ಜಿಲ್ಲಾದ್ಯಂತ ಗಣೇಶ ಮಾರಾಟ ಭರಾಟೆ
ಕನ್ನಡಪ್ರಭ ವಾರ್ತೆ ಹಾಸನ ಸೆ. 8
ಜಿಲ್ಲಾದ್ಯಂತ ಜನತೆ ಗೌರಿ ಗಣೇಶ ಹಬ್ಬಕ್ಕೆ ಸಂಭ್ರಮದ ಸಿದ್ದತೆ ನಡೆಸಿರುವಾಗಲೇ ವಿಘ್ನ ನಿವಾರಕ ಗಣೇಶ ಕಡುಬಿನ ಜೊತೆಗೆ ಮಳೆಯನ್ನೂ ತಂದಿದ್ದಾನೆ. ಭಾನುವಾರ ಮಧ್ಯಾಹ್ನ ಮಳೆ ಸುರಿಯಿತು. ಮಳೆಯನ್ನು ಲೆಕ್ಕಿಸದೇ ಜನತೆ ಸಡಗರ, ಸಂಭ್ರಮದಿಂದ ಗೌರಿ ಹಬ್ಬದ ಆಚರಿಸಿದರಲ್ಲದೆ, ಸೋಮವಾರ ಗಣೇಶನ ಹಬ್ಬ ಭರ್ಜರಿಯಾಗಿ ಆಚರಿಸಲು ಸಿದ್ದರಾಗಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸಿ ತಮ್ಮ ತಮ್ಮ ಶಕ್ತಾನುಸಾರ ಹಬ್ಬದ ಸಂಪ್ರದಾಯ ಮೆರೆದಿದ್ದಾರೆ. ಅಂತೂ ಗೌರಿ ಮತ್ತು ಗಣೇಶ ಹಬ್ಬದ ವ್ಯಾಪಾರ ವಹಿವಾಟು ಜೋರು ನಡೆದಿದೆ. ಹಾಗೆಯೇ ಗಣೇಶ, ಗೌರಿ ವಿಗ್ರಹಗಳ ಮಾರಾಟವೂ ಬಿರುಸಿನಿಂದಲೇ ನಡೆಯಿತು.
ಹೊಳೆನರಸೀಪುರ ವರದಿ: ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸುವ ಗೌರಿ ಗಣೇಶ ಹಬ್ಬದಲ್ಲಿ ಈ ಬಾರಿ ಗಣೇಶನೇ ದುಬಾರಿ, ಹಣ್ಣು ತರಕಾರಿಗಳ ಬೆಲೆ ಕೂಡಾ ದುಪ್ಪಟ್ಟು, ಹೂವಿನ ರೇಟು ಕೂಡ ಕಡಿಮೆಯೇನಿಲ್ಲ, ಅಂತೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ತಮ್ಮ ಶಕ್ತ್ಯಾನುಸಾರವಾಗಿ ಹಬ್ಬವನ್ನು ಆಚರಿಸಲು ಜನರು ಮುಂದಾಗಿದ್ದಾರೆ.
ದಿನೇ ದಿನೇ ಗಗನಕ್ಕೇರುತ್ತಿರುವ ಎಲ್ಲಾ ಅಗತ್ಯ ವಸ್ತುಗಳಂತೆಯೇ ಗಣೇಶ ಮೂರ್ತಿ ಬೆಲೆ ಕೂಡಾ ಈ ಬಾರಿ ಗಗನಕ್ಕೇರಿದೆ. ಗಣಪತಿ ನಿರ್ಮಾಣಕ್ಕೆ ಬೇಕಾಗುವ ಮಣ್ಣಿನ ಲಭ್ಯತೆಯ ಕೊರತೆ, ದುಬಾರಿಯಾದ ಬಣ್ಣದ ಬೆಲೆ, ಸಾಗಾಣಿಕೆ ವೆಚ್ಚ, ಕೆಲಸಗಾರರ ಕೂಲಿ ಎಲ್ಲವೂ ಹೆಚ್ಚಿರುವ ಕಾರಣದಿಂದಾಗಿ ಈ ಬಾರಿ ಗಣೇಶೋತ್ಸವದಲ್ಲಿ ಗಣೇಶನೇ ದುಬಾರಿ.
ಇನ್ನು ಹಣ್ಣು ತರಕಾರಿಗಳ ಬೆಲೆಯಂತೂ ಬಡವರಿಗಲ್ಲ ಎಂಬಂತಾಗಿದ್ದು, ಯಾವುದೇ ವಸ್ತುಗಳೂ ಕೂಡ ಇಂದಿನ ದಿನದಲ್ಲಿ ಅಗ್ಗಕ್ಕೆ ಸಿಗುವುದು ದುಸ್ತರವಾಗಿದೆ. ದೊಡ್ಡದಾಗಿ ಹಬ್ಬ ಮಾಡಬೇಕು ಎಂದುಕೊಂಡವರೆಲ್ಲಾ ಬೆಲೆ ದುಬಾರಿಯಿಂದಾಗಿ ತಕ್ಕಮಟ್ಟಿಗೆ ಶಾಸ್ತ್ರಕ್ಕಾಗಿ ಶಾಸ್ತ್ರೋಕ್ತವಾಗಿ ಮಾಡಿದರೆ ಸಾಕು ಎಂಬಂತೆ ದುಬಾರಿ ಬೆಲೆ ಕೊಟ್ಟು ಹೂವು ಕೊಳ್ಳುವ ಬದಲಿಗೆ ತುಳಸಿಯನ್ನಾದರೂ ಕೊಳ್ಳಲು ಹೋದಲ್ಲಿ ಅದೂ ಕೂಡ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಬೆಲೆ ದುಬಾರಿ ಹಾಗೂ ಪೊಲೀಸರ ಮುನ್ನೆಚ್ಚರಿಕೆಯ ಶಿಸ್ತುಕ್ರಮಗಳ ಭೀತಿ ಹಾಗೂ ಸಂಘಟನೆಯ ಕೊರತೆಯಿಂದಾಗಿ ಹಾದಿ ಬೀದಿಗಳಲ್ಲಿ, ಗಲ್ಲಿ-ಓಣಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಹಾವಳಿ ಈ ಬಾರಿ ಪಟ್ಟಣದಲ್ಲಿ ಅಷ್ಟಾಗಿ ಕಂಡುಬಾರದಿರುವುದು ವಿಶೇಷ.
ಹಬ್ಬದ ಸಡಗರ-ಸಂಭ್ರಮದಲ್ಲಿ ಅಗತ್ಯ ವಸ್ತುಗಳ ಜೊತೆಗೆ ವಿಶೇಷವಾಗಿ ಹೆಣ್ಣುಮಕ್ಕಳು ಹೊಸ ಬಟ್ಟೆಗಳು, ಬಳೆ ಹಾಗೂ ಅಲಂಕಾರಿಕ ಸಾಮಗ್ರಿಗಳನ್ನು ಕೊಳ್ಳಲು ಮಾರುಕಟ್ಟೆಗೆ ಮುಗಿಬಿದ್ದ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪಾರದ ಕೇಂದ್ರ ಸ್ಥಳಗಳಾದ ಸುಭಾಷ್ ಚೌಕ ಪೇಟೆ ಮುಖ್ಯ ರಸ್ತೆ ಹಾಗೂ ಗಾಂಧಿ ವೃತ್ತದಲ್ಲಿ ಜನದಟ್ಟಣೆ ಅಧಿಕವಾಗಿ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಯಿತು.
ಬೆಲೆ ಹೇಗೆ ಇರಲಿ, ಎಷ್ಟೇ ಏರಲಿ ಹಬ್ಬ ಮಾಡಲು ಅಡ್ಡಿಯಿಲ್ಲ ಎಂಬಂತೆ ಜನರು ಮಾರುಕಟ್ಟೆಗೆ ಮುಗಿಬಿದ್ದಿದ್ದ ಸಮಯದಲ್ಲಿ ಬಿರುಸಿನ ವ್ಯಾಪಾರ ನಡೆಯುವ ಸಂದರ್ಭದಲ್ಲಿಯೇ, ಇದ್ದಕ್ಕಿದ್ದಂತೆಯೇ ಮಧ್ಯಾಹ್ನ ಸುರಿಯಲು ಆರಂಭಿಸಿದ ಮಳೆಯಿಂದಾಗಿ ವ್ಯಾಪಾರಿಗಳ ಮುಖದಲ್ಲಿಯೇ ಮೋಡಕವಿದ ವಾತಾವರಣ ನಿರ್ಮಾಣವಾಗಿ ವರ್ಷಕ್ಕೊಂದು ಬಾರಿ ಹಬ್ಬದ ವ್ಯಾಪಾರವನ್ನು ಹಾಳುಮಾಡಲೆಂದೇ ಮಳೆ ಬರುತ್ತಿದೆ ಎನ್ನುವ ದುಗುಡ ಇಲ್ಲಿನ ವ್ಯಾಪಾರಿಗಳ ಮುಖದಲ್ಲಿ ಮನೆಮಾಡಿತ್ತು.
