ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೇತ್ರದಾನದಿಂದ ಅಂಧರಿಗೆ ಬೆಳಕಾಗೋಣ

Rashmi Kasaragodu
Updated On : 12 Sept 2013, 12:02 pm

ಕನ್ನಡಪ್ರಭ ವಾರ್ತೆ, ಹೊಳೆನರಸೀಪುರ, ಸೆ.11
ನಮ್ಮ ಸಾವಿನ ನಂತರದಲ್ಲಿ ಹೂತರೆ ಮಣ್ಣಾಗುವ ಇಲ್ಲವೇ ಸುಟ್ಟರೆ ಬೂದಿಯಾಗುವ ನಮ್ಮ ಕಣ್ಣುಗಳನ್ನು ಉದಾರವಾಗಿ ದಾನ ಮಾಡುವ ಮೂಲಕ ಕತ್ತಲು ತುಂಬಿರುವ ಅಂಧರ ಬಾಳಿಗೆ ಬೆಳಕಾಗೋಣ ಎಂದು ಇಲ್ಲಿನ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ. ಕೆ. ಶ್ರೀನಿವಾಸಮೂರ್ತಿ ಕರೆ ನೀಡಿದರು.
28ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆಯ ಅಂಗವಾಗಿ ಇಲ್ಲಿನ ಲಯನ್ಸ್ ಸಂಸ್ಥೆ ಹಾಗೂ ತಾಲೂಕು ವಕೀಲರ ಸಂಘವು ಇಲ್ಲಿನ ನ್ಯಾಯಾಲಯ ಆವರಣದ ವಕೀಲರ ಸಂಘದ ಕಟ್ಟಡದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೇತ್ರದಾನ ಮಹತ್ವದ ಕುರಿತಂತೆ ಮಾತನಾಡಿದ ಅವರು, ನೇತ್ರದಾನದ ಮೂಲಕ ಕಣ್ಣಿಲ್ಲದ ಇನ್ನಷ್ಟು ಜನರು ಈ ಸುಂದರ ಜಗತ್ತನ್ನು ನೋಡುವಂತಾಗಲಿ ಎಂದರು.
ನೇತ್ರದಾನದ ಕುರಿತಂತೆ ನಮ್ಮ ಸಮಾಜದಲ್ಲಿ ಇಂದಿಗೂ ಪೂರ್ವಾಗ್ರಹ ಹಾಗೂ ಮೌಢ್ಯತೆಯು ತುಂಬಿಕೊಂಡಿದ್ದು, ವೈಜ್ಞಾನಿಕವಾಗಿ ಮುಂದುವರೆದಿರುವ ಪ್ರಜ್ಞಾವಂತರೆನಿಸಿಕೊಂಡಿರುವ ನಾವುಗಳು ನೇತ್ರದಾನದ ಕುರಿತಂತೆ ಅಷ್ಟಾಗಿ ಮುಂದಾಗದಿರುವುದು ವಿಷಾದನೀಯ ಎಂದ ಅವರು, ಮಾನವೀಯತೆಯನ್ನು ಮೈಗೂಡಿಸಿಕೊಂಡು ನಮ್ಮ ಸಾವಿನ ನಂತರವೂ ಇನ್ನೊಬ್ಬರ ಮೂಲಕ ಜಗತ್ತನ್ನು ನೋಡುವ ಮಹಾತ್ಕಾರ್ಯಕ್ಕೆ ಎಲ್ಲರೂ ಒಮ್ಮನಸ್ಸಿನಿಂದ ಮುಂದಾಗೋಣ ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ 250 ಮಂದಿ ಅಂಧರು: ಭಾರತದಲ್ಲಿ ಸುಮಾರು 15 ಲಕ್ಷ ಜನರು ಅಂಧತ್ವದಿಂದ ಬಳಲುತ್ತಿದ್ದು, ಪ್ರತಿ ವರ್ಷವೂ ಸುಮಾರು 40ರಿಂದ 50 ಸಾವಿರ ಜನರು ವಿವಿಧ ಕಾರಣಗಳಿಂದಾಗಿ ಅಂಧತ್ವಕ್ಕೆ ಗುರಿಯಾಗುತ್ತಿದ್ದಾರೆ ಮಾಹಿತಿ ನೀಡಿದ ಅವರು, ಇಂತಹ ಪರಿಸ್ಥಿತಿಯಲ್ಲಿ ಮೃತ ದಾನಿಗಳಿಂದ ಸ್ವಯಂಪ್ರೇರಿತವಾಗಿ ದೊರೆಯುತ್ತಿರುವ ಕಣ್ಣುಗಳ ಸಂಖ್ಯೆ ಕೇವಲ 25 ಸಾವಿರ ಮಾತ್ರ ಎಂದು ವಿಷಾದ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯಲ್ಲಿಯೂ ಕೂಡ ಸುಮಾರು 250ರಿಂದ 300 ಜನರು ವಿವಿಧ ಅಂಧತ್ವಕ್ಕೆ ಒಳಗಾಗಿ ಈ ಜಗತ್ತನ್ನು ನೋಡುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್. ಬಾಷಂ ಅವರು ಮಾತನಾಡಿ, ತಮ್ಮ ಬಾಲ್ಯದಲ್ಲಿಯೇ ಆಟದ ಸಮಯದಲ್ಲಿ ತಮ್ಮ ಒಂದು ಕಣ್ಣನ್ನು ಕಳೆದುಕೊಂಡು ಇಂದಿನವರೆಗೂ ಒಂದು ಕಣ್ಣಿನಿಂದಲೇ ತಮ್ಮ ಜೀವನವನ್ನು ದೂಡುತ್ತಿರುವ ತಮಗೆ ಕಣ್ಣಿನ ಮಹತ್ವ ಅರಿವಾಗಿದ್ದು, ತಮ್ಮ ಸಾವಿನ ನಂತರ ತಮಗಿರುವ ಒಂದು ಕಣ್ಣಾದರೂ ಇನ್ನೊಬ್ಬರ ಬಾಳಿಗೆ ಬೆಳಕಾಗಲು ತಮ್ಮ ಕಣ್ಣನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಸ್ವಯಂಪ್ರೇರಿತ ನೇತ್ರದಾನ: ಕಾರ್ಯಕ್ರಮದಲ್ಲಿ ಮಾತನಾಡಿದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಚ್.ಆರ್. ಮುಕುಂದೇಗೌಡ ಅವರು, ಎಲ್ಲರಲ್ಲೂ ನೇತ್ರದಾನದ ಬಗ್ಗೆ ಪ್ರಜ್ಞಾವಂತಿಕೆ ಮೂಡಿಸಿ ನೇತ್ರದಾನದ ಕುರಿತಂತೆ ಸಮಾಜಕ್ಕೆ ಅರಿವು ಮೂಡಿಸುವುದು ಲಯನ್ಸ್ ಸಂಸ್ಥೆಯ ಗುರಿಯಾಗಿದೆ. ನೇತ್ರದಾನಕ್ಕಾಗಿ ಕೇವಲ ಅರ್ಜಿಯನ್ನು ಭರ್ತಿ ಮಾಡಿ ನೀಡಿದರಷ್ಟೇ ಸಾಲದು. ನಮ್ಮ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನವಾಗಿ ನೀಡುವ ಕುರಿತಂತೆ ನಾವುಗಳು ನಮ್ಮ ಕುಟುಂಬಕ್ಕೆ ನಮ್ಮ ದಾನದ ಉದ್ದೇಶ ಹಾಗೂ ಅದರ ಮಹತ್ವದ ಕುರಿತು ಅರಿವು ಮೂಡಿಸುವಂತೆ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಡಿ. ಕಂಬೇಗೌಡ ಅವರು ಮಾತನಾಡಿ, ಪರೋಪಕಾರಿಯಾಗಿ ಬದುಕುವುದು ಬೇರೆ. ಆದರೆ ನಾವು ಸತ್ತ ನಂತರವೂ ಮತ್ತೊಬ್ಬರಿಗೆ ಉಪಕಾರಿಯಾಗಿ ನಮ್ಮ ನೇತ್ರವನ್ನು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗೋಣ ಎಂದರಲ್ಲದೇ, ತಮ್ಮ ಸಾವಿನ ನಂತರದಲ್ಲಿ ತಾವೂ ಕೂಡ ನೇತ್ರದಾನ ಮಾಡುವುದಾಗಿ ಸಭೆಯಲ್ಲಿ ಘೋಷಿಸಿದರು. ಈ ಕುರಿತಂತೆ ಸ್ವಯಂಪ್ರೇರಿತ ನೇತ್ರದಾನದ ಅಭಿಯಾನವನ್ನು ಕೈಗೊಳ್ಳುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ನಂತರದಲ್ಲಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ವಕೀಲರು, ನ್ಯಾಯಾಲಯ ಆವರಣದಿಂದ ಹೊರಟು ಗಾಂಧಿ ವೃತ್ತದವರೆಗೂ ಮೆರವಣಿಗೆಯಲ್ಲಿ ತೆರಳಿ ನೇತ್ರದಾನದ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ವಕೀಲರ ಸಂಘದ ಉಪಾಧ್ಯಕ್ಷೆ ಕಾಮಾಕ್ಷಿ ಇದ್ದರು. ಲಯನ್ಸ್ ಸಂಸ್ಥೆಯ ಖಜಾಂಚಿ ಎಂ.ಎನ್. ಜೈಪ್ರಕಾಶ್ ನಿರೂಪಿಸಿದರು. ವಕೀಲ ಆರ್.ಡಿ. ರವೀಶ್ ಸ್ವಾಗತಿಸಿದರು. ವಕೀಲ ಬಿ.ಆರ್. ಪುರುಷೋತ್ತಮ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement