ಗಣೇಶೋತ್ಸವ ಶಾಸ್ತ್ರೀಯವಾಗಿ ಆಚರಿಸಿ: ಹಿಂದೂ ಜನಜಾಗೃತಿ ಸಮಿತಿ
ಹಾಸನ: ತಪ್ಪು ತಪ್ಪು ಆಚರಣೆ ಬಿಟ್ಟು ಶಾಸ್ತ್ರೀಯ ಪದ್ಧತಿಯಲ್ಲಿ ಗಣೇಶೋತ್ಸವ ಆಚರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಹರ್ಷವರ್ಧನ ಶೆಟ್ಟಿ ಮಾತನಾಡಿ, ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ವ್ರತ, ಹಬ್ಬ, ಉತ್ಸವಗಳಿಗೆ ಅದರದೇ ಆದ ಶಾಸ್ತ್ರವಿದೆ. ಆದೇ ರೀತಿ ನಾವು ಶಾಸ್ತ್ರಾನುಸಾರವಾಗಿ ಆಚರಿಸಬೇಕು.
ಈ ಸಂದರ್ಭದಲ್ಲಿ ಗಣೇಶನ ತತ್ವವು 1 ಸಾವಿರ ಪಟ್ಟು ಪೃಥ್ವಿಯ ಮೇಲೆ ಬರುತ್ತದೆ. ಯಾವಾಗ ನಾವು ಶ್ರದ್ಧಾ ಭಕ್ತಿಯಿಂದ ಇದನ್ನು ಆಚರಣೆ ಮಾಡುತ್ತೇವೋ ಆಗ ಗಣೇಶನ ಕೃಪೆ ದೊರೆಯುತ್ತದೆ ಎಂದರು.
ಗಣಪತಿಯ ಮೂಲ ರೂಪ ಗಣಪತಿಯನ್ನು ಇಡುವ ಬದಲು ವಿಚಿತ್ರ ರೂಪದ, ಅಶಾಸ್ತ್ರೀಯ ಪದ್ಧತಿಯ ಗಣಪತಿಯನ್ನು (ಕಾರ್ಗಿಲ್ ಗಣಪತಿ, ಕಾಗದ ಗಣಪತಿ, ಕ್ರಿಕೆಟ್ ಆಡುವ ಗಣಪತಿ) ಮತ್ತು ಆವೆ ಮಣ್ಣಿನ ಗಣಪತಿಯ ಬದಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿಯನ್ನು ಇಡಲಾಗುತ್ತದೆ. ಗಣೇಶನ ಮಂಟಪ ಮತ್ತು ಮೆರವಣಿಗೆಯಲ್ಲಿ ಚಲನಚಿತ್ರಗೀತೆಗಳನ್ನು ಹಾಕಿ ಮದ್ಯಪಾನ ಮಾಡಿ ಅಶ್ಲೀಲವಾಗಿ ಕುಣಿಯಲಾಗುತ್ತದೆ.ದೇವರ ಮೇಲೆ ಭಕ್ತಿ ಭಾವ ಶ್ರದ್ಧೆ ಹೆಚ್ಚಿಸುವ ಬದಲು ಸಂಸ್ಕೃತಿ ಹೀನ ಕಾರ್ಯಕ್ರಮ ಮಾಡಲಾಗುತ್ತಿದೆ. ಇದನ್ನು ಬಿಟ್ಟು ಶಾಸ್ತ್ರೀಯ ಪದ್ಧತಿಯಲ್ಲಿ ಆಚರಿಸುವಂತೆ ಮನವಿ ಮಾಡಿದರು. ರಮೇಶ್ನಾಯಕ್, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಹೇಮಂತ್, ಭಾರತ್ ಸ್ವಾಭಿಮಾನ ಮಂಚ್ನ ಜಿಲ್ಲಾ ಪ್ರಭಾರಿ ಶೇಷಪ್ಪ, ಜ್ನಾನೇಶ್ವರ್ ಇದ್ದರು.