ಮತ್ತಷ್ಟು ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ಆಗ್ರಹ
ಅರಸೀಕೆರೆ: ಕೊಬ್ಬರಿ ಧಾರಣೆಯಿಂದ ಕಂಗಾಲಾಗಿದ್ದ ಬೆಳೆಗಾರರ ಹಿತ ಕಾಯಲು ಆರಂಭಿಸಲಾದ ನಾಫೆಡ್ ಖರೀದಿ ಕೇಂದ್ರದ ಮೂಲಕ ಕೊಬ್ಬರಿ ಮಾರಾಟ ಮಾಡಲು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ವಾಹನಗಳನ್ನು ಸಾಲುಗಟ್ಟಿ ನಿಂತಿವೆ.
ಎರಡು-ಮೂರು ದಿನ ಕಾದರೂ ಕೊಬ್ಬರಿ ಮಾರಾಟ ಮಾಡಲು ಸಾಧ್ಯವಾಗದೆ ಇರುವುದರಿಂದ ಕೊಬ್ಬರಿ ಕೇಂದ್ರವನ್ನು ಮುಚ್ಚದೆ ಇನ್ನಷ್ಟು ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿದ್ದಾರೆ.
ನಾಫೆಡ್ ಖರೀದಿ ಕೇಂದ್ರದ ಮೂಲಕ ಕಳೆದ ಒಂದೂವರೆ ತಿಂಗಳಿನಿಂದಲೂ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ
6050 ರು. ದರದಲ್ಲಿ ಖರೀದಿ ಮಾಡಲಾಗುತ್ತಿದ್ದು ಸೆ.16 ಖರೀದಿಗೆ ಕಡೆಯ ದಿನಾಂಕವೆಂದು ಘೋಷಿಸಲಾಗಿದ್ದು ಇದರಿಂದಾಗಿ ಆತಂಕಕ್ಕೆ ಒಳಗಾಗಿರುವ ಕೊಬ್ಬರಿ ಬೆಳೆಗಾರ ತಮ್ಮ ಕೊಬ್ಬರಿ ಮಾರಾಟ ಮಾಡಲು ರಾತ್ರಿಯೇ ಟ್ರ್ಯಾಕ್ಟರ್ ಹಾಗೂ ಬಾಡಿಗೆ ವಾಹನಗಳಲ್ಲಿ ಆಗಮಿಸುತ್ತಿರುವುದು ಸಾಮಾನ್ಯವಾಗಿದೆ. ಮುಂಗಾರು ಹಂಗಾಮಿನ ಕೊಬ್ಬರಿ ಈಗ ಮಾರಾಟಕ್ಕೆ ರೈತರಿಗೆ ಲಭ್ಯವಾಗುತ್ತಿದೆ.
ಈವರೆಗೆ ಸುಮಾರು 30 ಸಾವಿರ ಕ್ವಿಂಟಾಲ್ಗೂ ಹೆಚ್ಚು ಕೊಬ್ಬರಿಯನ್ನು ಕೊಳ್ಳಲಾಗಿದ್ದು ಅಂದಾಜಿನ ಪ್ರಕಾರ ಶೇ.60ರಷ್ಟು ಕೊಬ್ಬರಿ ಮಾರಾಟವಾಗಿದ್ದು ಇನ್ನೂ ಶೇ.40ರಷ್ಟು ಕೊಬ್ಬರಿ ರೈತರ ಬಳಿಯೇ ಇರುವಂತಹ ಸಂದರ್ಭದಲ್ಲಿ ನಾಫೆಡ್ ಖರೀದಿ ಕೇಂದ್ರ ಸ್ಥಗಿತಗೊಳಿಸುವ ಬಗ್ಗೆ ಕೇಳಿಬರುತ್ತಿರುವುದು ಬೆಳೆಗಾರರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಖರೀದಿ ಕೇಂದ್ರ ಮುಚ್ಚಲಿದ್ದಾರೆ ಎಂಬ ಊಹಾಪೋಹಗಳಿಂದಾಗಿ ಸಹಜವಾಗಿಯೇ ದಿಗಿಲುಗೊಳ್ಳುವಂತಹ ಸ್ಥಿತಿ ರೈತನದ್ದಾಗಿದೆ. ಈವರೆಗೆ ಸತತ ಬರಗಾಲದಿಂದ ತೇವಾಂಶ ಕೊರತೆಯಿಂದ ತೆಂಗಿಗೆ ತಗುಲಿದ ರೋಗಭಾದೆಗಳಿಂದ ಸಂಕಷ್ಟಕ್ಕೆ ಸಿಲುಕಿ ತೆಂಗು ಸುಳಿಬಿದ್ದು ನಾಶವಾಗಿ ಬದುಕು ದುಸ್ತರವಾಗಿದೆ.
ಕೊಬ್ಬರಿ ಧಾರಣೆ ಇಳಿಮುಖದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರ ನಾಫೆಡ್ ಮೂಲಕ ದೊರೆಯುತ್ತಿದ್ದ ಅಲ್ಪ ಸ್ವಲ್ಪ ಲಾಭದ ನಿರೀಕ್ಷೆಯಲ್ಲಿ ಗಣಪನ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ ಈಗ ಕೊಬ್ಬರಿ ಖರೀದಿ ಕೇಂದ್ರ ಮುಚ್ಚುತ್ತಿರುವುದರಿಂದ ಅನ್ನದಾತನ ಬದುಕು ಬೆಂಕಿಯಿಂದ ಬಾಣಲಿಗೆ ಬಿದ್ದಂತಾಗಿದೆ.
ಖರೀದಿ ಕೇಂದ್ರ ಮುಚ್ಚುವ ಮುನ್ನ ಶಾಸಕ ಕೆ.ಎಂ.ಶಿವಲಿಂಗೇಗೌಡ, ಎಪಿಎಂಸಿ ಅಧ್ಯಕ್ಷ ಮುರುಂಡಿ ಶಿವಯ್ಯ, ಸದಸ್ಯರು ಹಾಗೂ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ ಸೇರಿದಂತೆ ಇನ್ನಿತರ ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚರಿಕೆ ವಹಿಸಿ ಕೇಂದ್ರ ಮುಚ್ಚದಂತೆ ಕ್ರಮ ಕೈಗೊಂಡು ನಾಫೆಡ್ ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶಾಶ್ವತವಾಗಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಬೇಕಿದೆ ಹಾಗೂ ಸದ್ಯದ ಮಟ್ಟಿಗೆ ದಿನಾಂಕವನ್ನು ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕಿನ ತೆಂಗು ಬೆಳೆಗಾರರು ಒತ್ತಾಯಿಸಿದ್ದಾರೆ.