ಸಮಸ್ಯೆ ಸುಳಿಯಲ್ಲಿ ಸಾರಿಗೆ ಸಂಸ್ಥೆ
ಹಾಸನ: ಸಾರ್ವಜನಿಕ ಸೇವೆಗೆ ಸದಾ ಸಿದ್ಧವಿರಬೇಕಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಸನ ವಿಭಾಗವು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು, ಸೂಕ್ತ ಉಸ್ತುವಾರಿ ಮತ್ತು ನಿರ್ವಹಣೆ ಇಲ್ಲದೆ ಎಲ್ಲೆಂದರಲ್ಲಿ ಬಸ್ ನಿಲ್ದಾಣಗಳು ತಲೆ ಎತ್ತುತ್ತಿವೆ. ಇದರಿಂದ ನಗರದ ಹೃದಯ ಭಾಗದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟು, ಜನ, ವಾಹನ ಸಂಚಾರಕ್ಕೆ ನಿತ್ಯವೂ ಅಡಚಣೆಯಾಗುತ್ತಿದೆ.
2013-14 ನೇ ಸಾಲಿನಲ್ಲಿ 646 ಅನುಸೂಚಿ (ಮಾರ್ಗ)ಯಲ್ಲಿ 640 ಸಾರಿಗೆ ಬಸ್ಗಳನ್ನು 2.20 ಲಕ್ಷ ಕಿಮೀ ವ್ಯಾಪ್ತಿಯಲ್ಲಿ ಓಡಿಸಲಾಗುತ್ತಿದೆ. ಹಾಸನ ವಿಭಾಗವು ಹಾಸನ, ಚನ್ನರಾಯಪಟ್ಟಣ, ರಾಮನಾಥಪುರ, ಅರಕಲಗೂಡು ಹೊಳೆನರಸೀಪುರದಲ್ಲಿ ಘಟಕಗಳನ್ನು ಹೊಂದಿದ್ದು, ಹಾಸನದಲ್ಲಿ 2ನೇ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಹಾಸನ ಘಟಕದಲ್ಲಿ 189 ಅನುಸೂಚಿಯಲ್ಲಿ 204 ಬಸ್ಗಳ ಸಂಚಾರ ನಡೆಸುತ್ತಿದ್ದು, ಈ ಪೈಕಿ 74 ಬಸ್ಗಳನ್ನು ಹಾಸನದ 2ನೇ ಘಟಕಕ್ಕೆ ಒಳಪಡಿಸಲಾಗಿದೆ.
ಹಾಸನ ವಿಭಾಗದಲ್ಲಿ ಒಟ್ಟು 2623 ಎಲ್ಲಾ ವರ್ಗದ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 2012-13ರವರೆಗೆ ಸಾರಿಗೆ ಇಲಾಖೆ ಲಾಭದಲ್ಲಿ ಇತ್ತು. ಆದರೆ, ಇತ್ತೀಚೆಗೆ ಇಂಧನ, ಸಿಬ್ಬಂದಿ ವೆಚ್ಚ ಹಾಗೂ ಅಕ್ರಮವಾಗಿ ಮ್ಯಾಕ್ಸಿಕ್ಯಾಬ್ಗಳು ಸಂಚಾರಿಸುತ್ತಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಹಾಸನ ವಿಭಾಗವು ನಷ್ಟವನ್ನು ಅನುಭವಿಸುತ್ತಿದೆ.
ಹಾಸನ ವಿಭಾಗದಲ್ಲಿ 2473 ಗ್ರಾಮಗಳಿಗೆ ಸಾರಿಗೆ ಬಸ್ಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತಹ ಹಲವಾರು ಗ್ರಾಮಗಳಿಗೂ ಬಸ್ ಸೇವೆಯನ್ನು ಕಲ್ಪಿಸಲು ಸಾರಿಗೆ ಇಲಾಖೆಯಿಂದ ಸಾಧ್ಯವಾಗಿಲ್ಲ. ಅನೇಕ ಗ್ರಾಮಗಳಿಗೆ ರಸ್ತೆಗಳು ಸರಿ ಇಲ್ಲದ ಹಾಗೂ ಇತರೆ ಕಾರಣಗಳಿಂದ ಇಲಾಖೆ ಬಸ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಗ್ರಾಮೀಣ ಭಾಗದ ಜನತೆ ಸಾರಿಗೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ.
ಜಿಲ್ಲೆಯ ಅನೇಕ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಇಲ್ಲದ ಕಾರಣ ಕಿಮೀ ನಷ್ಟು ದೂರದ ವರೆಗೆ ಕ್ರಮಿಸಿ ಬಸ್ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಸರಿಯಾದ ಸಮಯಕ್ಕೆ ತೆರಳು ಸಾಧ್ಯವಾಗುತ್ತಿಲ್ಲ.
ತಮ್ಮ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ಹಲವು ಗ್ರಾಮಸ್ಥರು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರೂ ಬೇಡಿಕೆ ಈವರೆಗೂ ಈಡೇರಿಲ್ಲ.
ತಾಂತ್ರಿಕ ದೋಷದಿಂದ ಅಪಘಾತ ಹೆಚ್ಚಳ: ಸಾರಿಗೆ ಇಲಾಖೆ ಅಸಮರ್ಪಕ ನೀತಿಯಿಂದ ಸಾರ್ವಜನಿಕರ ಪ್ರಾಣಹರಣವಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಒಂದೆರಡು ತಿಂಗಳಿಂದ ಸಾರಿಗೆ ಬಸ್ಗಳಲ್ಲಿನ ತಾಂತ್ರಿಕ ದೋಷಗಳಿಂದ ಹೆಚ್ಚಿನ ಅಪಘಾತಗಳು ಸಂಭವಿಸಿ ಸಾವು-ನೋವು ಹೆಚ್ಚಾಗುತ್ತಿದೆ. ಅರ್ಥಿಕವಾಗಿ ದುರ್ಬಲರು ಹಾಗೂ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರು ಸಾರಿಗೆ ಬಸ್ ಅವಲಂಬಿಸಿ ಪ್ರಯಾಣ ಬೆಳೆಸುತ್ತಾರೆ. ಆದರೆ ಜಿಲ್ಲೆಯಲ್ಲಿ ಸಾರಿಗೆ ಬಸ್ಗಳ ತಾಂತ್ರಿಕ ದೋಷಗಳಿಂದ ಹೆಚ್ಚಾಗುತ್ತಿರುವ ಅವಘಡದಿಂದ ಪ್ರಯಾಣಿಕರು ಸಾರಿಗೆ ಬಸ್ ಮೇಲಿದ್ದ ನಂಬಿಕೆ ಕಡಿಮೆಯಾಗ ತೊಡಗಿದೆ.
ಹಾಸನ ವಿಭಾಗದಲ್ಲಿ ಹಳೆಯದಾದ ಹಾಗೂ ಪ್ರಯಾಣಕ್ಕೆ ಯೋಗ್ಯವಲ್ಲದ ಬಸ್ಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ನೀಡುತ್ತಿರುವುದರಿಂದ ಜಿಲ್ಲೆಯಲ್ಲಿ ಒಂದರ ಹಿಂದೆ ಒಂದು ಅಪಘಾತ ನಡೆಯುತ್ತಲೆ ಇದೆ. ಇದಕ್ಕೆ ಕಾರಣ ಇಲಾಖೆಯಲ್ಲಿ ಶೇ.30ರಷ್ಟು ಸಿಬ್ಬಂದಿ ಕೊರತೆ ಅಥವಾ ಕಳಪೆ ಗುಣಮಟ್ಟದ ವಸ್ತುಗಳನ್ನು (ಪಾರ್ಟ್ಸ್) ಬಳಕೆ ಮಾಡುತ್ತಿರುವುದರಿಂದ ತಾಂತ್ರಿಕ ದೋಷದಿಂದ ಎಂದು ಹೇಳಬಹುದು.
ಇಲಾಖೆಯಲ್ಲಿ ಸುಮಾರು 7 ಲಕ್ಷ ಕಿಮೀ ಕ್ರಮಿಸಿರುವ ಹಾಗೂ ಸುಸ್ಥಿತಿಯಲ್ಲಿ ಇರದ ಬಸ್ಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿವೆ. ಇಲಾಖೆ ಪ್ರಕಾರ ಸುಮಾರು 8 ಲಕ್ಷ ಕಿಮೀ ನಷ್ಟು ಕ್ರಮಿಸಿರುವ ಬಸ್ಗಳನ್ನು ನಿಲ್ಲಿಸಬೇಕೆಂಬ ನಿಯಮವಿದೆ. ಆದರೆ, ಹಾಸನ ವಿಭಾಗದಲ್ಲಿ ಕೆಲವು ಬಸ್ಗಳು ಹೆಚ್ಚಿನ ಕಿಮೀನಷ್ಟು ಕ್ರಮಿಸಿದ್ದರೂ ಆ ಬಸ್ಗಳನ್ನು ನಿಲ್ಲಿಸುವ ಕ್ರಮ ಕೈಗೊಂಡಿಲ್ಲ. ಇದರಿಂದ ದಿನೇ ದಿನೇ ಅಪಘಾತಗಳು ಸಂಖ್ಯೆ ಹೆಚ್ಚಾಗಿದೆ.
ಎಲ್ಲೆಂದರಲ್ಲಿ ತಂಗುದಾಣ: ನಗರದ ನಾನಾ ಕಡೆಗಳಲ್ಲಿ ಬಸ್ ತಂಗುದಾಣಗಳು ತಲೆ ಎತ್ತುತ್ತಿವೆ. ಸಾರ್ವಜನಿಕರು ತಾವಾಗಿಯೇ ಸೃಷ್ಟಿಸಿಕೊಂಡಿರುವ ಈ ತಂಗುದಾಣದಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ನಗರದ ಹಳೇ ಶಾಂತಿಸ್ಟೋರ್ ವೃತ್ತ, ಎನ್.ಆರ್.ವೃತ್ತ ಸಮೀಪ ಐಬಿ ಮುಂಭಾಗದಲ್ಲಿ ಬಸ್ ತಂಗುದಾಣವಿಲ್ಲದಿದ್ದರೂ ಬಸ್ಗಳನ್ನು ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಸಾಕಷ್ಟು ಅನಾಹುತಗಳು ಸಂಭಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಇನ್ನಾದರೂ ಕ್ರಮ ಕೈಗೊಳ್ಳಬೇಕಾಗಿದೆ.
ಪಿ.ರವಿಕುಮಾರ್