ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಸಕರ ಹಕ್ಕು ಮೊಟಕು ಯತ್ನ ನಡೆದಿಲ್ಲ

Rashmi Kasaragodu
Updated On : 12 Sept 2013, 12:01 pm

ಕನ್ನಡಪ್ರಭ ವಾರ್ತೆ, ಹಾಸನ. ಸೆ.11
ಉಸ್ತುವಾರಿ ಸಚಿವರು ಕೆಲ ಕಾಂಗ್ರೆಸ್ ಮುಖಂಡರೊಡನೆ ಹೋಗಿ ದುದ್ದ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ್ದ ವಿಚಾರ ವಿವಾದ ಬುಧವಾರ ನಡೆದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರತಿಧ್ವನಿಸಿತು.
ಜೆಡಿಎಸ್ ಶಾಸಕರು, ತಮ್ಮನ್ನು ಸೌಜನ್ಯಕ್ಕಾದರೂ ಆಹ್ವಾನಿಸದೇ ರಸ್ತೆ ಪರಿಶೀಲನೆ ನಡೆಸಿದ್ದು ಸರಿಯಲ್ಲ. ದುದ್ದ ರಸ್ತೆ ಕಾಮಗಾರಿ ಆರಂಭಿಸಲು ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗಿದೆ. ಅದನ್ನು ಮರೆತು ಕೆಲ ಕಾಂಗ್ರೆಸ್ ಮುಖಂಡರು, ಜನರಲ್ಲಿ ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾತನಾಡುತ್ತಿದ್ದಾರೆ. ಮೂರನೇ ದರ್ಜೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಮರೆಮಾಚುವ ಯತ್ನ ಸರಿಯಲ್ಲ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ದುದ್ದ ರಸ್ತೆ ಆರಂಭಿಸಲು ನ್ಯಾಯಾಲಯವೇ ತಾಕೀತು ಮಾಡಿದೆ. ನಾನು ಅಂದಾಜು ಸಮಿತಿ ಸದಸ್ಯನಾಗಿ ಮತ್ತು ರೇವಣ್ಣ ಅವರು ಸಾರ್ವಜನಿಕ ಲೆಕ್ಕ ಪರಿಶೀಲನೆ ಸಮಿತಿ ಅಧ್ಯಕ್ಷರಾಗಿ ಈ ರಸ್ತೆ ಕಾಮಗಾರಿ ಆರಂಭಿಸಲು ಅವಿರತ ಶ್ರಮ ಹಾಕಿದ್ದೇನೆ. ಇದನ್ನು ಮರೆಮಾಚುವ ಯತ್ನ ಸರಿಯಲ್ಲ. ಉಗ್ರವಾಗಿ ಖಂಡಿಸಲೇಬೇಕಾಗುತ್ತದೆ ಎಂದು ಅಬ್ಬರಿಸಿದರು.
ಅಷ್ಟೇ ಅಲ್ಲದೆ ರಂಗಾಪುರ ಕಾವಲಿನಲ್ಲಿ ಕಲ್ಲು ತೆಗೆಯುವ ವಿಚಾರದಲ್ಲಿ ಜೆಡಿಎಸ್ ಮುಖಂಡರು ಸುಮಾರು 10 ಕೋಟಿ ಹಣವನ್ನು ನುಂಗಿದ್ದಾರೆ ಎಂದು ಬಿಂಬಿಸಿದ್ದಾರೆ. ಈ ಬಗ್ಗೆ ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧವಿದ್ದು, ನಾನೇನಾದರು ಹಣವನ್ನು ತೆಗೆದುಕೊಂಡಿರುವುದು ಸಾಬೀತಾದರೇ ನನ್ನ ಕೈಗಳನ್ನು ಕತ್ತರಿಸಿಕೊಳ್ಳುತ್ತೇನೆ ಎಂದ ಶಾಸಕ ಶಿವಲಿಂಗೇಗೌಡರು, ಅರಸೀಕೆರೆ ತಾಲೂಕಿನಲ್ಲಿ ಅಧಿಕಾರಿಗಳ ವರ್ಗಾವಣೆಯನ್ನು ಅನಗತ್ಯವಾಗಿ ಮಾಡಿಸಲಾಗುತ್ತಿದೆ. ಇದೇ ರೀತಿ ಕಳೆದ 4 ತಿಂಗಳಿನಿಂದ ದೌರ್ಜನ್ಯ ನಡೆಸಲಾಗುತ್ತಿದೆ. ಇದರಿಂದ ತಾಲೂಕಿನ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾವೇನಾದರೂ ತಪ್ಪು ಮಾಡಿದ್ದರೆ ಶಿಕ್ಷೆಗೆ ಬದ್ಧವಾಗುತ್ತೇವೆ. ಅಭಿವೃದ್ಧಿಯ ಕೆಲಸವನ್ನು ಮಾಡಲಿ. ಅದನ್ನು ಬಿಟ್ಟು ಸಣ್ಣತನದ ರಾಜಕಾರಣ ಮಾಡುವುದು ಬೇಡ ಎಂದು ಹೇಳಿದರು.
