ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಮಶಿವಯ್ಯ ವರದಿ ಕರಾವಳಿ ಜಿಲ್ಲೆಗೆ ಮರಣಶಾಸನ: ಚಂದ್ರಕಾಂತ್

Rashmi Kasaragodu
Updated On : 7 Sept 2013, 11:55 am

ಕನ್ನಡಪ್ರಭ ವಾರ್ತೆ೤ ಹಾಸನ೤ ಸೆ. 7
ಎತ್ತಿನಹೊಳೆ ತಿರುವು ಯೋಜನೆಗೆ ಸಂಬಂಧಿಸಿದಂತೆ ಪರಮಶಿವಯ್ಯ ನೀಡಿರುವ ವರದಿಯು ಕರಾವಳಿ ಜಿಲ್ಲೆಗಳಿಗೆ ಮರಣ ಶಾಸನವಾಗಿದ್ದು, ಸರ್ಕಾರ ಈ ವರದಿಯನ್ನು ಕೈಬಿಡುವಂತೆ ಕರ್ನಾಟಕ ವನ್ಯಜೀವಿ ಕಾರ್ಯಪಡೆ ರಾಜ್ಯಾಧ್ಯಕ್ಷ ಚಂದ್ರಕಾಂತ್ ಒತ್ತಾಯಿಸಿದ್ದಾರೆ.
 ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನೀರಾವರಿ ಯೋಜನೆಗಳಲ್ಲಿ ಒಂದಾದ ಪಶ್ಚಿಮಘಟ್ಟದಲ್ಲಿ ಹರಿಯುವ ಎತ್ತಿನಹೊಳೆಯನ್ನು ತಿರುಚಿ ಬರಪೀಡಿತ ಜಿಲ್ಲೆಗಳಾದ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಸೇರಿದಂತೆ ಸುಮಾರು 9 ಜಿಲ್ಲೆಗಳಿಗೆ ಕುಡಿಯುವ ನೀರು ಯೋಜನೆಯನ್ನು ಜಾರಿಗೆ ತರಲು ಹೊರಟಿದೆ.
  2003ರಲ್ಲಿ ಪರಮಶಿವಯ್ಯ ಸಿದ್ದಪಡಿಸಿ ನೀಡಿದ ವರದಿಯನ್ನು ಕೇವಲ 20 ದಿನದಲ್ಲೇ ಅನುಮೋದಿಸಲಾಗಿದೆ. ಯಾವುದೇ ಚರ್ಚೆಗೆ ಒಳಪಡಿಸದೆ ಸದನದಲ್ಲಿ ಇದರ ಬಗ್ಗೆ ಸವಿಸ್ತಾರವಾಗಿ ವಿವರಣೆಯಾಗದೇ ಈ ಭಾಗದ ರೈತರ, ಜನರ, ಪರಿಸರವಾದಿಗಳ, ಮೀನುಗಾರರ ಗಮನಕ್ಕೆ ತರದೇ ಏಕಾಏಕಿ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದರ ಹಿಂದೆ ಕೆಟ್ಟ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
 ರಾಜಕಾರಣಿಗಳು, ಗುತ್ತಿಗೆದಾರರು, ಎಂಜಿಯರ್, ಮಧ್ಯವರ್ತಿಗಳು ಹಾಗೂ ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ಬೃಹತ್ ಪ್ರಮಾಣದ ಲಾಭವನ್ನು ಉಂಟು ಮಾಡುವ ದುರದ್ದೇಶದಿಂದಲೇ ಎತ್ತಿನ ಹೊಳೆ ಯೋಜನೆಯನ್ನು ಪ್ರಸ್ತಾಪಿಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಪರಮಶಿವಯ್ಯ ಪ್ರಕಾರ ಮಳೆಗಾಲದಲ್ಲಿ ನೇತ್ರಾವತಿಯು ಪ್ರತಿವರ್ಷ 464.67 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹೋಗುತ್ತಿದೆ.
 ಆ ಪೈಕಿ 142.46 ಟಿಎಂಸಿ ನೀರನ್ನು  ಬೆಂಗಳೂರೂ ಸೇರಿದಂತೆ ರಾಜ್ಯದ 9 ಜಿಲ್ಲೆಗಳಿಗೆ ನೀರು ಒದಗಿಸಬಹುದು ಎಂದು ಹೇಳಿರುವುದು ಅವೈಜ್ಞಾನಿಕ ಹಾಗೂ ಅವಾಸ್ತವಿಕವಾಗಿದೆ. ಇಂತಹ ಯೋಜನೆಯು ಭವಿಷ್ಯದ ದಿನಗಳಲ್ಲಿ ಉಳಿಯುವುದು ಸಾಧ್ಯವೇ ಇಲ್ಲ. ಸ್ವಷ್ಟವಾಗಿ ಹೇಳುವುದಾದರೆ ನೇತ್ರಾವತಿ ತಿರುವು ಯೋಜನೆಯನ್ನೇ ಜನರಲ್ಲಿ ಗೊಂದಲ ಸೃಷ್ಟಿಸಿ ಪಶ್ಚಿಮಘಟ್ಟದಲ್ಲಿ ಹರಿಯುವ ಎತ್ತಿನ ಹೊಳೆ ಯೋಜನೆ ಎಂದು ಹೆಸರಿಡಲಾಗಿದೆ ಎಂದು ನುಡಿದರು.
 ಇದಕ್ಕಾಗಿ ಸುಮಾರು 25 ಸಾವಿರ ಕೋಟಿ ರು.ಗಳು ಬೇಕೆಂದು ಅಂದಾಜಿಸಲಾಗಿದೆ. ಇದೊಂದು ಹಣದ ಹೊಳೆ ಯೋಜನೆಯಾಗಿದ್ದು, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ ಯೋಜನೆಗೆ ಮುಂದಾಗಿರುವುದು ಸರಿಯಲ್ಲ.
 ರಾಜ್ಯ ಸರ್ಕಾರವು ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕು. ಅದರಂತೆ ಸರ್ಕಾರಿ ಆದೇಶ ಹೊರಡಿಸಬೇಕು. ಪಶ್ಚಿಮಘಟ್ಟದ ವ್ಯಾಪ್ತಿಯ ಗಣಿಗಾರಿಕೆ ಮತ್ತು ಅರಣ್ಯ ಒತ್ತುವರಿಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಮ್ತುತ ಸರ್ಕಾರ ಪ್ರೊ. ಮಾಧವ್ ಗಾಡ್ಗಿಳ್ ವರದಿಯನ್ನು ಜಾರಿಗೆ ತಂದು ಅವರನ್ನು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರನ್ನಾಗಿ ನೇಮಿಸಬೇಕು. ಇಲ್ಲವಾದರೆ ಈ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕಾರ್ಯಪಡೆಯ ಟಿ.ಪಿ.ಮಂಜು, ರಂಗಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement