ಹೆದ್ದಾರಿಯಲ್ಲಿ ಬಿಡಾಡಿ ದನ; ಸಂಚಾರಕ್ಕೆ ಕಿರಿಕಿರಿ
ಅರಸೀಕೆರೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಹಾಗೂ ಮೈಸೂರು-ಚನ್ನರಾಯಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹಾಸನ ರಸ್ತೆಯಲ್ಲಿ ಬಿಡಾಡಿ ದನಗಳು ಎಲ್ಲೆಂದರಲ್ಲಿ ಮಲಗುವುದರಿಂದ ಲಘು ಮತ್ತು ಭಾರಿ ವಾಹನ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಅನೇಕ ಅಪಘಾತಗಳು ಸಂಭವಿಸಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಪುರಸಭೆಯ ಪ್ರತಿ ಸಭೆಗಳಲ್ಲಿಯೂ ಬೀದಿ ನಾಯಿಗಳು, ಕೋತಿಗಳು, ಹಂದಿಗಳು ಹಾಗೂ ಬಿಡಾಡಿ ದನಗಳನ್ನು ಹಿಡಿದು ಸಾಗಿಸಿರುವ ಬಗ್ಗೆ ಲೆಕ್ಕ ನೀಡಲಾಗುತ್ತಿದೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದ್ದು, ಖರ್ಚು ಮಾತ್ರ ಆಗುತ್ತಲೇ ಇದೆ. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಪುರಸಭೆ ಕ್ರಮದ ವಿರುದ್ಧ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅಸಡ್ಡೆ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವೇ ಬಿಡಾಡಿ ದನಗಳ ಓಡಾಟವನ್ನು ನಿಷೇಧಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ. ಬಿಡಾಡಿ ದನಗಳ ಹಾವಳಿಯಿಂದಾಗಿ ಬೈಕ್ ಸವಾರರು, ಭಾರಿ ವಾಹನ ಚಾಲಕರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿರುವ ಅನೇಕ ನಿದರ್ಶನಗಳಿವೆ. ಇನ್ನಾದರೂ ಈ ಬಗ್ಗೆ ಪುರಸಭೆ ಗಮನ ಹರಿಸುವುದೇ. ಬಿಡಾಡಿ ದನಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಚಾಲಕರು, ಸಾರ್ವಜನಿಕರು ಪುರಸಭಾ ಆಡಳಿತವನ್ನು ಒತ್ತಾಯಿಸಿದ್ದಾರೆ.