'ಸಮಾಜ ಏಳ್ಗೆಗೆ ಶಿಕ್ಷಕರ ಪಾತ್ರ ಮುಖ್ಯ'
ಹಾಸನ: ಸಮಾಜದ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಏಳಿಗೆಗೆ ಶ್ರಮ ವಹಿಸುತ್ತಿದ್ದಾರೆ ಎಂದು ಸುಜಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಸುಬ್ಬೇಗೌಡ ತಿಳಿಸಿದರು. ನಗರದ ಸುಜಲಾ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಲೋಕೇಶ್, ಸುಜಲ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರ್, ಸುಜಲ ಪಿಯು ಕಾಲೇಜಿನ ಪ್ರಾಂಶುಪಾಲ ಜುಲ್ಫೀಕರ್ ಅಹಮ್ಮದ್, ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ವಿ.ಶೃತಿ ಪ್ರಾರ್ಥಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಕುಶಾಲ್ಗೌಡ ಮತ್ತು ಶ್ರೀನಿವಾಸ್ ಕೃಷ್ಣ ಅನಿಸಿಕೆ ಹಂಚಿಕೊಂಡರು. ಲಕ್ಷ್ಮೀ ನಿರೂಪಿಸಿದರು.
'ಎನ್ಸಿಸಿ'ಯಿಂದ ಉತ್ತಮ ವ್ಯಕ್ತಿತ್ವ'
ಹಾಸನ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪದವಿಯ ಜತೆಗೆ ಎನ್ಸಿಸಿ ತರಬೇತಿ ಪಡೆದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಪ್ರೊ. ಡಾ. ಮಲ್ಲಿಕಾರ್ಜುನ್ ಹೇಳಿದರು. ಅವರು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಎನ್ಸಿಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸ್ವಾಗತ ಹಾಗೂ ರಕ್ತದ ಮಹತ್ವ ಬಗ್ಗೆ ಮಾತನಾಡಿದರು. ಎನ್ಸಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸಾಹಸ ಯಾತ್ರೆ, ಶಿಸ್ತು, ಧೈರ್ಯ, ಸಮುದಾಯ ಸೇವೆ ಗುಣಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ದೇಶದಲ್ಲಿ ಹೆಚ್ಚುತ್ತಿರುವ ಆತಂಕ, ಅಭದ್ರತೆ, ಅಶಾಂತಿ ಪರಿಸ್ಥಿತಿ ನಿರ್ಮೂಲನೆಗೊಳಿಸುವಲ್ಲಿ ಸಕ್ರಿಯವಾಗಿ ನಿಸ್ವಾರ್ಥ ಸೇವೆ ಮಾಡಿ ಸದೃಢ ಭಾರತವನ್ನು ಕಟ್ಟುವ ಕಾರ್ಯಕ್ಕೆ ಕಂಕಣ ಬದ್ಧರಾಗ ಬೇಕಿದೆ ಎಂದು ಸಲಹೆ ನೀಡಿದರು. ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ಆದಿನಾರಾಯಣ ಮಾತನಾಡಿ, ರಕ್ತದಾನದಿಂದ ಮತ್ತೊಬ್ಬ ವ್ಯಕ್ತಿ ಬದುಕಲು ಅವಕಾಶ ಮಾಡಿ ಎಂದು ಹೇಳಿದರು. ಮದುವೆ ಸಮಯದಲ್ಲಿ ಹಣ, ಒಡವೆಗಳಿಗಿಂತ ಮುಖ್ಯವಾಗಿ ಮದುವೆಯಾಗುವವರ ರಕ್ತದ ಬಗ್ಗೆ ವಿವರ ಮಾಹಿತಿ ಪಡೆದಲ್ಲಿ ಉತ್ತಮ ಎಂದು ತಿಳಿಸಿದರು. ಎನ್ಸಿಸಿ ಅಧಿಕಾರಿ ಮೇಜರ್ ಬಾಳಿಗಮಾಧವನಾರಾಯಣ ಎನ್ಸಿಸಿ ಹಿನ್ನೆಲೆ ತರಬೇತಿಯಲ್ಲಿ ಪಡೆಯಬಹುದಾದ ಕೌಶಲ್ಯಗಳ ಬಗ್ಗೆ ಉತ್ತಮ ವ್ಯಕ್ತಿತ್ವ ಬೆಳಸಿ ಕೊಳ್ಳುವ ಬಗ್ಗೆ
ವಿದ್ಯಾರ್ಥಿ ವೇತನ ಹಾಗೂ ಎನ್ಸಿಸಿ ಮೀಸಲಾತಿ ಬಗ್ಗೆ ವಿವರವಾಗಿ ತಿಳಿಸಿದರು.ಜೂನಿಯರ್ ಅಂಡರ್ ಆಫೀಸರ್ ಕೆಡೆಟ್ ಅನಿತಾ ಎಸ್. ನಿರೂಪಿಸಿದರು. ಕೆಡೆಟ್ ರುಮಾನಾ ವಂದಿಸಿದರು.