ವಿಜ್ಞಾನ ಪರಿಷತ್ತಿಗೆ ಡಾ. ಸ್ವಾಮಿ ಆಯ್ಕೆ
ಅರಸೀಕೆರೆ: ರಾಜ್ಯ ವಿಜ್ಞಾನ ಪರಿಷತ್ನ ಕಾರ್ಯಕಾರಿ ಸಮಿತಿಗೆ ನಡೆದ ತ್ರೈವಾರ್ಷಿಕ ಚುನಾವಣೆಯಲ್ಲಿ ಮೈಸೂರು ವಿಭಾಗದಿಂದ ಮಾಜಿ ಉಪಾಧ್ಯಕ್ಷ ಡಾ.ಎಚ್.ಆರ್.ಸ್ವಾಮಿ ಚುನಾಯಿತರಾಗಿದ್ದಾರೆ.
ತಾಲೂಕಿನ ಬಾಳೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಇವರು ಡಾ.ಶೇಖರ್ ಮಾರ್ಗದರ್ಶನದಲ್ಲಿ ಕೊರಚ ಜನಾಂಗ, ಒಂದು ಅಧ್ಯಯನ ಎಂಬ ವಿಷಯ ಕುರಿತು ಬರೆದ ಪ್ರಬಂದಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿಯನ್ನು ನೀಡಿದೆ. ದಲಿತ ಮತ್ತು ಬಂಡಾಯ ಸಾಹಿತ್ಯ ಕ್ಷೇತ್ರದ ಸಂಘಟನೆಗಳೊಂದಿಗೆ ಕ್ರಿಯಾಶೀಲರಾಗಿ ಸಾಕ್ಷರತೆ, ವಿಜ್ಞಾನ ಹಾಗೂ ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯ ಭಾಗವಹಿಸಿದ್ದಾರೆ.
ಇವರ ಕೃತಿಗಳಲ್ಲಿ ಮಾನವತೆಯ ತುಡಿತಗಳ ಸಂಕಲನ, ನಮ್ಮ ಸಂಸ್ಕತಿ ಎಂಬ ಬುಡಕಟ್ಟು ಜನಾಂಗದ ಅಧ್ಯಯನ, ಬತ್ತಲಾರದ ಬದುಕು ಎಂಬ ಚಿತ್ರಸಂಪುಟಗಳು ಪ್ರಮುಖವಾಗಿವೆ. ರಾಜ್ಯ ವಿಜ್ಞಾನ ಪರಿಷತ್ ಉಪಾಧ್ಯಕ್ಷರಾಗಿ, ರಾಜ್ಯ ನಾಟಕ ಆಕಾಡೆಮಿಯ ಸದಸ್ಯರಾಗಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಂಸ್ಥಾಪಕ ಕಾರ್ಯದರ್ಶಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರೊ. ಎಂ.ಡಿ.ನಂಜುಂಡಸ್ವಾಮಿ ನೇತೃತ್ವದಲ್ಲಿ ಯುರೋಪ್ ಪ್ರವಾಸ ಮಾಡಿದ್ದು, ಇವರಿಗೆ 2007 ರಲ್ಲಿ ರಾಜ್ಯ ಸರ್ಕಾರ ಡಾ.ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.