ಗೆಂಡೆಕಟ್ಟೆ ಜಿಂಕೆಗಳಿಗೆ ಗಂಡಾಂತರ
ನಗರದ ಹೊರವಲಯದಲ್ಲಿರುವ ಗೆಂಡೆಕಟ್ಟೆ ವನ್ಯಪ್ರಾಣಿ ವನದ ನಿರ್ವಹಣೆ ಅವ್ಯವಸ್ಥೆಯಿಂದ ಕೂಡಿದ್ದು, ಇಲ್ಲಿರುವ ಜಿಂಕೆಗಳು ಸಾವನ್ನಪ್ಪುತ್ತಿವೆ.
ಹಾಸನ: ನಗರದ ಹೊರವಲಯದಲ್ಲಿರುವ ಗೆಂಡೆಕಟ್ಟೆ ವನ್ಯಪ್ರಾಣಿ ವನದ ನಿರ್ವಹಣೆ ಅವ್ಯವಸ್ಥೆಯಿಂದ ಕೂಡಿದ್ದು, ಇಲ್ಲಿರುವ ಜಿಂಕೆಗಳು ಸಾವನ್ನಪ್ಪುತ್ತಿವೆ.
ಅರಣ್ಯ ಇಲಾಖೆಯು 1995ರಲ್ಲಿ ಈ ವನ್ಯಪ್ರಾಣಿ ವನವನ್ನು ನಿರ್ಮಿಸಿ ನಗರದ ಜನತೆಗೆ ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಇಲ್ಲಿ ಚಿಂಕೆ, ನವಿಲು, ಮೊಲ, ಬಾತುಕೋಳಿ, ಪಾರಿವಾಳಗಳನ್ನು ಸ್ವಚ್ಛಂದವಾಗಿ ಆಟವಾಡಲು ಬಿಟ್ಟು ಜನತೆಯ ಆಕರ್ಷಣೆಗೆ ಕಾರಣವಾಗಿತ್ತು.
ಹಾಸನ ನಗರದ ಸಾರ್ವಜನಿಕರಿಗೆ ವಾರದ ಕೊನೆ ದಿನಗಳನ್ನು ಕಳೆಯಲು ಇರುವುದೊಂದೆ ತಾಣವಾಗಿದೆ. ಹಾಸನ ಬಿಟ್ಟರೆ ಇಲ್ಲಿನ ಸಾರ್ವಜನಿಕರು ಬೇಲೂರು, ಹಳೇಬೀಡು, ಸಕಲೇಶಪುರ, ಶ್ರವಣಬೆಳಗೊಳ, ರಾಮನಾಥಪುರಗಳಂತಹ ಪ್ರವಾಸಿ ತಾಣಗಳಿಗೆ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಲ್ಲಿನ ಜನರಿಗಾಗಿ ಈ ವನ್ಯಪ್ರಾಣಿ ವನವನ್ನು ನಿರ್ಮಿಸಲಾಯಿತು. ಇದು 'ಟೈಂಪಾಸ್'ಗೆ ಹೇಳಿ ಮಾಡಿಸಿದ ಜಾಗವಾಗಿತ್ತು.
ಪ್ರಾರಂಭದಲ್ಲಿ ಇಲ್ಲಿಗೆ ಶನಿವಾರ ಹಾಗೂ ಭಾನುವಾರ ನಗರದ ಜನತೆ ತೆರಣ ಸಮಯ ಕಳೆಯುತ್ತಿದ್ದರು. ಕೆಲ ಕ್ಷಣಗಳು ಮೈಮರಿತು ದಿನದ ಜಂಜಾಟವನ್ನು ಮರೆತು. ಉತ್ತಮ ಗಾಳಿ, ಸ್ವಚ್ಛಂದ ಪರಿಸರವನ್ನು ಅನುಭವಿಸುತ್ತಿದ್ದರು. ಮಕ್ಕಳೋಪಾದಿಯಲ್ಲಿ ಜನರು ಬಂದು ರಜೆ ದಿನಗಳಲ್ಲಿ ಯಾವುದೇ ಒತ್ತಡವಿಲ್ಲದೆ ಸಮಯ ಕಳೆದು ಆನಂದಿಸುತ್ತಿದ್ದರು. ಮಕ್ಕಳಿಗೆ ಆಟಿಕೆಗಳನ್ನು ಸಹ ಇಲ್ಲಿ ನಿರ್ಮಿಸಲಾಗಿತ್ತು.
ಜಿಂಕೆಗಳ ಸಾವು: ಕಾಲಕ್ರಮೇಣ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಇಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ವನ್ಯಪ್ರಾಣಿ ವನದ ನಿರ್ವಹಣೆಯ ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ಹಾಳಾಗುತ್ತಿದೆ. ವನ್ಯ ಜೀವಿಗಳ ಸಂತತಿಯನ್ನು ಅರಣ್ಯ ಇಲಾಖೆಯವರು ವೃದ್ಧಿಸುವ ಬದಲಾಗಿದೆ. ಅವುಗಳ ಮಾರಣಹೋಮಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಇಲ್ಲಿನ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ವನ್ಯ ಪ್ರಾಣಿಗಳು ಅನಾರೋಗ್ಯದಿಂದ ಬಳಲುತ್ತಿವೆ. ವನ್ಯ ತಾಣದಲ್ಲಿ ಪ್ರಾಣಿಗಳ ಸಲಹುವಿಕೆ ಸರಿಯಾಗಿ ಹಾಗೂ ಆರೋಗ್ಯ ಪೂರಕವಾಗಿ ನಡೆಯದ ಕಾರಣ ಜಿಂಕೆಗಳು ಸಾವನ್ನಪ್ಪುತ್ತಿದ್ದಾವೆ. ಸುಮಾರು 20ರಿಂದ 40ರಷ್ಟು ಜಿಂಕೆಗಳಿದ್ದ ಈ ತಾಣದಲ್ಲಿ ಪ್ರಸ್ತುತ ನೋಡುಗರ ಕಣ್ಣಿಗೆ ಕೇವಲ ಬೆರಳೆಣಿಕೆಯಷ್ಟು ಜಿಂಕೆ ಮಾತ್ರ ಕಾಣಲು ಸಿಗುತ್ತವೆ.
ಕೆಲವು ಪ್ರವಾಸಿಗರು ಜಿಂಕೆಗೆ ಹುಲ್ಲು ಹಾಗೂ ಬಿಸ್ಕೆಟ್ಗಳನ್ನು ತಿನ್ನಿಸಲು ಹಾಗೂ ಅವುಗಳನ್ನು ನೋಡಲು ಬರುತ್ತಾರೆ. ಆದರೆ ನಿರ್ವಹಣೆಯ ಸಮಸ್ಯೆಯಿಂದಾಗಿ ಜಿಂಕೆಗಳು ಸಾವನ್ನಪ್ಪುತ್ತಿವೆ. ಇದರಿಂದ ಜಿಂಕೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗತೊಡೆಗಿದೆ.
ಅನೈತಿಕ ತಾಣವಾಗುತ್ತಿದೆ: ಸಾರ್ವಜನಿಕರ ಪ್ರವಾಸಿ ತಾಣವಾಗಬೇಕಿದ್ದ ಗೆಂಡೆಕಟ್ಟೆ ವನ್ಯಪ್ರಾಣಿ ವನವು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸುತ್ತಿದೆ. ಇಲ್ಲಿ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗುತ್ತಿದೆ. ಸಾಕಷ್ಟು ಮದ್ಯವ್ಯಸನಿಗಳು ಇಲ್ಲಿ ಮದ್ಯ ಸೇವನೆ ಮಾಡುತ್ತಿರುವುದರಿಂದ ಇಲ್ಲಿನ ಪರಿಸರ ಹಾಳಾಗುತ್ತಿದೆ. ಮದ್ಯದ ವಸ್ತುಗಳನ್ನು, ಬಾಟಲ್ಗಳನ್ನು ಅರಣ್ಯದೊಳಗೆ ಬಿಟ್ಟು ಹೋಗುವುದರಿಂದ ಮಲೀನತೆ ಹೆಚ್ಚಾಗುತ್ತಿದೆ. ಪರಿಸತ ತಾಣವಾಗುವ ಬದಲು ಅನೈರ್ಮಲ್ಯ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇದರತ್ತ ಗಮನ ಹರಿಸಿ ಹಾಸನದ ಜನತೆಗೆ ಪ್ರವಾಸಿ ತಾಣವನ್ನಾಗಿಯೇ ಉಳಿಸಬೇಕಾಗಿದೆ.
- ಪಿ.ರವಿಕುಮಾರ್