ಅನ್ಯತಾ ಭಾವಿಸುವುದು ಬೇಡ: ಆಗ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಮಾತನಾಡಿ, ದುದ್ದ ರಸ್ತೆ ಪರಿಶೀಲನೆ ಭೇಟಿ ನೀಡಿದ್ದು ಅನಿರೀಕ್ಷಿತ. ಪೂರ್ವ ನಿಯೋಜಿತ ಕಾರ್ಯಕ್ರಮವಲ್ಲ. ಶಂಕುಸ್ಥಾಪನೆ ಕಾರ್ಯಕ್ರಮವೂ ಅಲ್ಲ. ಈ ಹಿಂದೆ ರೇವಣ್ಣ ಮತ್ತು ಶಿವಲಿಂಗೇಗೌಡರು ವಿಧಾನಸಭೆಯೊಳಗೆ ದುದ್ದ ರಸ್ತೆ ಕಾಮಗಾರಿ ಆರಂಭಿಸುವ ವಿಷಯ ಪ್ರಸ್ತಾಪಿಸಿದ್ದರು. ಈ ಬಗ್ಗೆ ನಾನು ಕ್ರಮ ತೆಗೆದುಕೊಳ್ಳುವುದಾಗಿ ಭೇಟಿ ನೀಡಿದ್ದೇ ಅಷ್ಟೇ. ಯಾವುದೇ ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶವಿಲ್ಲ. ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಹಾಗಾಗಿ ಅನ್ಯತಾ ಭಾವಿಸಬೇಕಾಗಿಲ್ಲ. ಬೇಸರ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ಈ ವಿಚಾರವನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಹೇಳಿದರು. ಇದರಿಂದ ಜೆಡಿಎಸ್ ಶಾಸಕರು, ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಸಭೆಯ ವರದಿ: ಜಿಲ್ಲೆಯಲ್ಲಿ ಸರ್ಕಾರದ ಯೋಜನೆಗಳ ತ್ವರಿತ ಅನುಷ್ಠಾನ, ಸರ್ಕಾರಿ ಕಚೇರಿಗೆ ಅಲಿಯುವಂತಹ ಬಡವರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವ ಮತ್ತು ಜನರ ಭಾವನೆಗೆ ಗೌರವ ತರುವಂತಹ ಕಾರ್ಯವನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹೇದೇವಪ್ಪ ಆದೇಶಿಸಿದರು.
ಜನರ ಸರ್ಕಾರ ಇದಾಗಿದ್ದು, ಜಿಲ್ಲಾಡಳಿತವನ್ನು ನಂಬಿ ಬರುವಂತಹ ಜನರ ನಂಬಿಕೆಯನ್ನು ಹುಸಿಗೊಳಿಸದೆ ನಂಬಿಕೆ ಮೂಡಿಸಿ ಅವರ ಕೆಲಸವನ್ನು ಮಾಡಿಕೊಡಬೇಕು ಎಂದ ಅವರು, ಜಿಲ್ಲೆಯ ನಾನಾ ಇಲಾಖೆಗಳಲ್ಲಿ ಇರುವಂತಹ ಸಿಬ್ಬಂದಿ ಕೊರತೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.
