ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿನಿಮಾಗಳು ಸಮಾಜದ ಸ್ವಾಸ್ಥ್ಯ ಕಾಪಾಡಲಿ: ಕೃಷ್ಣ

Rashmi Kasaragodu
Updated On : 11 Sept 2013, 11:56 am

ಕನ್ನಡಪ್ರಭ ವಾರ್ತೆ, ಹಾಸನ, ಸೆ.11
ಸಿನಿಮಾಗಳು ನೈತಿಕ ಮೌಲ್ಯಗಳಿಂದ ಕೂಡಿ, ಆರೋಗ್ಯಕರವಾದ ಕಥೆಗಳನ್ನು ನಿರೂಪಿಸಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೃಷ್ಣ ಹೇಳಿದರು.
ತಾಲೂಕಿನ ಮೊಸಳೆ ಹೊಸಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿರುಚಿ ವೇದಿಕೆಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಅವರ 'ಬೇರು' ಚಲನಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಣ ದೋಚುವ ದುರಾಸೆಯಲ್ಲಿ ಇಂದಿನ ಸಿನಿಮಾಗಳು ನಮ್ಮ ಸಂಸ್ಕೃತಿ ಹರಣ ಮಾಡುತ್ತಿವೆ. ಸಂಗೀತ, ಸಂಭಾಷಣೆ, ಹಾಡು, ನೃತ್ಯ ಎಲ್ಲವೂ ಅಶ್ಲೀಲತೆಯ ಕೀಳು ಅಭಿರುಚಿಯಿಂದ ಕೂಡಿ ಯುವಜನತೆಯನ್ನು ತಪ್ಪು ದಾರಿಗೆಳೆದು, ಸಮಾಜದಲ್ಲಿ ಅತ್ಯಾಚಾರ, ಕೊಲೆ-ಸುಲಿಗೆಗಳು ಹೆಚ್ಚಾಗಲು ಪರೋಕ್ಷವಾಗಿ ಕಾರಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಿನಿಮಾ ಶಕ್ತಿಯುತ ಮಾಧ್ಯಮ: ಉಪನ್ಯಾಸಕ ಡಾ. ಡಿ. ಶ್ರೀನಿವಾಸ ಮಾತನಾಡಿ, ಸಿನಿಮಾ ಎಂಬುದು ಒಂದು ಶಕ್ತಿಯುತ ಮಾಧ್ಯಮ. ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡ ನಿರ್ದೇಶಕ ಈ ಸಮಾಜದ ಆರೋಗ್ಯವನ್ನು ಕಾಪಾಡುವ ವೈದ್ಯನಾಗುತ್ತಾನೆ. ಶೇಷಾದ್ರಿ ಅವರು ಅಂತಹ ಪ್ರಯತ್ನ ವನ್ನು ತಮ್ಮ 'ಬೇರು' ಚಿತ್ರದ ಮೂಲಕ ಮಾಡಿದ್ದಾರೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ವಿವಿಧ ಮಜಲುಗಳನ್ನು ಮನದಟ್ಟು ಮಾಡಿಕೊಡುತ್ತಲೇ, ಅದನ್ನು ಎದುರಿಸಬೇಕಾದ ಶಕ್ತಿಯನ್ನು ಇಂದಿನ ಯುವಕರು ಬೆಳೆಸಿಕೊಳ್ಳಬೇಕೆಂಬ ಮೌಲ್ಯಯುತ ಸಂದೇಶವನ್ನು ಈ ಚಿತ್ರದ ಮೂಲಕ ನೀಡಿದ್ದಾರೆ. ನಾವು ಈ ವ್ಯವಸ್ಥೆಯ ಒಂದು ಭಾಗ ಎನ್ನುವ ಪಲಾಯನವಾದದಿಂದ ಹೊರಬಂದು ವ್ಯವಸ್ಥೆಯನ್ನು ಸರಿಪಡಿಸ ಬೇಕೆಂಬ ಆಶಾವಾದ ಚಿತ್ರವು ಧ್ವನಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ. ಗೋಪಾಲ್, ಉತ್ತಮ ಆದರ್ಶಗಳಿಂದ ದೂರ ಸರಿದಿರುವ ಇಂದಿನ ಯುವಜನತೆ ದೃಶ್ಯ ಮಾಧ್ಯಮದ ನಕಾರಾತ್ಮಕ ಅಂಶಗಳಿಂದ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪ್ರಯೋಗಾತ್ಮಕ ಹಾಗೂ ಕಲಾತ್ಮಕ ಚಿತ್ರಗಳನ್ನು ನಿಯಮಿತವಾಗಿ ಪ್ರದರ್ಶಿಸುವ ಮೂಲಕ ಅವರಲ್ಲಿ ಉತ್ತಮ ಅಭಿರುಚಿ ಬೆಳೆಸುವ ಉದ್ದೇಶದಿಂದ ಆರಂಭಗೊಂಡಿರುವ ಈ ವೇದಿಕೆ ನಿರಂತರವಾಗಿ ಆ ಕಾರ್ಯವನ್ನು ಮುಂದುವರೆಸುತ್ತದೆ ಎಂಬ ಭರವಸೆ ನೀಡಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ಮಾದೇಗೌಡ, ಗ್ರಂಥಪಾಲಕ ಎನ್. ಮಂಜುನಾಥ್, ಉಪನ್ಯಾಸಕ ರಾಂಪ್ರಿಯ, ಕುಸುಮ, ಹರಿಪ್ರಸಾದ್, ದಿವ್ಯ, ಭವ್ಯ, ಅನಿತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement