಡೆಯಲಿರುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಹೇಳಿ ಜಾರಿಗೊಂಡರು.
ಕ್ವಾಟ್ರೂ ಬಾಟಲ್ ತಂದ್ರೂ: ಈ ನಡುವೆ ಕಾಂಗ್ರೆಸ್ ಕಾರ್ಯಕರ್ತ ಕರಿಯಪ್ಪ ಎಂಬುವರು ಕ್ಯಾಟ್ರೂ ಬಾಟಲ್ ಅನ್ನು ಸಚಿವರಿಗೆ ನೀಡಿ, ತಮ್ಮ ದು:ಖ, ದುಮ್ಮಾನ ಹೇಳಿ ಕೊಂಡಿದ್ದು ಹೀಗೆ.
ಸಚಿವರೇ, ಕರ್ನಾಟಕದಲ್ಲಿ 4 ಕೋಟಿ ಜನರು ಕುಡಿತಾರೆ... ಅದರಲ್ಲಿ 1 ಕೋಟಿ ಮಹಿಳೆಯರು ಕುಡಿತಾರೆ.... ಗ್ರಾಮೀಣ ಭಾಗದ ಜನರಿಗೆ ಕುಡಿದೇ ಇದ್ರೆ ನಿದ್ರೆನೇ ಬರಲ್ಲ. ಆದರೆ ಶೇ.30 ಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಾರೆ. ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಸಾರಾಯಿ ನಿಷೇಧ ಮಾಡಿದ್ದ ಪರಿಣಾಮವೇ ಇದಕ್ಕೆಲ್ಲಾ ಕಾರಣ ಎಂದು ಅಳಲು ತೋಡಿಕೊಂಡರು.
ಕ್ಟಾಟ್ರೂ ಬಾಟಲ್ ಪಡೆದುಕೊಂಡ ಸಚಿವರು.. ಭಾರಿ ಸಮಸ್ಯೆನೇ ತಂದಿದ್ದೀರಿ. ನೋಡೋಣ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಗೆ ಆಗಮಿಸಿದ ಬೇಲೂರು ಶಾಸಕ ವೈ.ಎನ್.ರುದ್ರೇಶ್ಗೌಡರಿಗೆ ಕೂರಲು ಕುರ್ಚಿಯಿಲ್ಲದೇ ಕೆಲ ನಿಮಿಷ ನಿಂತುಕೊಂಡೇ ಕಾದರು. ನಂತರ ಕುರ್ಚಿ ಕೊಟ್ಟು ಕೂರಿಸಲಾಯಿತು. ಇದೇ ಪರಿಸ್ಥಿತಿಯನ್ನು ಮುಖಂಡ ಎಚ್.ಕೆ.ಜವರೇಗೌಡ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಎಚ್.ಎಂ. ವಿಶ್ವನಾಥ್ ಅನುಭವಿಸದೇ ಬೇರೆ ದಾರಿಯೇ ಇರಲಿಲ್ಲ.
ಮುಗಿಬಿದ್ದ ಮುಖಂಡರು.. ಸುಸ್ತಾದ ಪೊಲೀಸರು: ಸುದ್ದಿಗೋಷ್ಟಿ ನಡೆದ ಪ್ರವಾಸಿ ಮಂದಿರದ ಹಾಲ್ಗೆ ಅಪಾರ ಸಂಖ್ಯೆಯ ಮುಖಂಡರು ಆಗಮಿಸಿದರು. ಇದು ಸುದ್ದಿಗೋಷ್ಟಿ... ಕಾರ್ಯಕರ್ತರ ಸಭೆಯಲ್ಲ. ದಯವಿಟ್ಟು ಹೊರ ಹೋಗಿ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಇದರಿಂದ ಕುಪಿತರಾದ ಕೆಲ ಮುಖಂಡರು, ಏನ್ರಿ ಹೀಗೆ ಹೇಳ್ತೀರಿ. ನಮ್ಮನ್ನಾ ಏನ್ ತಿಳ್ಕೋಂಡ್ ಇದ್ದೀರಿ ಎಂದು ಪೊಲೀಸರಿಗೆ ಅವಾಜ್ ಹಾಕಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೈನಹಳ್ಳಿ ರಶ್ಮಿ ಅವರು ಮುಖಂಡರನ್ನು ಹೊರಕ್ಕೆ ಕಳುಹಿಸಲು ಹರಸಾಹಸ ಪಡಬೇಕಾಯಿತು. ಸುಮಾರು 1 ಗಂಟೆ ಇಂಥ ಪ್ರಹಸನ, ಅವಾಂತರಗಳು ನಡೆದ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ ಗೊಂದಲ, ಗೋಜಲಿನ ನಡುವೆ ಮುಕ್ತಾಯ ಕಂಡಿತು.
ದಯಾಶಂಕರ ಮೈಲಿ