ಮನೆ ಬಾಡಿಗೆ ಭತ್ಯೆ ಅವೈಜ್ಞಾನಿಕ: ಸಂಘದ ನಿರ್ದೇಶಕ ಸುರೇಶ್
ಹಾಸನ: ಸರ್ಕಾರಿ ನೌಕರರಿಗೆ ನೀಡುತ್ತಿರುವ ಮನೆ ಬಾಡಿಗೆ ಭತ್ಯೆ ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಚ್.ಟಿ. ಸುರೇಶ್ ತಿಳಿಸಿದ್ದಾರೆ.
ಬಾಡಿಗೆ ಭತ್ಯೆ ಮಲತಾಯಿ ಧೋರಣೆ ಸರಿಪಡಿಸಲು ಕೋರಿ ನ್ಯಾಯಾಲಯಕ್ಕೆ ಸರ್ಕಾರದ ವಿರುದ್ಧವೇ ದಾವೇ ಹೂಡಲು ಅನೇಕ ನೌಕರರು ಸಿದ್ಧರಿರುವ ಈ ಹೊತ್ತಿನಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾಗಿರುವ ಬಾಗೂರು ಮಂಜೇಗೌಡರು, ಬಾಡಿಗೆ ಭತ್ಯೆ ನಿಗದಿಪಡಿಸುವ ಹಂತದಲ್ಲಿ ಆಗಿರುವ ಅನ್ಯಾಯವನ್ನು 7ನೇ ವೇತನ ಆಯೋಗದಲ್ಲಿ ಪ್ರಶ್ನಿಸಿ ಸರಿಪಡಿಸಲು ಯತ್ನಿಸಲಾಗುವುದು ಎಂದು ರಾಜಕಾರಣಿಗಳ ಹಾಗೆ ಭರವಸೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
2010ರಲ್ಲಿ ಜಾರಿಗೆ ತರಬೇಕಾದ ವೇತನ ಪರಿಷ್ಕರಣೆಯನ್ನು 2 ವರ್ಷ ತಡವಾಗಿ 2012ರ ಏಪ್ರಿಲ್ನಲ್ಲಿ ಜಾರಿಗೆ ತಂದಿದೆ. ಅಂತಹದ್ದರಲ್ಲಿ 7ನೇ ವೇತನ ಆಯೋಗ ನೇಮಕಗೊಂಡು ಜಾರಿಗೆ ತರಲು ಅದೆಷ್ಟು ವರ್ಷಗದಳು ಹಿಡಿಯಬಹುದು ಎಂದು ಪ್ರಶ್ನಿಸಿದ್ದಾರೆ.
ಮನೆ ಬಾಡಿಗೆ ಭತ್ಯೆಯನ್ನು ಬೆಂಗಳೂರಿಗೆ ಶೇ. 30, ಮೆಟ್ರೋ ಪಾಲಿಥಿನ್ ಸ್ಕೀಂಗಳಿಗೆ ಶೇ. 15 ಹಾಗೂ ಜಿಲ್ಲಾ ಕೇಂದ್ರದದ ನೌಕರರಿಗೆ ಶೇ. 10 ಹಾಗೂ ಇತರೆ ಸ್ಥಳಗಳಿಗೆ (ಅಂದರೆ ಜಿಲ್ಲಾ ಕೇಂದ್ರ ಬಿಟ್ಟು) ಶೇ. 7 ರಷ್ಟು ಎಚ್ಆರ್ಎ ಅನ್ನು ಸರ್ಕಾರ ನೀಡುತ್ತಿದೆ. ಹಾಸನದಂತಹ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಮನೆ ಬಾಡಿಗೆ ದರ 4000 ರು.ನಿಂದ ಪ್ರಾರಂಭವಾಗುತ್ತದೆ. ಒಬ್ಬ ನೌಕರನ ವೇತನ 15000 ರು ಎಂದಿಟ್ಟುಕೊಂಡರೆ ಹಾಲಿ ಆತ ಪಡೆಯುತ್ತಿರುವ ಮನೆ ಬಾಡಿಗೆ ಭತ್ಯೆ ಕೇವಲ 1500 ರು. ಉಳಿದ 2500 ರು. ಎಲ್ಲಿಂದ ಭರಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಈ ನೀತಿಯನ್ನು ಸರ್ಕಾರ ಕೈ ಬಿಟ್ಟು ಕನಿಷ್ಠ ಆಯಾ ನಗರಗಳಲ್ಲಿನ ಕನಿಷ್ಠ ಬಾಡಿಗೆ ದರವನ್ನು ಅಧ್ಯಯನ ಮಾಡಿ ಸರ್ವೇ ನಡೆಸಿ ನಿಗದಿಪಡಿಸುವುದು ನೌಕರರಿಗೆ ನ್ಯಾಯ ದೊರಕಿಸಿಕೊಟ್ಟಂತೆ ಆಗುತ್ತದೆ ಎಂದು ತಿಳಿಸಿದ್ದಾರೆ.