ಅರಸೀಕೆರೆ ಪ್ರಸನ್ನ ಗಣಪತಿ ಪ್ರತಿಷ್ಠಾಪನೆ, 46 ದಿನದ ಉತ್ಸವ
ಕನ್ನಡಪ್ರಭ ವಾರ್ತೆ ಅರಸೀಕೆರೆ ಸೆ.10
ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಪ್ರೇರೇಪಿಸಲು ಆರಂಭಿಸಲಾದ ಶ್ರೀ ಪ್ರಸನ್ನ ಗಣಪತಿಗೆ ಇದೀಗ ಸುದೀರ್ಘ 72 ವರ್ಷಗಳ ಇತಿಹಾಸ ಹೊಂದಿದ್ದು ಪ್ರಸನ್ನ ಗಣಪತಿಯನ್ನು ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಕಲ ವಿಧಿ-ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.
ಪಟ್ಟಣದ ಗರುಡನಗಿರಿ ರಸ್ತೆಯಲ್ಲಿರುವ ಸತತ 72 ವರ್ಷಗಳಿಂದ ಗಣಪತಿ ನಿರ್ಮಿಸುತ್ತಿರುವ ಕುಟುಂಬದವರಾದ ಹಾರನಹಳ್ಳಿ ಮಹದೇವ್ ಅವರ ನಿವಾಸದಿಂದ ಮೆರವಣಿಗೆಯಲ್ಲಿ ಗರುಡನಗಿರಿ ರಸ್ತೆ ಮಾರ್ಗವಾಗಿ ಪೇಟೆಬೀದಿ ಮೂಲಕ ಮಂಗಳವಾದ್ಯಗಳೊಂದಿಗೆ ಕರೆತರಲಾಯಿತು. ನಂತರ ನೆರೆದಿದ್ದ ಭಕ್ತ ಸಮೂಹದ ಜಯಘೋಷದ ನಡುವೆ ಭಕ್ತ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪ್ರತಿಷ್ಠಾಪನಾ ಕಾರ್ಯ ವಿದ್ಯುಕ್ತವಾಗಿ ನೆರವೇರಿತು.
ಈ ಬಾರಿ 46 ದಿನಗಳ ಕಾಲ ಗಣೇಶೋತ್ಸವದ ಕಾರ್ಯಗಳು ನಡೆಯಲಿದ್ದು ಇದರ ಅಂಗವಾಗಿ ಸಾಂಸ್ಕತಿಕ, ಮನರಂಜನಾ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ ಎಂದು ಗಣಪತಿ ಭಕ್ತ ಮಂಡಳಿ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ: ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕೆಲವರು ತಮ್ಮ ವ್ಯಾಪ್ತಿ ಮೀರಿ ವರ್ತಿಸ ತೊಡಗಿದ್ದಾರೆ. ಅದ್ಧೂರಿ ಗಣೇಶೋತ್ಸವ ಆರಂಭಗೊಂಡು 72 ವರ್ಷಗಳೇ ಕಳೆದಿವೆ. ಇಡೀ ರಾಜ್ಯದಲ್ಲಿ ಅರಸೀಕೆರೆ ಗಣೇಶೋತ್ಸವಕ್ಕೆ ತನ್ನದೇ ಆದ ಸ್ಥಾನಮಾನ ಹೊಂದಿದ್ದು, ನಾಡಿನಲ್ಲೇ ಹೆಸರಾಗಿರುವ ಈ ಮಹೋತ್ಸವಕ್ಕೆ ಇತ್ತೀಚಿಗೆ ಕೆಲವರು ತಮ್ಮ ಸ್ವಾರ್ಥಸಾಧನೆಗಾಗಿ ತಾವು ಹೇಳಿದಂತೆಯೇ ಉತ್ಸವ, ಮೆರವಣಿಗೆಗಳು ನಡೆಯಬೇಕೆಂದು ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದು ದೂರಿದರು.
ಈ ಹಿಂದೆ ಶ್ಯಾನುಬೋಗರ ಬೀದಿ, ಸಾಯಿನಾಥ ರಸ್ತೆ, ಪೇಟೆಬೀದಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿದೆಡೆ ಮೆರವಣಿಗೆ ಕೊಂಡೊಯ್ಯುತ್ತಿದ್ದರು. ಆದರೆ ಸೋಮವಾರ ಕೇವಲ ಪೇಟೆಬೀದಿಯ ಮೂಲಕ ಗಣಪತಿ ಪೆಂಡಾಲ್ಗೆ ಕರೆದೊಯ್ಯಲಾಗಿದೆ. ಇದು ಪೂಜೆಗಾಗಿ ಕಾದಿದ್ದ ಭಕ್ತರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಇದರಿಂದ ಸಿಟ್ಟಿಗೆದ್ದಿರುವ ಪಟ್ಟಣದ ನಾಗರಿಕರು ಸಮಿತಿ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸತೊಡಗಿದರು.