ಮಾಡಾಳುನಲ್ಲಿ ಸ್ವರ್ಣಗೌರಿ ಜಾತ್ರೆ
ಕ.ಪ್ರ. ವಾರ್ತೆ ಅರಸೀಕೆರೆ ಸೆ. 8
ನಾಡಿನೆಲ್ಲೆಡೆ ಗಣೇಶೋತ್ಸವದ ಸಂಭ್ರಮವಾದರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿಗೆ ಪ್ರಥಮ ಆದ್ಯತೆ. ಇಲ್ಲಿ 9 ದಿನ ನಡೆಯುವ ಗೌರಮ್ಮನ ಜಾತ್ರೆಗೆ ನಾಡಿನೆಲ್ಲೆಡೆಯಿಂದ ಲಕ್ಷಾಂತರ ಜನರು ಬಂದು ತಮ್ಮ ಭಕ್ತಿ ಸಮರ್ಪಿಸುವುದು ದುಗ್ಗಳದ ಹರಕೆ ತೀರಿಸುವುದು ವಿಶೇಷ.
ಹೊಯ್ಸಳರ ನಾಡು, ಶಿಲ್ಪಕಲೆಗಳ ಬೀಡು, ಕಲ್ಪವೃಕ್ಷಗಳ ತವರೂರು ಎನಿಸಿದ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಪ್ರತಿ ವರ್ಷವೂ ನಾಡಿನ ಎಲ್ಲೆಡೆ ಜರುಗುವ ಜಾತ್ರೆಗಳಿಗಿಂತ ವಿಭಿನ್ನ, ವೈಶಿಷ್ಟವಾಗಿ ಶಕ್ತಿ ದೇವತೆ ಶ್ರೀ ಸ್ವರ್ಣಗೌರಿ ದೇವಿ ಕರ್ಪೂರ ಪ್ರಿಯೆ. ಭಕ್ತರು ಸಲ್ಲಿಸುವ ಕರ್ಪೂರದ ಬೆಲೆ ಕೋಟಿಗೂ ಹೆಚ್ಚಾಗಬಹುದು. ದೇವಿಗೆ ಬರುವ ಮಡ್ಲಕ್ಕಿಯಿಂದ ಭಕ್ತರಿಗೆ ವರ್ಷಪೂರ್ತಿ ಪ್ರತಿನಿತ್ಯ ಅನ್ನ ದಾಸೋಹ ನಡೆಯುತ್ತದೆ ಎಂದರೆ ಅದರ ಪ್ರಮಾಣ ಎಷ್ಟಿರಬಹುದೆಂದು ಊಹಿಸಬಹುದು.
ಪ್ರತಿ ವರ್ಷ ಬಾದ್ರಪದ ಮಾಸದ ತದಿಗೆ ದಿನ ಗ್ರಾಮದ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಹಾರನಹಳ್ಳಿ ಕೋಡಿಮಠ ಸ್ವಾಮೀಜಿ ಅವರಿಂದ ಪ್ರತಿಷ್ಠಾಪಿಸಲ್ಪಡುವ ಸ್ವರ್ಣಗೌರಿ ದೇವಿಗೆ ಒಂಭತ್ತು ದಿನಗಳ ಕಾಲ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸಮಯಕ್ಕೆ ಸರಿಯಾಗಿ ತ್ರಿಕಾಲ ಪೂಜೆ ಧಾರ್ಮಿಕ ವಿಧಿ ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನಡೆಯುತ್ತದೆ.
ಸೆ.8 ಭಾನುವಾರ ಬೆಳಿಗ್ಗೆ ಗೌಡರ ಬಾವಿಯ ಗೌರಿದೇವಿ ಮೂಲ ಸನ್ನಿಧಿಯಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ ಪೂಜೆಯೊಂದಿಗೆ ಆರಂಭಗೊಂಡು ಮಧ್ಯಾಹ್ನ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಒಂಭತ್ತು ದಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ.
ಹಿನ್ನೆಲೆ: 148 ವರ್ಷಗಳ ಹಿಂದೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಪರಮ ತಪಸ್ವಿ ಹಾಗೂ ಮಹಾ ಮಹಿಮರಾದ ಶಿವಲಿಂಗ ಸ್ವಾಮೀಜಿ ತುಮಕೂರು ಜಿಲ್ಲೆ ಸಂಪಿಗೆ ಗ್ರಾಮಕ್ಕೆ ಗೌರಿ ಮಹೋತ್ಸವಕ್ಕೆ ಹೋಗಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಹೆಣ್ಣುಧ್ವನಿ ಗುರುಗಳೇ ನಾನು ಬರುತ್ತೇನೆ ಎಂದು ಕರೆದಂತಾಗಿ ಅದನ್ನು ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಸ್ವಾಮೀಜಿ ತಮ್ಮ ಕಮಂಡಲದಲ್ಲಿ ಅದನ್ನು ತುಂಬಿಕೊಂಡು ಮಾಡಾಳು ಗ್ರಾಮಕ್ಕೆ ಬಂದು ಅದನ್ನು ತಮ್ಮ ಶಿಷ್ಯರಾದ ಮುದ್ದೇಗೌಡರ ಬಾವಿಯಲ್ಲಿ ವಿಸರ್ಜಿಸಿ ಗ್ರಾಮದಲ್ಲಿ ಪ್ರತಿ ವರ್ಷ ಗೌರಮ್ಮನನ್ನು ಪ್ರತಿಷ್ಠಾಪಿಸಬೇಕು ಹಾಗೂ ಗೌರಮ್ಮನ ಮೂರ್ತಿ ಇದೇ ಆಕಾರದಲ್ಲಿರಬೇಕೆಂದು ದಾರದಲ್ಲಿ ಗುರುತು ಮಾಡಿ ಕೊಟ್ಟಿರುವ ದಾರದ ಆಧಾರದ ಮೇಲೆ ಇಂದಿಗೂ ಗೌರಮ್ಮನ ವಿಗ್ರಹವನ್ನು ಮಾಡಾಳು ಗ್ರಾಮದ ಚನ್ನಾಚಾರ್ ವಂಶಸ್ಥರು ತಯಾರಿಸುತ್ತಿದ್ದಾರೆ.
ಗೌರಮ್ಮನನ್ನು ಪ್ರತಿಷ್ಠಾಪಿಸಿದ ಮೊದಲ ವರ್ಷ ಸ್ವಾಮೀಜಿ ತಮ್ಮ ಬರಿಗೈಯಲ್ಲಿ ವಜ್ರದ ಮೂಗುತಿಯನ್ನು ಆಶೀರ್ವದಿಸಿ ದೇವಿಗೆ ವಜ್ರದ ಮೂಗುತಿಯನ್ನು ಸೃಷ್ಟಿಸಿ ನೀಡಿದ್ದರು. ಈ ಮೂಗುತಿಯನ್ನು ಧರಿಸಿದ ನಂತರ ದೇವಿಗೆ ದೈವೀ ಕಳೆ ಹಾಗೂ ದೈವೀ ಶಕ್ತಿ ಬರುತ್ತದೆ ಆನಂತರ ಪವಾಡಗಳು ನಡೆಯುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ಮೂಗುತಿ ಮಹಿಮೆಯಿಂದ ಸೂರ್ಯ ಮುಳುಗಿ ಮತ್ತೆ ಉದಯಿಸುವ ವೇಳೆಗೆ ಈ ಕುಗ್ರಾಮ ಲಕ್ಷಾಂತರ ಭಕ್ತರನ್ನು ಹೇಗೆ ಆಕರ್ಷಿಸುತ್ತದೆ ಎಂಬುದೇ ಅಚ್ಚರಿಯ ಸಂಗತಿ.
ಜಾತ್ರಾ ಮಹೋತ್ಸವದಲ್ಲಿ ಭಕ್ತಿಯೇ ಮಹಾ ಪ್ರಧಾನ. ಗೌರಿದೇವಿ ಯಾವುದೇ ಆಡಂಬರ ಬಯಸುವುದಿಲ್ಲ, ಹಾಗೆಯೇ ಬೆಳ್ಳಿ, ಬಂಗಾರ ಛತ್ರಿ ಚಾಮರಗಳಿಲ್ಲ. ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಹರಕೆ ಮಾಡಿಕೊಳ್ಳುವ ಸೀರೆ, ಅಕ್ಕಿ ಹಾಗೂ ಕರ್ಪೂರ ಸೇವೆಯೇ ಇಲ್ಲಿ ಹೆಚ್ಚು ಮಹತ್ವ ಪಡೆದಿದೆ. ಇಲ್ಲಿ ಯಾವುದೇ ಒಂದು ಕೋಮು ಜನಾಂಗ ಜಾತಿಯ ಜನರು ಸೇರಿ ನಡೆಸುವ ಜಾತ್ರೆಯಲ್ಲ. ಇಲ್ಲಿ ಎಲ್ಲ ಜನಾಂಗದವರು ಭಾಗಿಯಾಗಿ ತಮ್ಮ ಸೇವೆ ಸಲ್ಲಿಸುತ್ತಾರೆ. ಎಲ್ಲರೂ ದೇವಿ ದರ್ಶನ ಪಡೆದು ಧನ್ಯರಾಗುವ ಸುವರ್ಣಾವಕಾಶ ಈ ಜಾತ್ರಾ ಮಹೋತ್ಸವದ ವೈಶಿಷ್ಟ್ಯ.
