'ಹೈಬ್ರಿಡ್ ಆಹಾರದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ'
ಬೇಲೂರು: ಹೈಬ್ರಿಡ್ ಮತ್ತು ಕುಲಾಂತರಿ ತಳಿಗಳಿಂದ ಉತ್ಪಾದಿಸಿದ ಆಹಾರ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಬೇಲೂರು ಲಯನ್ಸ್ ಅಧ್ಯಕ್ಷ ಪೂವಯ್ಯ ತಿಳಿಸಿದರು.
ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಮತ್ತು ಸಕ್ಕರೆ ಕಾಯಿಲೆ ಪತ್ತೆ ಹಾಗೂ ರಕ್ತದ ಗುಂಪು ಪತ್ತೆ ಮಾಡುವ ಕಾರ್ಯಕ್ರಮದಲ್ಲಿ ಸ್ವಯಂ ರಕ್ತದಾನ ಮಾಡಿ ಮಾತನಾಡಿದರು.
ಮನುಷ್ಯರ ಬಹುತೇಕ ಕಾಯಿಲೆಗಳಿಗೆ ಇಂದಿನ ಆಹಾರ ಪದ್ಧತಿ ಮೂಲ ಕಾರಣವಾಗಿದೆ, ದೇಶಿಯ ತಳಿಗಳಿಂದ ಆಹಾರ ಸೇವನೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ನೀಡುತ್ತವೆ. ಆದರೆ ಹೈಬ್ರಿಡ್ ತಂತ್ರಜ್ಞಾನ ದೇಶಿಯ ತಳಿಗಳ ನಾಶಕ್ಕೆ ಕಾರಣವಾಗಿದ್ದು, ಸರ್ಕಾರ ದೇಶಿಯ ತಳಿಗಳ ಉಳಿಸಿ ಬೆಳೆಸುವಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಆಧುನಿಕ ಕಾಯಿಲೆಗಳು ವಯಸ್ಸಿನ ಅಧಾರದ ಮೇಲೆ ಬರುವದಿಲ್ಲ. ಈ ದಿಸೆಯಲ್ಲಿ ಕಾಲ ಕಾಲಕ್ಕೆ ತಪಾಸಣೆ ಮಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಪಡೆಯಬೇಕು ಎಂದು ಮನವಿ ಮಾಡಿದ ಅವರು ಶಿಕ್ಷಕರ ದಿನಾಚರಣೆ ಅಂಗವಾಗಿ ಉಚಿತವಾಗಿ ಸಕ್ಕರೆ ರೋಗದ ಪತ್ತೆ, ಇನ್ನು ವಿವಿಧ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸುತ್ತಿದ್ದು, ಶಿಕ್ಷಕರು ತಮ್ಮ ಒತ್ತಡಗಳನ್ನು ಸ್ವಲ್ಪ ಸಮಯ ದೂರವಿಟ್ಟು ಈ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಲಯನ್ಸ್ ವಲಯ ಅಧ್ಯಕ್ಷ ಎನ್.ಆರ್.ಗಿರೀಶ್ ಮಾತನಾಡಿ ಅನೇಕ ಒತ್ತಡಗಳ ನಡುವೆ ಮನುಷ್ಯ ತನ್ನ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಬೇಲೂರು ಲಯನ್ಸ್ ಜನಪರ ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜನರಿಗೆ ಹತ್ತಿರವಾಗಿದೆ ಎಂದ ಅವರು ಆರೋಗ್ಯ ಶಿಬಿರದಲ್ಲಿ ತಪ್ಪದೆ ಎಲ್ಲರೂ ಭಾಗವಸಬೇಕು ಎಂದರು. ಡಾ. ಚಂದ್ರಮೌಳಿ, ಪ್ರಭಾಕರ್, ಡಾ. ದೇವದಾಸ್, ಸೆಬೆಸ್ಟನ್, ರವಿಕುಮಾರ್, ಸುರೇಶ್ ಇದ್ದರು.