ಶೇ.50ರಷ್ಟು ಸಬ್ಸಿಡಿ ಬಗ್ಗೆ ಚರ್ಚೆ: ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಬಿತ್ತನೆ ಬೀಜಗಳ ಖರೀದಿ ವಿಚಾರದಲ್ಲಿ ರೈತರು ಖರೀದಿಸಿದಂತಹ ದರಕ್ಕೆ ಶೇ.50ರಷ್ಟು ಸಬ್ಸಿಡಿ ನೀಡುವ ಬಗ್ಗೆ ಸಚಿವರೊಂದಿಗೆ ಚರ್ಚಿಸಲಾಗುತ್ತದೆ. ಯಾವುದೇ ಬೆಳೆಯನ್ನು ಕೈಗೊಂಡಿರುತ್ತಾರೆ. ಅಂತಹ ಸಂದರ್ಭದಲ್ಲಿ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಹಾಗೂ ಮಣ್ಣಿಗೆ ಬೇಕಾದಂತಹ ರಸಗೊಬ್ಬರದ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು. ಇವುಗಳ ಗುಣಮಟ್ಟವನ್ನು ಅಧಿಕಾರಿಗಳು ಕಾಯ್ದುಕೊಂಡರೆ ಉತ್ತಮ ಬೆಳೆ ತೆಗೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಕಲಿ ಗೊಬ್ಬರದ ಬಗ್ಗೆ ಮತ್ತೆ ಯಾವುದೇ ರೀತಿಯ ದೂರುಗಳು ಬರದಂತೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚಿಸಿದ ಅವರು, ಮಳೆಯಿಂದ ಜಿಲ್ಲೆಯಲ್ಲಿ ಅಗಿರುವಂತಹ ನಷ್ಟಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಬೇಕು. ಜೊತೆಗೆ ತೆಂಗುಬೆಳೆಗೆ ಸಂಬಂಧಿಸಿದಂತೆ ಕೇಂದ್ರ ತಂಡ ಬಂದು ಅಧ್ಯಯನ ನಡೆಸಿದೆ. ಈ ಕುರಿತು ರಾಜ್ಯಮಟ್ಟದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿದರು. ಕೊಬ್ಬರಿ ಖರೀದಿ ಕೇಂದ್ರಗಳ ಅವಧಿಯನ್ನು ಮುಂದುವರೆಸುವ ಬಗ್ಗೆ ತೋಟಗಾರಿಕೆ ಸಚಿವರೊಂದಿಗೆ ನಾಳೆ ಮಾತಕತೆ ನಡೆಸಲಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿ ಸಮಸ್ಯೆ ಉಂಟು ಮಾಡುತ್ತಿರುವ ಮಕ್ನಾ ಆನೆಯನ್ನು ಕೋರ್ಟ್ ಆದೇಶದಂತೆ ಸೆರೆ ಹಿಡಿಯಲು ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗೆ ಆದೇಶಿಸಿದರು.
ರಸ್ತೆ ಸರಿ ಮಾಡಿ, ಪರಿಹಾರ ನೀಡಿ: ಇದ್ಕಕೂ ಮೊದಲು ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಮಂಡಿ ಎತ್ತರದ ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಪಶು ವೈದ್ಯಕೀಯ ಕಾಲೇಜಿಗೆ ಮಾನ್ಯತೆ ನೀಡದ ಕಾರಣ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದ ಅವರು, ಅತಿಯಾದ ಬರಗಾಲದಿಂದ ಅರಸೀಕೆರೆ ಹಾಗೂ ಚನ್ನರಾಯಪಟ್ಟಣದಲ್ಲಿ ಶೇ.50ರಷ್ಟು ತೆಂಗು ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಮಲೆನಾಡು ಭಾಗದಲ್ಲಿ ಅತಿಯಾದ ಮಳೆಯಿಂದಾಗಿ ಕಾಫಿ, ಏಲಕ್ಕಿ, ಮೆಣಸು ಸಂಪೂರ್ಣವಾಗಿ ನಾಶವಾಗಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಗೆ ಕಳೆದ 5 ವರ್ಷಗಳಿಂದ ಅಂಗಮಾರಿ ರೋಗ ಆವರಿಸಿ 400 ಕೋಟಿ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ವ್ಯವಸ್ಥೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಸಮರ್ಪಕ ಹಾಸ್ಟೆಲ್ ಸೌಕರ್ಯವಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಸಂಬಂಧಪಟ್ಟವರಿಗೆ ಪತ್ರ ಬರೆಯುವುದೇ ತಪ್ಪಾ ಎಂದು ಪ್ರಶ್ನಿಸಿದರು.
ಆದ್ದರಿಂದ ಜಿಲ್ಲೆಯಲ್ಲಿ ಅಧಿಕಾರಿಗಳು ನಿರ್ಭಯದಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಉಂಟಾಗಿರುವುದಕ್ಕೆ ಕೂಡಲೇ 25 ಕೋಟಿ ಬಿಡಗಡೆ ಮಾಡಬೇಕು ಎಂದರು.