ಸಕಲೇಶಪುರ ವರದಿ: ತುಂತುರು ಮಳೆಯ ನಡುವೆಯು ಗೌರಿಗಣೇಶ್ ಹಬ್ಬದ ವ್ಯಾಪಾರ ಪಟ್ಟಣದಲ್ಲಿ ಭರದಿಂದ ಸಾಗಿತ್ತು. ಪಟ್ಟಣದ ಹಳೇ ಬಸ್ ನಿಲ್ದಾಣ ಸುತ್ತಮುತ್ತಲಿನ ಪುಟ್ಪಾತ್ ಸೇರಿದಂತೆ ಎಲ್ಲೇಡೆ ಹೂವು,ಹಣ್ಣು,ಬಾಳೆಎಲೆ,ಬಾಳೆದಿಂಡು,ತೆಂಗಿನಕಾಯಿ ಹಾಗೂ ತರಕಾರಿ ವ್ಯಾಪಾರ ಬಿರುಸಾಗಿ ನಡೆದರೆ,ಬಟ್ಟೆ ಹಾಗೂ ಚಿನ್ನದ ಅಂಗಡಿಗಳು ಗ್ರಹಾಕರಿಂದ ತುಂಬಿಹೋಗಿದ್ದವು. ಹಬ್ಬವನ್ನು ಸಂಭ್ರಮಾದಿಂದ ಆಚರಿಸಲು ಸಿದ್ದಗೊಂಡಿರುವ ಜನರಿಗೆ ಧಾರಣೆಯ ಬೆಲೆ ತಾಕದಿದ್ದು ಇನ್ನೊಂದು ವಿಶೇಷವಾದರೆ,ಪಟ್ಟಣದ ಬಹುತೇಕ ರಸ್ತೆಗಳು ಜನರು ಹಾಗೂ ವಾಹನಗಳಿಂದ ಕಿಕ್ಕಿರಿದು ತುಂಬಿದ್ದವು. ಆದರೆ ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ಮಳೆ ಶನಿವಾರ ಜಡಿಮಳೆಯ ರೂಪದಲ್ಲಿ ಸುರಿಯುತ್ತಿದ್ದ ಪರಿಣಾಮ ಗ್ರಾಹಕರು ವಸ್ತುಗಳನ್ನು ಕೊಳ್ಳಲು ಪರದಾಡಿದ ಘಟನೆಯು ನಡೆಯಿತು.
ಆಲೂರು ವರದಿ: ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು ಈ ಬಾರಿಯ ಗೌರಿಗಣೇಶನ ಹಬಕ್ಕೆ ಹಿಂದೆಂದಿಗಿಂತ ಹೆಚ್ಚಿನ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಶ್ರೀ ಸಾಮಾನ್ಯ ಅದರಲ್ಲೂ ಕೂಲಿ ಕಾರ್ಮಿಕರ ಪಾಲಿಗೆ ಸಾಲ ಮಾಡಿಯಾದರೂ ಹಬ್ಬ ಮಾಡುವ ಅನಿವಾರ್ಯತೆ ಎದುರಾಗಿದೆ.
ತರಕಾರಿ, ಸೊಪ್ಪುಗಳು,ಅಡುಗೆಎಣ್ಣೆ,ಹೂ ಹಣ್ಣುಗಳು ಯಾವುದರ ಬೆಲೆಯೂ ಕೈ ಗೆಟುಕುವಂತಿಲ್ಲ ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಹೂವು ಹಣ್ಣು,ತರಕಾರಿ ಸೇರಿದಂತೆ ದಿನಸಿ ಪದಾರ್ಥ ಕೊಳ್ಳಲು ಹೆಚ್ಚಿನ ಜನಜಂಗುಳಿ ಪರಿಣಾಮ ಪಟ್ಟಣದ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ವ್ಯಾಪಾರಿಗಳ ಸಂಖ್ಯೆಯೂ ಈ ಬಾರಿ ಹೆಚ್ಚಿದ್ದ ಕಾರಣ ಕಿಷ್ಕಿಂದೆಯಂತಹ ಮಾರುಕಟ್ಟೆಯಲ್ಲಿ ಸ್ಥಳಕ್ಕಾಗಿ ಮಾತಿನ ಚಕಮಕಿ ನಡೆದವು. ಮಧ್ಹ್ಯಾನದ ನಂತರ ಮಳೆ ಸುರಿದರೂ ವ್ಯಾಪಾರ ವಹಿವಾಟು ಭರದಿಂದಲೇ ಸಾಗಿತ್ತು.