ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಕೆ
ಕ.ಪ್ರ.ವಾರ್ತೆ ಹಾಸನ ಸೆ. 10
ತರಗತಿಗಳನ್ನು ನೂತನ ಕಟ್ಟಡದಲ್ಲಿ ನಡೆಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ಕಾನೂನು ವಿದ್ಯಾರ್ಥಿಗಳ ವೇದಿಕೆಯಿಂದ ಕಾನೂನು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಮಂಗಳವಾರವೂ ಮುಂದುವರಿಸಿದರು. ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕಾನೂನು ಕಾಲೇಜು ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಇದುವರೆಗೂ ತರಗತಿಗಳು ನಡೆಯುತ್ತಿದ್ದು, ಕಳೆದ 5 ವರ್ಷದಿಂದ ಸರ್ಕಾರಿ ಕಾನೂನು ಕಾಲೇಜಿನ ಸ್ವಂತ ಕಟ್ಟಡದ ಕಾಮಗಾರಿ ನಡೆದು ಮುಕ್ತಾಯಗೊಂಡಿದೆ.
ಈ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಸಾಧ್ಯವಿದ್ದರೂ, ಈಗಿರುವ ಖಾಸಗಿ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಟ್ಟಡದಲ್ಲಿ ವಿಶಾಲವಾದ ಕೊಠಡಿಗಳು, ಗ್ರಂಥಾಲಯ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಇನ್ನಿತರ ಸಮಸ್ಯೆಗಳಿದೆ ಎಂದು ದೂರಿದರು. ಆದ್ದರಿಂದ ಕೂಡಲೇ ನೂತನ ಕಟ್ಟಡದಲ್ಲಿ ತರಗತಿ ಹಾಗೂ ರಸ್ತೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಎಂ.ಜಿ.ಪೃಥ್ವಿ, ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ವೇದಿಕೆ ಸಂಚಾಲಕ ಎಚ್.ಇ.ಅನ್ಷಾದ್, ಎಚ್.ಯು.ವಚನ್, ಮಖುಂಡರಾದ ವಿಜಯೇಂದ್ರ, ಮಹೇಶ್, ಕಲಾ ಹಾಗೂ ಇತರರು ಇದ್ದರು.
ಡಿಸಿ ಭರವಸೆ: ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ಅನ್ಬುಕುಮಾರ್, ಕೂಡಲೇ ಕಾಲೇಜಿಗೆ ರಸ್ತೆ ಸಂಪರ್ಕ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಕ್ರಮಕೈಗೊಳ್ಳಲಾಗ್ವುದು ಎಂದು ಭರವಸೆ ನೀಡಿದರು.