ಅಂತರ್ಜಲ ಕುಸಿತ: ನಂತರ ಕೃಷಿ ಇಲಾಖೆಯ ಉಪ ನಿರ್ದೇಶಕ ಶಿವರಾಜ್ ಮಾತನಾಡಿ, ಇಲಾಖೆಯಲ್ಲಿ 197 ಸಿಬ್ಬಂದಿ ಕೊರತೆ, 74 ಕೃಷಿ ಸಹಾಯಕರ ಕೊರತೆ, 18 ಸಹಾಯಕ ಕೃಷಿ ಅಧಿಕಾರಿಗಳ ಕೊರತೆ ಉಂಟಾಗಿದೆ ಎಂದು ಮಾಹಿತಿ ನೀಡದ ಅವರು, ಜಿಲ್ಲೆಗೆ 1,11070 ಟನ್ ರಸಗೊಬ್ಬರದ ಗುರಿ ಹೊಂದಿದ್ದು, ಈ ಪೈಕಿ 82,226 ಟನ್ ರಸಗೊಬ್ಬರ ವಿತರಣೆಯಾಗಿದೆ. 26,333 ಟನ್ ಬಿತ್ತನೆ ಬೀಜಗಳ ಗುರಿ ಹೊಂದಿದ್ದು, 18,988 ಟನ್ ಸಾಧಿಸಲಾಗಿದ್ದು, ಜಿಲ್ಲೆಯು 4.92 ಲಕ್ಷ ಹೆಕ್ಟೇರ್ ವ್ಯವಸಾಯ ಭೂಮಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಕೀಲ್ ಅಹಮ್ಮದ್ ಮಾತನಾಡಿ, ಸಹಾಯ ತೋಟಗಾರಿಕೆಗೆ ಅಧಿಕಾರಿಗಳ ಹುದ್ದೆ ಸಾಕಷ್ಟ ಖಾಲಿ ಇದೆ. ಜೊತೆಗೆ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದೆ ಎಂದ ಅವರು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಆಲೂಗಡ್ಡೆ ಬೆಳೆಯು ಬೆಳೆಯುವರ ಸಂಖ್ಯೆ ಕಡಿಮೆಯಾಗಿದ್ದು, ಅಂಗಮಾರಿ ರೋಗ ಕಾರಣವಾಗಿದೆ. ತೆಂಗು ಬೆಳೆಗೆ ಸಂಬಂಧಿಸಿದಂತೆ ಅಂತರ್ಜಲ ಕುಸಿತ ಹಾಗೂ ತೇವಾಂಶದ ಕೊರತೆಯಿಂದ ಈ ಬೆಳೆ ನಾಶವಾಗುತ್ತಿದೆ ಎಂದರು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್ ಮಾತನಾಡಿ, ಜಿಲ್ಲೆಯಲ್ಲಿ 51 ಸಾವಿರ ಹೆಕ್ಟೇರ್ ಪ್ರದೇಶ ಅಧಿಸೂಚಿತ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಆನೆ, ಕರಡಿ ಹಾಗೂ ಚಿರತೆಗಳ ಸಮಸ್ಯೆ ಹೆಚ್ಚಿದೆ. ಆಲೂರು ಭಾಗದಲ್ಲಿ 30ರಿಂದ 36 ಆನೆಗಳ ಹಿಂಡಿದೆ. ಮೂರ್ಕಲ್ಲು ಗುಡ್ಡ, ಹುಚ್ಚಂಗಿ ಸೇರಿದಂತೆ ಈ ಭಾಗದಲ್ಲಿ 6ರಿಂದ 80 ಆನೆಗಳ ತಂಡ ಬೀಡು ಬಿಟ್ಟಿವೆ. ಜೊತೆಗೆ ಒಂದೇ ಒಂದು ಮಕ್ನಾ ಆನೆ ಜಿಲ್ಲೆಯಲ್ಲಿದ್ದು, ಹಿಡಿಯಲು ನ್ಯಾಯಾಲಯದಿಂದ ಅನುಮತಿ ದೊರೆತಿದ್ದು, ದಿನಗಳಲ್ಲಿ ಆ ಆನೆಯನ್ನು ಸೆರೆ ಹಿಡಿಯುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಎ. ಮಂಜು, ರುದ್ರೇಶ್ಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಚೌಡಯ್ಯ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್, ಜಿಪಂ ಸಿಇಒ ಉಪೇಂದ್ರ ಪ್ರತಾಪ್ಸಿಂಗ್ ಇದ್ದರು.


