ವಿದ್ಯುತ್ ಪರಿವರ್ತಕ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ
ಹಾರನಹಳ್ಳಿ: ಚನ್ನಕೇಶವ ದೇವಾಲಯ ಮುಂಭಾಗ ಇಟ್ಟಿರುವ ವಿದ್ಯುತ್ ಪರಿವರ್ತಕವನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರ ಆಗ್ರಹವಾಗಿದೆ.
ತೋಟದಿಂದ ಬರುತ್ತಿದ್ದ ಹಸುಗಳು ರಸ್ತೆ ಬದಿಯಲ್ಲಿಟ್ಟಿರುವ ವಿದ್ಯುತ್ ಪರಿವರ್ತಕ ಗ್ರೌಂಡ್ ಆಗಿ ದನಗಳು ಒದ್ದಾಟ ನಡೆಸಿದಾಗ ಅಲ್ಲೇ ಇದ್ದ ಮಾಜಿ ಯೋಧ ನೀಲಲೋಚನಸ್ವಾಮಿ ಹಾಗೂ ಗ್ರಾಮಸ್ಥರು ಎಂಇಎಸ್ಎಸ್ ಕೇಂದ್ರಕ್ಕೆ ಕರೆ ಮಾಡಿ ಕರೆಂಟ್ ತೆಗೆಸಿದರು. ಇದರಿಂದ ದೊಡ್ಡ ಪ್ರಮಾಣದ ಅವಘಡ ತಪ್ಪಿದೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಸ್ವಾಮಿ ಅವರು, ಊರಿನ ಮಧ್ಯದಲ್ಲಿರುವ 3 ಟಿ.ಸಿ. ಸುಮಾರು 300 ಕೆ.ವಿ. ಸಾಮರ್ಥ್ಯದ ಟಿ.ಸಿ.ಗಳನ್ನು ಇಡಲಾಗಿದ್ದು ಇಲ್ಲಿ ಯಾವಾಗಲೂ ಗ್ರೌಂಡ್ ಆಗುತ್ತಲೇ ಇದೆ.
ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಮಕ್ಕಳು, ದನ ಇಲ್ಲೆ ಸಂಚರಿಸುತ್ತಾ ಇರುತ್ತಾರೆ. ಅಲ್ಲದೇ ಹೊಯ್ಸಳ ಕಾಲದ ದೇವಾಲಯಕ್ಕೆ ದೇಶ-ವಿದೇಶಿ ಪ್ರವಾಸಿಗರು ಬರುತ್ತಿರುವುದರಿಂದ ದೇವಾಲಯದ ಸಮೀಪವಿರುವ ಈ ಟಿ.ಸಿ. ಇರುವುದರಿಂದ ನೋಟಕ್ಕೆ ಧಕ್ಕೆಯಾಗಿದೆ ಮತ್ತು ರಾಜ್ಯ ಸಂರಕ್ಷಿತ ಸ್ಮಾರಕವಾಗಿರುವುದರಿಂದ ಯಾವುದೇ ಸ್ಮಾರಕಗಳ ಸಮೀಪ ವಿದ್ಯುತ್ ಪರಿವರ್ತಕಗಳನ್ನು ಇಡಬಾರದೆಂಬ ನಿಯಮವಿದ್ದರೂ ಈ ಸ್ಥಳದಲ್ಲಿ ವಿದ್ಯುತ್ ಪರಿವರ್ತಕವನ್ನು ಕೂಡಲೇ ಊರಿನಿಂದ ಹೊರಕ್ಕೆ ಬದಲಾವಣೆ ಮಾಡಬೇಕೆಂದು ಹಾಗೂ ತಕ್ಷಣ ಚೆಸ್ಕಾಂ ಅಧಿಕಾರಿಗಳು ಈ ಟಿ.ಸಿ. ಸಮೀಪ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.
ಈ ವಿಷಯದ ಬಗ್ಗೆ ಚೆಸ್ಕಾಂ ಅಧಿಕಾರಿಗಳಿಗೆ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.