ಕೆಸರುಗದ್ದೆಯಾದ ಕ್ರೀಡಾಂಗಣ: ಕೂಟವೇ ರದ್ದು
ಕ.ಪ್ರ. ವಾರ್ತೆ ಅರಸೀಕೆರೆ ಸೆ. 6
ಬರಗಾಲದಿಂದ ತತ್ತರಿಸಿದ್ದ ತಾಲೂಕಿನಲ್ಲಿ ಮೂರು ದಿನದಿಂದ ಸುರಿದ ಮಳೆ ಜಗದ್ಗುರು ಶಿವಲಿಂಗೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಕ್ರೀಡಾಕೂಟಕ್ಕೆ ಅವಕಾಶವನ್ನೇ ನೀಡಲಿಲ್ಲ. ಕ್ರೀಡಾಂಗಣ ಮಳೆ ನೀರಿನಿಂದ ಭರ್ತಿಯಾಗಿ, ಕೆಸರುಗದ್ದೆಯಂತಾದ ಕಾರಣ ಕ್ರೀಡಾಪಟುಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿತು.
ಪಟ್ಟಣದ ನಾಗರಿಕರು, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಮೀಸಲಿರುವ ಈ ಕ್ರೀಡಾಂಗಣ ಸೂಕ್ತ ನಿರ್ವಹಣೆ ಹಾಗೂ ಸೌಲಭ್ಯಗಳಿಲ್ಲದೆ ಕ್ರೀಡಾಚಟುವಟಿಕೆ ವೇಳೆ ಪಾಲ್ಗೊಳ್ಳುವ ಕ್ರೀಡಾಪಟುಗಳು ಹಾಗೂ ತೀರ್ಪುಗಾರರು ಮಳೆ ಬಂದಾಗ ಆಶ್ರಯ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದ್ದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ಇದಕ್ಕೆ ಉದಾಹರಣೆಯೆಂಬಂತೆ ಈಚೆಗೆ ಕ್ರೀಡಾಕೂಟ ನಡೆಯುತ್ತಿದ್ದ ವೇಳೆ ಸುರಿದ ಮಳೆ ಅವ್ಯವಸ್ಥೆಯ ಆಗರವನ್ನೇ ಅನಾವರಣಗೊಳಿಸಿತು. ಮಳೆಯಿಂದ ಇಡೀ ಕ್ರೀಡಾಂಗಣ ನೀರಿನ ಹೊಂಡವಾಗಿ ಪರಿವರ್ತನೆಯಾಯಿತು. ಆಯೋಜಕರು ಶಿಕ್ಷಕರು, ಕ್ರೀಡಾಪಟುಗಳು ಮಳೆ ನೀರಿನಲ್ಲಿ ನೆನೆಯುತ್ತಾ ಒಂದು ಗಂಟೆಗೂ ಹೆಚ್ಚು ಕಾಲ ನಿಲ್ಲಬೇಕಾಯಿತು. ಏಕೆಂದರೆ ಈ ಕ್ರೀಡಾಂಗಣದ ಸುತ್ತಮುತ್ತ 2 ಕಿ.ಮೀ.ದೂರದಲ್ಲಿ ಯಾವುದೇ ಆಶ್ರಯ ತಾಣಗಳಿಲ್ಲದಿರುವುದರಿಂದ ನೆನೆದು ತೊಪ್ಪೆಯಾದರು. ಮಳೆ ನಿಲ್ಲುವ ಯಾವುದೇ ಸೂಚನೆ ಕಂಡುಬರದ ಕಾರಣ ಕ್ರೀಡಾಚಟುವಟಿಕೆಗಳನ್ನು ರದ್ಧುಗೊಳಿಸಿ ಕ್ರೀಡಾಕೂಟವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಮಳೆಗೆ ಕ್ರೀಡಾಂಗಣ ಸಂಪೂರ್ಣ ತೇವಗೊಂಡಿದ್ದರಿಂದ ಕ್ರೀಡಾಂಗಣದ ಹೊರಭಾಗದಲ್ಲಿ ಕ್ರೀಡೆಗಳು ನಡೆದವು.
ಕ್ರೀಡಾಂಗಣದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತರುವ ಹಲವಾರು ಪ್ರತಿಭೆಗಳಿದ್ದರೂ ಮೈದಾನದಲ್ಲಿ ಸೂಕ್ತ ವ್ಯವಸ್ಥೆ, ಪ್ರೋತ್ಸಾಹವಿಲ್ಲದೆ ಕ್ರೀಡಾಸಕ್ತರಿಗೆ ತೀವ್ರ ನಿರಾಸೆಯುಂಟಾಗಿದೆ. ಈಗಲಾದರೂ ಜನಪ್ರತಿನಿಧಿಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಗಮನ ಹರಿಸಿ ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಂಡು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡುವರೆ ಕಾದುನೋಡಬೇಕು. ಕ್ರೀಡಾಂಗಣದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.