ವಿಳಂಬವಾಗಿ ಬಂದ ಕಾಂಗ್ರೆಸ್ ಶಾಸಕರು
ದುದ್ದ ರಸ್ತೆ ವಿಚಾರ ಪ್ರಸ್ತಾಪವಾದಾಗ ಕಾಂಗ್ರೆಸ್ ಶಾಸಕರಾದ ಎ. ಮಂಜು, ವೈ.ಎನ್. ರುದ್ರೇಶ್ಗೌಡ ಇರಲಿಲ್ಲ. ಈ ಬಗ್ಗೆ ಚರ್ಚೆಯಾದ ನಂತರ ಇಬ್ಬರು ಶಾಸಕರು ಸಭಾ ಪ್ರವೇಶ ಮಾಡಿದರು. ಸುಮಾರು 21 ನಿಮಿಷಗಳು ವಿಳಂಬವಾಗಿ ಬಂದರು.
ಶಾಸಕರ ನಡುವೆ ವಾಗ್ವಾದ
ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡುವಾಗ, ಅದಕ್ಕೆ ಪೂರಕವಾಗಿ ಜೆಡಿಎಸ್ ಶಾಸಕರು ಪ್ರಶ್ನೆ ಮಾಡುವಾಗ ಕಾಂಗ್ರೆಸ್ ಶಾಸಕರು ಅದಕ್ಕೆ ಪ್ರತಿರೋಧವನ್ನು ಒಡ್ಡಿದರು. ಅಧಿಕಾರಿಗಳು ಪೂರ್ತಿಯಾಗಿ ಮಾಹಿತಿ ನೀಡಲು ಅವಕಾಶ ನೀಡುವಂತೆ ಕಾಂಗ್ರೆಸ್ ಶಾಸಕ ಎ. ಮಂಜು ಹೇಳಿದರು. ಇದಕ್ಕೆ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯಿಸಿ, ನಾವು ಕೇಳೋದು ಇಂಗೇ... ತಮಗೆ ಬೇಕಾದ ರೀತಿಯಲ್ಲಿ ತಾವು ಕೇಳಿಕೊಳ್ಳಬಹುದು ಎಂದರು.


ದುದ್ದ ರಸ್ತೆ ಪರಿಶೀಲನೆಗೆ ಭೇಟಿ ನೀಡಿದ್ದು ಅನಿರೀಕ್ಷಿತ. ಪೂರ್ವ ನಿಯೋಜಿತ ಕಾರ್ಯಕ್ರಮವಲ್ಲ. ಶಂಕುಸ್ಥಾಪನೆಕಾರ್ಯಕ್ರಮವೂ ಅಲ್ಲ. ಈ ಹಿಂದೆ ರೇವಣ್ಣ ಮತ್ತು ಶಿವಲಿಂಗೇಗೌಡರು ವಿಧಾನಸಭೆಯೊಳಗೆ ದುದ್ದ ರಸ್ತೆ ಕಾಮಗಾರಿ ಆರಂಭಿಸುವ ವಿಷಯ ಪ್ರಸ್ತಾಪಿಸಿದ್ದರು. ಈ ಬಗ್ಗೆ ನಾನು ಕ್ರಮ ತೆಗೆದುಕೊಳ್ಳುವುದಾಗಿ ಭೇಟಿ ನೀಡಿದ್ದೇ ಅಷ್ಟೇ. ಯಾವುದೇ ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶವಿಲ್ಲ. ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ.
ಟಿ  ಡಾ. ಎಚ್.ಸಿ. ಮಹದೇವಪ್ಪ,
ಉಸ್ತುವಾರಿ ಸಚಿವ


ಅಧಿಕಾರಿಗಳ ಮೊಬೈಲ್ ವೀಕ್ಷಣೆ ಸಾಮಾನ್ಯ
ಸಭೆ ಪ್ರಾರಂಭವಾಗುವ ಮುನ್ನ ಜಿಲ್ಲಾ ಉಸ್ತವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅಧಿಕಾರಿಗಳೆಲ್ಲರೂ ತಮ್ಮ ಮೊಬೈಲ್ ಫೋನ್ ಬಂದ್ ಮಾಡುವಂತೆ ಸೂಚಿಸಿದರು. ಆದರೆ ಸಭೆಯ ಹಿಂಭಾಗದಲ್ಲಿ ಕುಳಿತಿದಂತಹ ಕೆಲ ಅಧಿಕಾರಿಗಳು ಮೊಬೈಲ್ನಲ್ಲಿ ಪೋಟೋ ಹಾಗೂ ವಿಡಿಯೋಗಳನ್ನು ನೋಡುತ್ತಿದ್ದದ್ದು ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement