ಕೋಟಿ ರು. ಅವ್ಯವಹಾರ, ಅಧಿಕಾರಿಗಳ ಶಾಮೀಲು
ಕ.ಪ್ರ. ವಾರ್ತೆ ಬೇಲೂರು ಸೆ. 6
ಬೇಲೂರು ಪುರಸಭೆಯಲ್ಲಿ ಶೇಖರಣೆಯಾಗುವ ಘನ ತ್ಯಾಜ್ಯವಸ್ತುಗಳ ವಿಲೇವಾರಿಗೆ ಜಾಗ ಖರೀದಿಸುವಲ್ಲಿ 1 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಇದರಲ್ಲಿ ಕೆಲ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳ ಕೈವಾಡವಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ ಅನಂತಸುಬ್ಬರಾಯ, ಜಿಪಂ ಸದಸ್ಯ ಚಂದ್ರೇಗೌಡ, ತಾಪಂ ಮಾಜಿ ಅಧ್ಯಕ್ಷ ಎಂ.ಎ.ನಾಗರಾಜ್, ಮಾಜಿ ಜಿಲ್ಲಾಧ್ಯಕ್ಷ ಲಿಂಗೇಶ್ ಈ ಆರೋಪ ಮಾಡಿದರು.
ಪಟ್ಟಣದ ಘನ ತ್ಯಾಜ್ಯವಸ್ತುಗಳ ವಿಲೇವಾರಿಗೆ ಜಾಗ ಬೇಕು ಎಂಬ ಪ್ರಸ್ತಾವನೆಗೆ ಸಂಬಂಧಪಟ್ಟಂತೆ ಸನ್ಯಾಸಿಹಳ್ಳಿಯ ಗ್ರಾಪಂ ವ್ಯಾಪ್ತಿಗೆ ಬರುವ 30-1, 31-1, 30-2 ಒಟ್ಟು 7 ಎಕರೆ 22 ಗುಂಟೆ ಜಾಗವನ್ನು ಖರೀದಿ ಮಾಡುವ ಪ್ರಕ್ರಿಯೆ ಪುರಸಭೆಯಲ್ಲಿ ನಡೆಯುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಅವ್ಯವಹಾರ ನಡೆದಿದೆ ಎಂದು ಅವರು ದೂರಿದರು. 19 ಜನವರಿ 2013 ರಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸನ್ಯಾಸಿಹಳ್ಳಿಯಲ್ಲಿರುವ 7 ಎಕರೆ, 22 ಕುಂಟೆ ಜಾಗವನ್ನು ಚನ್ನರಾಯಪಟ್ಟಣ ಪುರಸಭೆಯವರು ಖರೀದಿಸಿರುವಂತೆ ಎಕರೆಗೆ 4 ಲಕ್ಷ ರು. ನೀಡಿ ಒಟ್ಟು 28 ಸಾವಿರಕ್ಕೆ ಖರೀದಿಸಬಹುದು ಎಂದು ನಿರ್ಣಯ ಮಾಡಲಾಗಿತ್ತು. ಆದರಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ಆದರೆ ಈಗ ಮತ್ತೆ ಅಭಿವೃದ್ಧಿ ಪ್ರಾಧಿಕಾರಿಂದ ಪತ್ರ ಬಂದಿದ್ದು, ಹಿಂದಿನ ಸರ್ಕಾರದ ಆದೇಶದಂತೆ ಕೂಡಲೇ ನಾಗೇಶ್ ಎಂಬುವರಿಗೆ 1,28,13 ಸಾವಿರ ರು. ಚೆಕ್ ನೀಡುವಂತೆ ಸೂಚಿಸಲಾಗಿದೆ.
ಅಲ್ಲದೆ ಮತ್ತೆ ಜನಪ್ರತಿನಿಧಿಗಳ ಆಡಳಿತ ಬರುವ ಹಿನ್ನಲೆಯಲ್ಲಿ ಕಳೆದ 3 ದಿನದಿಂದ ಪುರಸಭೆ ಅಧಿಕಾರಿಗಳು ಎಸಿ ಹಾಗೂ ಡಿಸಿ ಅವರಿಂದ ಒಪ್ಪಿಗೆ ಪಡೆಯುವ ಹಂತದಲ್ಲಿದ್ದರು. ಕೊನೆ ಗಳಿಗೆಯಲ್ಲಿ ಡಿಸಿ ಗೆ ಈಗಿರುವ ಸಮಸ್ಯೆ ಹಾಗೂ ಹಣ ಲೂಟಿ ಬಗ್ಗೆ ಗಮನ ಸೆಳೆದಾಗ ಅವರು ಪುರಸಭೆ ಅಧಿಕಾರಿಗಳಿಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆ ಎಂದರು.
ಇದಲ್ಲದೆ ಈ ಪ್ರಕರಣ ಕುರಿತಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದು ಯಾವುದೇ ಕಾರಣಕ್ಕೂ ಭೂಮಿಯನ್ನು ಹೆಚ್ಚುವರಿ ಬೆಲೆಗೆ ಮಾರಾಟ ಮಾಡಲು ಬಿಡುವುದಿಲ್ಲ ಎಂದರು. ಜೆಡಿಎಸ್ ಮುಖಂಡ ನಟರಾಜ್ ಇತರರು ಇದ್ದರು.