ಸೆ.15 ರಂದು ಮಹಾ ಮಂಗಳಾರತಿ, ಮಾರನೇ ದಿನ 17ರಂದು ದೇವಾಲಯದ ಹೊರ ಭಾಗದಲ್ಲಿ ಮುಂಜಾನೆಯ ಮಬ್ಬಿನಲ್ಲಿ ಚಂದ್ರಮಂಡಲೋತ್ಸವ ಹಾಗೂ ದುಗ್ಗಳೋತ್ಸವದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಮಾಯಿಸುವ ಮಹಿಳೆಯರು ತಲೆಯ ಮೇಲೆ ದುಗ್ಗಳದ ಬಟ್ಟಲನ್ನು ಹೊತ್ತು ಆ ಬಟ್ಟಲಲ್ಲಿ ಕರ್ಪೂರದ ಆರತಿ ಸೇವೆ ಮಾಡುವ ಅಪೂರ್ವ ದೃಶ್ಯಾವಳಿಯನ್ನು ಕಣ್ತುಂಬಿಕೊಳ್ಳುತ್ತಾರೆ.
ಮಾರನೇ ದಿನ ಅಂದರೆ ಸೆ.17ರಂದು ಗೌರಿಯನ್ನು ಪುಷ್ಪಾಲಂಕೃತ ಮಂಟಪದೊಡನೆ ಗ್ರಾಮದ ಪ್ರತಿ ಮನೆಯ ಬಾಗಿಲಿಗೆ ಉತ್ಸವದೊಡನೆ ತೆರಳಿ ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿ ತವರು ಮನೆಯ ಮಡಿಲಕ್ಕಿ ಸಲ್ಲಿಸುತ್ತಾರೆ. ನಂತರ ಸಂಜೆ 5ಗಂಟೆಗೆ ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಹಾರನಹಳ್ಳಿ ಕೋಡಿಮಠದ ಸ್ವಾಮೀಜಿ ಸಮ್ಮುಖದಲ್ಲಿ ಕರ್ಪೂರದ ಆರತಿ ಮಾಡಿ ಗೌರಿದೇವಿಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.
ಗೌರಿದೇವಿ ಹಬ್ಬದಿಂದ ವಿಸರ್ಜನಾ ದಿನದ ಹತ್ತು ದಿನಗಳ ಕಾಲ ಗ್ರಾಮದ ಮುಂಭಾಗದಲ್ಲಿ ಸ್ವರ್ಣಗೌರಿ ಸಮುದಾಯ ಭವನದಲ್ಲಿ ಜಾತ್ರಾ ಮಹೋತ್ಸವಕ್ಕೆ ಬಂದ ಲಕ್ಷಾಂತರ ಮಂದಿ ಭಕ್ತರಿಗೆ ಅನ್ನ ದಾಸೋಹ ನಡೆಸಲಾಗುತ್ತದೆ. ಕಾಣಿಕೆ ಹೆಸರಿನಲ್ಲಿ ಭಕ್ತರಿಂದ ಸಂಗ್ರಹವಾಗುವ ಹಣವನ್ನು ಭಕ್ತ ಮಂಡಳಿ ಹಾಗೂ ಗ್ರಾಮಸ್ಥರು ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಾರೆ. ಭಕ್ತರು ನೀಡಿರುವ ಹಣ ದುರ್ಬಳಕೆ ಮಾಡಿಕೊಳ್ಳದ ಭಕ್ತ ಮಂಡಳಿ ಬಸವೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸಲಾಗಿದೆ. ಅಲ್ಲದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸ್ವರ್ಣಗೌರಿ ಸಮುದಾಯ ಭವನ ನಿರ್ಮಿಸಲಾಗಿದೆ.