ಅಪಘಾತ ವಾಹನಕ್ಕೆ ಸ್ಥಳ ಕೊರತೆ
ಪಿ.ರವಿಕುಮಾರ್
ಹಾಸನ: ನಗರದಲ್ಲಿ ಸೂಕ್ತ ಸ್ಥಳವಿಲ್ಲದೆ ಪೊಲೀಸ್ ಇಲಾಖೆ ಅಪಘಾತಕ್ಕೀಡಾದ ವಾಹನಗಳನ್ನು, ಎಲ್ಲಿ ಬೇಕೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ಹಾಸನ ಗ್ರಾಮಾಂತರ ಮತ್ತು ನಗರಠಾಣೆ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಗ್ರಾಮಾಂತರ ಠಾಣೆ ಪಕ್ಕದ ಪಾದಚಾರಿ ಜಾಗದಲ್ಲಿಯೂ ಮತ್ತು ಎನ್.ಆರ್.ವೃತ್ತದಲ್ಲಿ ಪೊಲೀಸ್ ಚೌಕದ ಪಕ್ಕದ ರಸ್ತೆಯಲ್ಲಿ ನಿಲ್ಲಿಸುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ನಗರದ ಹೃದಯ ಭಾಗವಾದ ಈ ವೃತ್ತದಲ್ಲಿ ಎಲ್ಲಾ ವಾಹನಗಳು ನಗರದೊಳಗೆ ಪ್ರವೇಶಿಸ ಬೇಕಾದರೆ ಈ ವೃತ್ತವನ್ನು ಹಾದು ಹೋಗಬೇಕು. ಹೀಗಾಗಿ ಈ ಮಾರ್ಗದಲ್ಲಿ ಪ್ರತಿನಿತ್ಯ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಜೊತೆಗೆ ಪಾದಚಾರಿಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಅರಸೀಕೆರೆ ಸೇರಿದಂತೆ ಇತರೆ ಕಡೆಗಳಿಂದ ಬರುವ ಎಲ್ಲ ಸಾರಿಗೆ ಬಸ್ಗಳು ಈ ವೃತ್ತದಲ್ಲಿ ನಿಲುಗಡೆಯನ್ನು ನೀಡುತ್ತವೆ. ಇದರಿಂದಲೂ ಜನಸಂದಣೆ ಹೆಚ್ಚು.
ಜೊತೆಗೆ ಬೇಲೂರು, ಹಳೇಬೀಡು, ಹೊಳೆನರಸೀಪುರ, ಸಕಲೇಸಪುರ ಸೇರಿದಂತೆ ಇತರೆ ಕಡೆಗಳಿಗೆ ತೆರಳಬೇಕಾದರೂ ಈ ವೃತ್ತದಿಂದಲೇ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಬೇರೆ ಮಾರ್ಗದ ಮೂಲಕ ಈ ಸ್ಥಳಗಳಿಗೆ ಹೋಗಲು ಸಾಧ್ಯವಾಗದ ಕಾರಣ ವಿಧಿ ಇಲ್ಲದೆ ವಾಹನ ಸವಾರರು ಕಿರಿದಾದ ಈ ರಸ್ತೆಯಲ್ಲಿಯೇ ಸಂಚರಿಸುತ್ತಾರೆ.
ವಿಪರ್ಯಾಸ ಅಂದ್ರೆ ಈ ವೃತ್ತದ ಎರಡೂ ಕಡೆಯ ಫುಟ್ಪಾತ್ನ್ನು ನಗರ ಮತ್ತು ಗ್ರಾಮೀಣ ಠಾಣೆ ಪೊಲೀಸರು ಆಕ್ರಮಿಸಿಕೊಂಡು ಅಪಘಾತಕ್ಕೀಡಾದ ನಾನಾ ವಾಹನಗಳನ್ನು ರಸ್ತೆ ಬದಿ ಮತ್ತು ಫುಟ್ಪಾತ್ನಲ್ಲಿ
ನಿಲ್ಲಿಸುವ ಮೂಲಕ ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ಉಂಟು ಮಾಡಿದ್ದಾರೆ. ಫುಟ್ಪಾತ್ ಮೇಲೆ ವಾಹನಗಳನ್ನು ನಿಲ್ಲಿಸಿರುವುದರಿಂದ ಈ ವೃತ್ತದಲ್ಲಿ ಸಿಗ್ನಲ್ ನಿಂತಾಗ ಹಾಗೂ ರೇಲ್ವೆ ಗೇಟ್ ಹಾಕಿದಾಗ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಪೊಲೀಸ್ ಇಲಾಖೆಯೇ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿರುವುದರಿಂದ ಈ ಬಗ್ಗೆ ತೀವ್ರ ಚರ್ಚೆಗೆ ಎಡೆ ಮಾಡಿದೆ. ಮೇಲಧಿಕಾರಿಗಳು ಮತ್ತು ಜಿಲ್ಲಾಡಳಿತ ಗಮನಕ್ಕೆ ಬಂದರೂ ಈವರೆಗೂ ಯಾವುದೇ ಪ್ರಯೋಜನವಾಗದೆ ನಾಗರಿಕರು ಪ್ರತಿ ನಿತ್ಯ ಈ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಈ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಜತೆಗೆ ಕಿರಿದಾದ ರಸ್ತೆ ಹಾಗೂ ಸಾರಿಗೆ ಬಸ್ಗಳು ನಿಲುಗಡೆ ನೀಡುವುದರಿಂದ ಸದಾ ಜನಜಂಗುಳಿಯಿಂದ ತುಂಬಿರುವ ಈ ಸ್ಥಳಗಳಲ್ಲಿ ಅನೇಕ ಅಪಘಾತಗಳು ಸಂಭವಿಸಿ ಸಾವು ನೋವುಗಳು ಸಂಭವಿಸಿವೆ. ಇದರ ಜೊತೆಗೆ ಪೊಲೀಸ್ ಇಲಾಖೆಯವರೇ ಅಪಘಾತಕ್ಕೀಡಾದ ವಾಹನಗಳನ್ನು ಇಲ್ಲಿ ನಿಲ್ಲಿಸುವುದರಿಂದ ಈ ಸ್ಥಳ ಇಕ್ಕಟ್ಟಿನ ನೆಲೆಯಾಗಿ ಪರಿಣಮಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗರದ ಶಂಕರೀಮಠ ರಸ್ತೆ, ಸಂಪಿಗೆ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಿದ್ದಾರೆ. ಅದೇ ನೀತಿಯನ್ನು ನಗರದ ಎನ್.ಆರ್.ವೃತ್ತ, ಸಂತೇಪೇಟೆ ರಸ್ತೆ, ಸಾಲಗಾಮೆ ರಸ್ತೆ, ಶ್ರೀಸೀತಾ ರಾಮಾಂಜನೇಯ ಸ್ವಾಮಿ ದೇವಸ್ಥಾನದ ರಸ್ತೆಗಳಲ್ಲಿ ಪ್ರಸ್ತುತ ಇರುವ ಈ ಸಂಚಾರಿ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೆನ್ಷ್ನ್ ಮೊಹಲ್ಲಾ ಸಂಚಾರಿ ಠಾಣೆ ಮುಂದೆ: ಕೇವಲ ಎನ್.ಆರ್.ವೃತ್ತದಲ್ಲಿ ಮಾತ್ರವಲ್ಲದೆ ನಗರದ ಪೆನ್ಷ್ನ್ ಮೊಹಲ್ಲಾ ಸಂಚಾರಿ ಪೊಲೀಸ್ ನಿಲ್ದಾಣ ಮುಂದೆ ರಸ್ತೆ ಬದಿಯಲ್ಲಿಯೇ ಅಪಘಾತಕ್ಕೀಡಾದ ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅಡಚಣೆ ಉಂಟಾಗುತ್ತಿದೆ. ಮೊದಲೆ ಕಿರಿದಾದ ರಸ್ತೆಯಾಗಿರುವುದರಿಂದ ವಾಹನಗಳನ್ನು ರಸ್ತೆ ಬದಿಯಲ್ಲಿ ವಾರಗಟ್ಟಲೆ ನಿಲ್ಲಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಪಘಾತಕ್ಕೀಡಾದ ವಾಹನಗಳನ್ನು ನಗರದ ಹೊರವಲಯದಲ್ಲಿ ನಿಲ್ಲಿಸಬೇಕು ಅಥವಾ ಪೊಲೀಸ್ ಕವಾಯತು ಮೈದಾನದಲ್ಲಿ ಜಾಗ ಇರುವ ಕಡೆಗಳಲ್ಲಿ ನಿಲ್ಲಿಸಿಕೊಳ್ಳುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಉಂಟಾಗುತ್ತಿರುವ ಕಿರಿಕಿರಿಯಿಂದ ಮುಕ್ತಿ ಕೊಡಿಸಬೇಕಾಗಿದೆ ಎಂಬುದು ಸಾರ್ವಜನಿಕರ ಒಟ್ಟಾರೆ ಅಭಿಪ್ರಾಯ.