ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಬೇಕು ರು. 25 ಸಾವಿರ ಕೋಟಿ
ಹಾಸನ: ರಾಜ್ಯ ಹೆದ್ದಾರಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು 25 ಸಾವಿರ ಕೋಟಿ ರು. ಮತ್ತು ಜಿಲ್ಲೆಗಳ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಅವಶ್ಯವಿದೆ. ಆದರೆ ಬಜೆಟ್ನಲ್ಲಿ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ನಿಗದಿ ಮಾಡಿರುವುದು 2 ಸಾವಿರ ಕೋಟಿ ರುಪಾಯಿ. ಹೀಗಾದರೆ ಮಳೆಗಾಲದ ನಂತರದಲ್ಲಿ ರಸ್ತೆಗಳ ಅಭಿವೃದ್ಧಿ ಪಡಿಸುವುದು ಹೇಗೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ 7254 ಕಿಮೀ ರಾಜ್ಯ ಹೆದ್ದಾರಿ ರಸ್ತೆಗಳಿವೆ. ಅವುಗಳ ಅಭಿವೃದ್ಧಿಗೆ 25 ಸಾವಿರ ಕೋಟಿ ರು. ಬೇಕಾದರೆ, ಜಿಲ್ಲೆಗಳ ಮುಖ್ಯ ರಸ್ತೆಗಳು 50 ಸಾವಿರ ಕಿ.ಮೀ ಇದೆ. ಅವುಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಬೇಕು. ಆದರೆ ಬಜೆಟ್ನಲ್ಲಿ ನಿಗದಿ ಮಾಡಿರುವುದು ಕೇವಲ 2 ಸಾವಿರ ಕೋಟಿ ರುಪಾಯಿ. ಅಲ್ಲದೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ 1300 ಕೋಟಿ ರು. ಬಿಲ್ ಪಾವತಿಸಬೇಕಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ವಸ್ತು ಸ್ಥಿತಿ ಹೀಗಿದೆ. ಆದರೂ ಮಳೆಗಾಲದ ನಂತರ ರಾಜ್ಯ ಹೆದ್ದಾರಿ ಮತ್ತು ಜಿಲ್ಲೆಯ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಟೀಕಿಸಿದರು.
ಕೇಂದ್ರ ತಂಡ ಬಂದಿದ್ದೇ ಸರ್ಕಾರಕ್ಕೆ ಗೊತ್ತಿಲ್ಲ: ತುಮಕೂರು, ಹಾಸನ, ಮಂಡ್ಯ ಮತ್ತಿತರ ಕಡೆ 4.91 ಲಕ್ಷ ಹೆಕ್ಟೇರ್ನಲ್ಲಿ ತೆಂಗು ಬೆಳೆಯಲಾಗಿದೆ. ಅಲ್ಲಿಂದ 5.28 ಲಕ್ಷ ಮಿಲಿಯನ್ ತೆಂಗಿನಕಾಯಿಗಳು ಉತ್ಪಾದನೆಯಾಗುತ್ತಿತ್ತು. ಈಗ ಶೇ. 50 ರಷ್ಟು ತೆಂಗು ನಾಶವಾಗಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದರು. ಆಗ ಕೇಂದ್ರ ಕೃಷಿ ಸಚಿವಾಲಯದ ವಿಜ್ಞಾನಿ ಮತ್ತು ಉನ್ನತಾಧಿಕಾರಿಗಳು ತುಮಕೂರು, ಹಾಸನ ಜಿಲ್ಲೆಗೆ ಬಂದು ಭೇಟಿ ನೀಡಿದ್ದರು. ನಂತರ ಕೇಂದ್ರ ತಂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತೆಂಗು ಎಷ್ಟು ನಷ್ಟವಾಗಿದೆ ಎಂಬ ವರದಿ ಕಳುಹಿಸುವಂತೆ ಸೂಚಿಸಿದೆ. ಈ ವಿಚಾರ ರಾಜ್ಯ ಸರ್ಕಾರಕ್ಕೆ ಸರಿಯಾಗಿ ಗೊತ್ತಿಲ್ಲ. ಇದು ರೈತ ಪರ ಸರ್ಕಾರದ ನಡವಳಿಕೆಯಲ್ಲ ಎಂದು ಟೀಕಿಸಿದರು.