ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಲಾವತಿ ನೂತನ ಅಧ್ಯಕ್ಷೆ

Mainashree
Updated On : 12 Sept 2013, 10:21 am

ಹೊಳೆನರಸೀಪುರ: ಇಲ್ಲಿನ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದು, ಅವಶ್ಯಕ ಬಹುಮತ ಹೊಂದಿದ್ದ ಜೆಡಿಎಸ್ ನಿರೀಕ್ಷೆಯಂತೆಯೇ ಎಚ್.ಆರ್.ಕಲಾವತಿ ಅಧ್ಯಕ್ಷೆಯಾಗಿ ಹಾಗೂ ಎಚ್.ಕೆ.ರಘುರಾಮ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
 ಪುರಸಭೆಗೆ ಚುನಾವಣೆ ನಡೆದು, ಸದಸ್ಯರು  ಆಯ್ಕೆಗೊಂಡು ಐದು ತಿಂಗಳು ಕಳೆದರೂ, ರಾಜ್ಯ ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ನಿಗಧಿಗೊಳಿಸಲು ವಿಳಂಬ ಮಾಡಿದ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿದ್ದ ಪುರಸಭೆಗೆ ಆಯ್ಕೆಗೊಂಡಿದ್ದ ಜನಪ್ರತಿನಿಧಿಗಳ ಅಧಿಕಾರ ಚಲಾವಣೆಗೆ ಇದೀಗ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯ ನಂತರ ಚಾಲನೆ ದೊರೆತಂತಾಗಿದೆ.
Ú ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕಾರಣ ಹಲವರು ಈ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದರೂ, ಜಿಲ್ಲೆಯ ಮಟ್ಟಿಗೆ ಜೆಡಿಎಸ್‌ನ ಹೈಕಮಾಂಡ್ ಎನಿಸಿರುವ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಅವರು ಸೂಚಿಸಿದ ಅಭ್ಯರ್ಥಿಗಳಷ್ಟೇ ಅಧಿಕಾರದ ಗದ್ದುಗೆ ಏರಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದಿದ್ದ ಕಾರಣ ಯಾರೊಬ್ಬರೂ ತಮ್ಮ ಅಭಿಲಾಷೆಯನ್ನು ಬಹಿರಂಗಗೊಳಿಸಿರಲಿಲ್ಲ.
 ಆದರೆ ಕನ್ನಡಪ್ರಭ ಪೂರ್ವ ಸಮೀಕ್ಷೆ ನಡೆಸಿ ಸಂಭಾವ್ಯ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆಯ ಕುರಿತಂತೆ ವರದಿ ಮಾಡಿತ್ತು. ಪತ್ರಿಕೆಯ ವರದಿಯಂತೆಯೇ ಪಟ್ಟಣದ 8ನೇ ವಾರ್‌ಡಿನಿಂದ ಆಯ್ಕೆಯಾಗಿದ್ದ ಜೆಡಿಎಸ್‌ನ ಎಚ್.ಆರ್.ಕಲಾವತಿ ಅಧ್ಯಕ್ಷೆ ಹಾಗೂ 23ನೇ ವಾರ್ಡ್‌ನಿಂದ ಎರಡನೇ ಬಾರಿಗೆ ಆಯ್ಕೆಗೊಂಡಿದ್ದ ಎಚ್.ಕೆ.ರಘುರಾಮ್ ಉಪಾಧ್ಯಕ್ಷರಾಗಿಯೂ ಆಯ್ಕೆಗೊಂಡರು.
 ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆಯು ಅವಿರೋಧವಾಗಿ ನಡೆಯುವ ಸಾಧ್ಯತೆಗಳಿದ್ದ ಇಲ್ಲಿನ ಪುರಸಭೆಯಲ್ಲಿ, ಕಡೆಯ ಗಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 11ನೇ ವಾರ್ಡ್‌ನಿಂದ ಆಯ್ಕೆಗೊಂಡಿದ್ದ ಸರಸ್ವತಿ ಅವರು ಅಧ್ಯಕ್ಷೆ ಸ್ಥಾನಕ್ಕೂ, 21ನೇ ವಾರ್ಡ್‌ನಿಂದ ಆಯ್ಕೆಗೊಂಡಿದ್ದ ಕಾಂಗ್ರೆಸ್‌ನ  ಎಚ್.ಎನ್.ರಾಘವೇಂದ್ರ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾರಣದಿಂದಾಗಿ ಅಂತಿಮವಾಗಿ ಚುನಾವಣೆ ನಡೆಯಿತು.
 ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ಶಿವಶಂಕರಪ್ಪ ಅವರು, ನಾಮಪತ್ರಗಳನ್ನು ಸ್ವೀಕರಿಸಿ, ನಿಗಧಿತ ಅವಧಿಯಲ್ಲಿ ಯಾರೊಬ್ಬರೂ ನಾಮಪತ್ರವನ್ನು ಹಿಂಪಡೆಯದ ಕಾರಣದಿಂದಾಗಿ ಚುನಾವಣೆ ನಡೆಸಿ ಸದಸ್ಯರು ಬಹುಮತದಿಂದ ಕೈ ಎತ್ತುವ ಮೂಲಕ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಿದರು.
 ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸರಸ್ವತಿ ಅವರೂ ಸೇರಿದಂತೆ ಕಾಂಗ್ರೆಸ್‌ನಿಂದ   ಆಯ್ಕೆಗೊಂಡಿರುವ 5 ಸದಸ್ಯರು  ಬೆಂಬಲ ಸೂಚಿಸಿ ಒಟ್ಟು 6ಜನರಷ್ಟೇ ಕೈ ಎತ್ತಿದರು. ಆದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ಆರ್.ಕಲಾವತಿ ಅವರಿಗೆ 16 ಸದಸ್ಯರು ಬೆಂಬಲ ಸೂಚಿಸಿ ಕೈ ಎತ್ತಿ ಬಹುಮತ ಸಾಬೀತಾದ ಕಾರಣದಿಂದಾಗಿ ಅಂತಿಮವಾಗಿ ಎಚ್.ಆರ್.ಕಲಾವತಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
 ನಂತರ ಉಪಾಧ್ಯಕ್ಷರ ಸ್ಥಾನದ ಆಯ್ಕೆಗೂ ಇದೇ ಪ್ರಕ್ರಿಯೆ ನಡೆದು ಅಂತಿಮವಾಗಿ ಬಹುಮತ ಸಾಬೀತುಪಡಿಸಿದ ಜೆಡಿಎಸ್‌ನ ಎಚ್.ಕೆ.ರಘುರಾಮ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆದರೆ 2ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದ ರಂಗನಾಥ್ ಯಾರಿಗೂ ಬೆಂಬಲ ಸೂಚಿಸದೇ ತಟಸ್ಥರಾಗಿ ಉಳಿದು ಗಮನಸೆಳೆದರು. ಕಂದಾಯ ಇಲಾಖೆಯ ಶಿರಸ್ತೇದಾರ್ ಉಲಿವಾಲ ಮೋಹನ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಹರೀಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement