ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 5 Sept 2013, 9:53 am

ಅಡವಿ ಸ್ವಾಮಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ
ಅರಸೀಕೆರೆ: ರಾಷ್ಟ್ರಕ್ಕೆ ಪ್ರತಿಭಾವಂತ ಭಾವಿ ಪ್ರಜೆಗಳನ್ನು ನೀಡುವ ಕಾಯಕದಲ್ಲಿ ಕಳೆದ 30 ವರ್ಷಗಳಿಂದ ಸತತವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪಟ್ಟಣದ ಹಾಸನ ರಸ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಕೆ.ಎಲ್. ಅಡವಿಸ್ವಾಮಿ ಅವರ ಪ್ರಾಮಾಣಿಕ ಸೇವೆಯನ್ನು ಶಿಕ್ಷಣ ಇಲಾಖೆ ಗುರುತಿಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿರುವ ಶಿಕ್ಷಕರು ಇದೇ ತಾಲೂಕಿನ  ಟಿ.ಕೋಡಿಹಳ್ಳಿಯಲ್ಲಿ ಕಳೆದ ಮುವತ್ತು ವರ್ಷಗಳ ಹಿಂದೆ ಸೇವೆಗೆ ಪಾದಾರ್ಪಣ ಮಾಡಿದ್ದು ವಿವಿಧ ಸ್ಥಳಗಳಲ್ಲಿ ಉತ್ತಮ ಸೇವೆಮಾಡಿ ಸಮುದಾಯದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಿರಿಯ ಸಾಹಿತಿಗಳ ಒಡನಾಟ ಹೊಂದಿರುವ ಇವರು ತಾಲೂಕು ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶಿಕ್ಷರ ಸಮಸ್ಯೆಗಳಿಗೆ ಸ್ಪಂದಿಸುತ್ತ, ತಾವು ಕರ್ತವ್ಯ ನಿರ್ವಹಿಸುವ ಶಾಲೆಯ ಅಭಿವೃದ್ಧಿಗೂ ಹೆಚ್ಚಿನ ಆಸಕ್ತಿ ವಹಿಸಿ ಪೋಷಕರ ಹಾಗೂ ಎಸ್‌ಡಿಎಂಸಿ ಯವರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇಲಾಖೆ ಪ್ರಶಸ್ತಿ ಲಭಿಸಿರುವುದಕ್ಕೆ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪೋಷಕ ವರ್ಗ ಅಡವಿಸ್ವಾಮಿ ಅವರನ್ನು ಅಭಿನಂದಿಸಿದೆ.

'ತಪ್ಪು ತಿದ್ದುವಲ್ಲಿ ಗುರು ಪಾತ್ರ ಮಹತ್ತರ'
ಹಾಸನ: ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದುವಲ್ಲಿ ಗುರುಗಳ ಪಾತ್ರ ಮಹತ್ತರವಾದದ್ದು ಎಂದು ಎಚ್‌ಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ ಹೇಳಿದರು. ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯ ಎಚ್‌ಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳ ಬದುಕನ್ನು ತಿದ್ದಿ ಉತ್ತಮವಾಗಿ ರೂಪಿಸುವಲ್ಲಿ ತಂದೆ ತಾಯಿಗಳಷ್ಟೆ ಶಿಕ್ಷಕರ ಪಾತ್ರ ಮಹತ್ತರವಾದದ್ದಾಗಿದೆ.  ಈ ಹಿನ್ನೆಲೆಯಲ್ಲಿಯೇ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂ ನಾಣ್ಮುಡಿ ಮೂಡಿ ಬಂದಿದೆ ಎಂದು ಹೇಳಿದರು. ಡಾ. ರಾಧಾಕೃಷ್ಣನ್ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಹಲವಾರು ಮನರಂಜನಾ ಮತ್ತು ಕ್ರೀಡಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು.  ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಜರಿದ್ದರು. ವಿದ್ಯಾರ್ಥಿ ಸುನಿಲ್ ಕಾಲೇಜಿನ ಉಪನ್ಯಾಸಕರ ಕುರಿತ ಸ್ವರಚಿತ ಕವನವನ್ನು ಹಾಡಿದರು. ಎಂಕಾಂ ವಿದ್ಯಾರ್ಥಿನಿ ಫರಿನ್‌ತಾಜ್ ಪ್ರಾರ್ಥಿಸಿದರು. ದಿಲೀಪ್‌ಕುಮಾರ್ ಸ್ವಾಗತಿಸಿದರು. ಕುಮಾರಿ ಓಂಕಾರಿ ವಂದಿಸಿದರು. ಶೃತಿ, ನೇತ್ರಾವತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement