ಸುದ್ದಿ ಸಂಕ್ಷೇಪ
14ರ ವರೆಗೆ ತೇಜಸ್ವಿ ಸ್ಮರಣಾ ಕಾರ್ಯಕ್ರಮ
ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಲೇಖಕ, ಪರಿಸರವಾದಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ 75ನೇ ಜನ್ಮ ದಿನಾಚರಣೆ ಅಂಗವಾಗಿ ತೇಜಸ್ವಿ ಸ್ಮರಣಾ ಸಪ್ತಾಹ ಕಾರ್ಯಕ್ರಮ ಸೆ.14 ರವರೆಗೆ ನಗರದ ನಾನಾ ಸ್ಥಳಗಳಲ್ಲಿ ಕಾಲೇಜು ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗುತ್ತಿದೆ ಎಂದು ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ದನ್ ತಿಳಿಸಿದ್ದಾರೆ. ಸೆ. 10ರಂದು ಹಾಸನ ವೈದ್ಯಕೀಯ ಮಹಾ ವಿದ್ಯಾಲಯ, 11 ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯ, 12 ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆ, 13 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ 14 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕ್ಯಾನ್ಸರ್ ತಪಾಸಣಾ ಶಿಬಿರ ನಾಳೆ
ಹಾಸನ: ಕಂದಲಿ ವಿದ್ಯಾಪೀಠ ಬಳಿಯಿರುವ ಹಾಸನ ಕ್ಯಾನ್ಸರ್ ಸೆಂಟರ್ನಲ್ಲಿ ಸೆ.10 ರಂದು ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ವಿವರಗಳಿಗೆ ದೂ.ಸಂ. 08172- 326111, ಮೊ7204059259 ಸಂಪರ್ಕಿಸಿ.
ಅನೈತಿಕ ರಾಜಕಾರಣಕ್ಕೆ ಕೈ ಹಾಕಬಾರದು: ಶಾಸಕ ಕುಮಾರಸ್ವಾಮಿ
ಸಕಲೇಶಪುರ: ಅನೈತಿಕ ರಾಜಕಾರಣಕ್ಕೆ ಕೈ ಹಾಕದಂತೆ ಶಾಸಕ ಎಚ್.ಕೆ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಅವರಿಗೆ ಸಲಹೆ ನೀಡಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಂತರ ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಲಾಗದಿದ್ದರೂ ಗೆದ್ದಿರುವ ಇತರೆ ಪಕ್ಷದ ಅಭ್ಯರ್ಥಿಗಳನ್ನು ಹಣ ಹಾಗೂ ಇತರೆ ಆಮಿಷವೊಡ್ಡುವ ಮೂಲಕ, ಸೆಳೆಯಲು ಯತ್ನಿಸುವುದು ಅನೈತಿಕ ರಾಜಕಾರಣವಾಗಲಿದೆ ಎಂದು ಹೆಸರು ಹೇಳದೆ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಅವರನ್ನು ಕುಟುಕಿದರು.
11 ರಂದು ಪ್ರಗತಿ ಪರಿಶೀಲನಾ ಸಭೆ
ಹಾಸನ: ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಸೆ. 11 ರಂದು ಬೆಳಗ್ಗೆ 11ಕ್ಕೆ ಮೊದಲನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ.) ಪ್ರಗತಿ ಪರಿಶೀಲನೆ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.