ಹೆಜ್ಜೆ ಹೆಜ್ಜೆಗೂ ಗುಂಡಿ, ಹಳ್ಳ ಕೊಳ್ಳದ ರಸ್ತೆ
ಹಾರನಹಳ್ಳಿ: ಸುವರ್ಣ ಗ್ರಾಮ, ನಿರ್ಮಲ ಗ್ರಾಮ, ಸ್ವಚ್ಚ ಗ್ರಾಮ ಹೀಗೆ ಸರ್ಕಾರ ನಾನಾ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ರಸ್ತೆ, ಇತ್ಯಾದಿ ಅಭಿವೃದ್ಧಿಗೆ ಕೋಟ್ಯಂತರ ರು. ಅನುದಾನ ಬಿಡುಗಡೆ ಮಾಡುತ್ತಿದ್ದರೂ ಕೆಲವು ಗ್ರಾಮಗಳಲ್ಲಿನ ರಸ್ತೆಗಳು ಗುಂಡಿ ಗೊಟರುಗಳು ದುರಸ್ತಿಯಾಗದೇ, ಆ ರಸ್ತೆಯಲ್ಲಿ ಓಡಾಡುವುದೆ ಕಷ್ಟಕರವಾಗಿದೆ.
ಮುರುಂಡಿ ಗ್ರಾಮ ಪಂಚಾಯತಿ ನಿರ್ಲಕ್ಷ್ಯ ಹಾಗೂ ತಾಲೂಕು ಆಡಳಿತದ ಬೇಜವಾಬ್ದಾರಿಯಿಂದಾಗಿ ಸಂಕೋಡನಹಳ್ಳಿಯಿಂದ ಯಾದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮಳೆ ನೀರಿನಿಂದ ಆವೃತ್ತವಾಗಿದ್ದು ಪ್ರಯಾಣಿಕರು, ಸಾರ್ವಜನಿಕರು ಈ ಮಾರ್ಗ ಸಂಚರಿಸಲಾರದೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸ ತೊಡಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿ ನೀರಿನ ಹೊಂಡವಾಗಿದ್ದು ಪಾದಚಾರಿಗಳು, ವಾಹನ ಸವಾರರು ಓಡಾಡಲಾರದ ಪರಿಸ್ಥಿತಿ ಉಂಟಾಗಿದೆ. ಐದಾರು ತಿಂಗಳುಗಳಿಂದಲೂ ಪರಿಸ್ಥಿತಿ ಹೀಗಿದ್ದರೂ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತಿ ಅಸಡ್ಡೆ ವಹಿಸಿದೆ ಎಂಬ ಆರೋಪ ಕೇಳಿಬರುತ್ತಿದೆ.
ಯಾದಾಪುರ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ಯಾತ್ರಿಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದರಿಂದ ರಸ್ತೆ ದುರಸ್ತಿಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿಚೌಡಯ್ಯ ಗಮನ ಹರಿಸಿ ರಸ್ತೆ ದುರಸ್ತಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.