'ರೈತ ಸಂಪರ್ಕ ಕೇಂದ್ರಗಳಲ್ಲಿ ಸಸ್ಯ ಸಂರಕ್ಷಣಾ ಔಷಧಿ, ಗೊಬ್ಬರ'
ಹೊಳೆನರಸೀಪುರ: ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಸ್ಯ ಸಂರಕ್ಷಣಾ ಔಷಧಿಗಳು, ಸಾವಯವ ಗೊಬ್ಬರ, ಜೈವಿಕ ಗೊಬ್ಬರಗಳು, ಲಘು ಪೋಷಕಾಂಶಕಗಳು ಸಹಾಯಧನದಲ್ಲಿ ಲಭ್ಯವಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ತಿಳಿಸಿದ್ದಾರೆ.
ಅಲ್ಲದೆ ತುಂತುರು ನೀರಾವರಿ ಘಟಕ ಮತ್ತು ಕಬ್ಬು ಬೆಳೆಗೆ ಹನಿ ನೀರಾವರಿ ಘಟಕಗಳನ್ನು ಅಳವಡಿಸಲು ಶೇ.75ರ ಸಹಾಯಧನದ ಲಭ್ಯತೆಯಿದ್ದು ರೈತರು ಇದರ ಸದುಪಯೊಗ ಪಡೆದುಕೊಳ್ಳುವಂತೆ ಕೋರಿದ್ದಾರೆ.
ತಾಲೂಕಿನಲ್ಲಿ ಆಗಸ್ಟ್ ಅಂತ್ಯದವರೆಗೆ ವಾಡಿಕೆ ಮಳೆ 402 ಮಿ ಮೀ. ಮಳೆಗೆ 556 ಮಿ.ಮೀ. ಮಳೆಯಾಗಿದ್ದು ಶೇ. 138 ರಷ್ಟು ಮಳೆಯಾಗಿದೆ. ಫೆಬ್ರವರಿ ವಾಡಿಕೆ ಮಳೆ 2 ಮಿಮೀ. ಮಳೆಗೆ 25.90 ಮಿಮಿ. ಮಳೆಯಾಗಿದ್ದು, ಮಾರ್ಚ್ ವಾಡಿಕೆ ಮಳೆ 9 ಮಿಮೀ. ಇದ್ದು 58.7 ಮಿಮೀ. ಮಳೆಯಾಗಿದೆ. ಏಪ್ರಿಲ್ ವಾಡಿಕೆ ಮಳೆ 59 ಮಿಮೀ. ಇದ್ದು 19.7 ಮಿಮಿ. ಮಳೆ ಬಂದಿದೆ.
ಮೇ ಮಾಹೆಯ ವಾಡಿಕೆ ಮಳೆ 120 ಮಿಮೀ, 149 ಮಿಮೀ, ಜೂನ್ ವಾಡಿಕೆ ಮಳೆ 58 ಮಿ.ಮಿ. ಇದ್ದು 102 ಮಿ.ಮಿ. ಮಳೆ ಬಂದಿದ್ದು ಜುಲೈ ಮಾಹೆಯ ವಾಡಿಕೆ ಮಳೆ 93 ಮಿ.ಮಿ ಮಳೆಗೆ 146 ಮಿ.ಮಿ ಮಳೆ ಬಂದಿದ್ದು, ಆಗಸ್ಟ್ ವಾಡಿಕೆ ಮಳೆ 59 ಮಿಮಿ. 55 ಮಿಮಿ. ಮಳೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ನಿಗದಿಪಡಿಸಿದ ಒಟ್ಟು ಗುರಿ (25135 ಹೆ. ಪ್ರದೇಶ) ಒಟ್ಟು 24672 ಹೆಕ್ಟೇರ್ಗಳಷ್ಟು ಪ್ರದೆಶದಲ್ಲಿ ಬಿತ್ತನೆ ನಾಟಿಯಾಗಿರುತ್ತದೆ. ಅದರಲ್ಲಿ ಮುಖ್ಯವಾಗಿ ಬತ್ತ 7310 ಹೆಕ್ಟೆರ್ಗಳಲ್ಲಿ, ರಾಗಿ 5335 ಹೆಕ್ಟೇರ್ಗಳಲ್ಲಿ, ಮುಸುಕಿನ ಜೋಳ 4960 ಹೆಕ್ಟೆರ್ಗಳಲ್ಲಿ, ತಂಬಾಕು 2385 ಹೆಕ್ಟೆರ್ಗಳಲ್ಲಿ, ಕಬ್ಬು 665 ಹೆಕ್ಟೆರ್ಗಳಲ್ಲಿ ಮತ್ತು ಅಲಸಂದೆ 2270 ಹೆಕ್ಟೆರ್ಗಳಲ್ಲಿ ಬಿತ್ತನೆ ನಾಟಿಯಾಗಿರುತ್ತದೆ.
ಮುಂಗಾರು ಹಂಗಾಮಿನಲ್ಲಿ ಒಟ್ಟು ಗುರಿಯಲ್ಲಿ 24672 ಹೆ. ಪ್ರದೇಶದಲ್ಲಿ ಬಿತ್ತನೆನಾಟಿಯಾಗಿದ್ದು ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆಯಿಂದ ಬಾಡಿದ್ದ ಬೆಳೆಗಳು ಇತ್ತೀಚಿನ ಉತ್ತಮ ಮಳೆಯಿಂದ ಚೇತರಿಸಿಕೊಂಡು ಬಿತ್ತನೆಯಾದ ಬೆಳೆಗಳು ಉತ್ತಮವಾಗಿವೆ ಎಂದು ಹೇಳಿದ್ದಾರೆ.
ಇದುವರೆಗೂ ಮುಂಗಾರು ಹಂಗಾಮಿನಲ್ಲಿ 1036 ಕ್ವಿಂಟಾಲ್ನಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು 6748 ಫಲಾನುಭವಿಗಳಿಗೆ ಸಹಾಯಧನದಲ್ಲಿ ವಿತರಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಆಲೂಗೆಡ್ಡೆ,, ಎಳ್ಳು, ಅಲಸಂದೆ, ಕಟಾವು ಆದ ಜಾಗದಲ್ಲಿ ರಾಗಿ ಮತ್ತು ಮುಸುಕಿನ ಜೋಳ, ಹುರುಳಿ ಬೆಳೆಗಳ ಬಿತ್ತನೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.