ಭಾರತಕ್ಕಾಗಿ ಓಟ ಕಾರ್ಯಕ್ರಮ ಇಂದು
ಹಾಸನ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಭಿಯಾನದ ಅಂಗವಾಗಿ ಸೆ.11ರಂದು ಭಾರತಕ್ಕಾಗಿ ಓಟ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಅಭಿಯಾನದ ಪ್ರಾಂತ ಸಮಿತಿ ಸದಸ್ಯ ಕೆ.ಪಿ.ಎಸ್.ಪ್ರಮೋದ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.11 ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ ದಿನವಾಗಿದೆ. ತನ್ನಿಮಿತ್ತ ದೇಶದ ಯುವಕರಲ್ಲಿ ರಾಷ್ಟ್ರ ಜಾಗೃತಿ ಉಂಟು ಮಾಡಲು ಭಾರತಕ್ಕಾಗಿ ಓಟ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10ಕ್ಕೆ ಎಲ್ಲಾ ಕಾಲೇಜಿನ ಯುವಕರನ್ನು ಸೇರಿಸಿ ಅಲ್ಲಿಂದ ಸಾಲಗಾಮೆ ರಸ್ತೆ, ಸರಸ್ವತಿ ವೃತ್ತ, ಕಾಲೇಜು ಪಕ್ಕದ ರಸ್ತೆ, ಆರ್.ಸಿ.ರಸ್ತೆ, ಬಿ.ಎಂ.ರಸ್ತೆ, ಗಾಂಧಿಬಜಾರ್ ವೃತ್ತ, ಸುಭಾಷ್ ಚೌಕ, ಕಸ್ತೂರ ಬಾ ರಸ್ತೆ, ಕಲಾಭವನಕ್ಕೆ ಹಿಂದಿರುಗಲಾಗುವುದು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದ ಅವರು, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು ಎಂದರು. ಜಿಲ್ಲಾ ಸಂಚಾಲಕ ಹರಿಹರಪುರ ಶ್ರೀಧರ್, ಡಾ.ಜನಾರ್ದನ್ ಇದ್ದರು.