'ಸಾಕಿನ್ನು ಭರವಸೆ, ಕೆರೆಕಟ್ಟೆಗಳಿಗೆ ಮೊದಲು ನೀರು ತುಂಬಿಸಿ'
ಕನ್ನಡಪ್ರಭ ವಾರ್ತೆ ಹಾಸನ, ಸೆ. 8
ಜಿಲ್ಲೆಯಲ್ಲಿ ಆರು ನದಿಗಳು ಹರಿದು ನೀರಿನ ಹೊಳೆಯನ್ನೇನೊ ಹರಿಸುತ್ತಿವೆ. ಆದರೂ, ಜಿಲ್ಲೆಯ ಸುಮಾರು ಕಡೆಗಳಲ್ಲಿ ಕುಡಿಯುವ ನೀರಿಗೆ ಬರ ಎದ್ದು ಕಾಣುತ್ತಿದೆ. ಕೆರೆಕಟ್ಟೆಗಳು ಖಾಲಿ ಖಾಲಿ. ಕೆಲವು ಕಡೆ ಅತಿವೃಷ್ಟಿ, ಕೆಲವು ಕಡೆ ಅನಾವೃಷ್ಟಿಯಿಂದ ಬೆಳೆಗಳು ರೈತನಿಗೆ ಸಿಗುತ್ತಿಲ್ಲ. ಇದು ಯಾವ ನ್ಯಾಯ ಸ್ವಾಮಿ.
ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ತುಂಬಿಸಿ ರೈತರನ್ನು ಹಸನ್ಮುಖಿಗಳಾಗಿ ಮಾಡುವುದೇ ನಮ್ಮ ಗುರಿ ಎಂದು ನೀಡಿದ್ದ ಭರವಸೆಗಳು ಈಗ ಬರೀ ಭರವಸೆಗಳಾಗಿವೆ ಎಂದು ಜಯ ಕರ್ನಾಟಕ ಸಂಘಟನೆಯ ಚನ್ನರಾಯಪಟ್ಟಣ ತಾಲೂಕು ಘಟಕ ದೂರಿದೆ.
ಜಿಲ್ಲೆಯ ಜೀವನದಿಗಳಾದ ಕಾವೇರಿ, ಹೇಮಾವತಿ, ಯಗಚಿ, ಸಗಣಿ, ಎತ್ತಿನಹೊಳೆ, ಕೆಂಪು ಹೊಳೆಗಳು ಮಳೆಗಾಲದಲ್ಲಿ ಬೋರ್ಗರೆಯುತ್ತವೆ. ಇದರ ಪರಿಣಾಮ ಅಣೆಕಟ್ಟೆಗಳು ತುಂಬಿ ಹೆಚ್ಚಾದ ನೀರನ್ನು ಹೊರ ಬಿಡಲಾಗುತ್ತದೆ. ಇನ್ನು ಹೇಮಾವತಿ ಹಿನ್ನೀರಿನಲ್ಲಿ ಮುಳುಗಡೆಯಾದ ಸುಮಾರು ಹಳ್ಳಿಗಳು ಮನೆ ಮಠ ಕಳೆದು ಕೊಂಡು ಜನತೆ ಬೀದಿ ಪಾಲಾಗಿದ್ದಾರೆ ಎಂದು ಘಟಕದ ಅಧ್ಯಕ್ಷ ಜಗದೀಶ್ ತಿಳಿಸಿದ್ದಾರೆ.
ಆದರೆ ನಮಗಿಲ್ಲದ ನೀರು ದೂರದ ತುಮಕೂರು, ಚಿತ್ರದುರ್ಗ, ಮಂಡ್ಯ ಜಿಲ್ಲೆಗಳ ಬಹುತೇಕ ಕೆರೆಕಟ್ಟೆಗಳನ್ನು ತುಂಬಿಸಿ ಮಳೆ ಇಲ್ಲದಿದ್ದರೂ ಜನ ಜಾನುವಾರುಗಳಿಗೆ ನೆಮ್ಮದಿ ಬದುಕು ಕೊಟ್ಟಿದ್ದಾಗಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ 75 ಭಾಗ ಮಳೆ ಇಲ್ಲದೆ ಬೆಳೆಯೂ ಇಲ್ಲದೆ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಆಗಬೇಕಾಗಿದೆ ಎಂದು ಘಟಕ ಮುಖಂಡರು ಹೇಳಿದ್ದಾರೆ. ಕೂಡಲೇ ಕೆರೆಕಟ್ಟೆಗಳಿಗೆ ನೀರು ಹರಿಸಿ, ರೈತರನ್ನು ಉಳಿಸಿ ಎಂಬುದು ನಮ್ಮ ಆಗ್ರಹ. ಇನ್ನಾದರೂ ರಾಜ್ಯ ಸರ್ಕಾರ ಇತ್ತ ಗಮನಹರಿಸೀತೆ?