ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಂದಲೇ ಗುಂಪುಗಾರಿಕೆ
ಕ.ಪ್ರ.ವಾರ್ತೆ, ಹೊಳೆನರಸೀಪುರ, ಸೆ. 12
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅವರಿಂದಲೇ ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದು ಇಲ್ಲಿನ ಪುರಸಭೆ ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಪುರಸಭೆ ಸದಸ್ಯ ಎಚ್.ಎನ್.ರಾಘವೇಂದ್ರ, ಜಯ ಕಾಂತಮ್ಮ, ಚೈತ್ರ, ಮುಖಂಡ ರಂಗಸ್ವಾಮಿ, ಇದ್ರೀಶ್ಖಾನ್, ಶೋಭ ಅವರು, ಜಿಲ್ಲಾಧ್ಯಕ್ಷರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೂ ತೆರಳಿ ಪಕ್ಷ ಸಂಘಟಿಸುತ್ತಿರುವುದಾಗಿ ಹೇಳಿಕೆ ನೀಡುತ್ತಿರುವುದರಿಂದ ಪಕ್ಷದ ಸಂಘಟನೆ ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜತೆಗೆ ಕೇವಲ ಪತ್ರಿಕಾ ಹೇಳಿಕೆ ನೀಡುವುದನ್ನು ಕೈಬಿಟ್ಟು ಅಯಾ ತಾಲೂಕಿನ ಹಾಗೂ ಕ್ಷೇತ್ರದ ಮೊದಲ ಸಾಲಿನ ಮುಖಂಡರನ್ನು ಸಂಪರ್ಕಿಸಿ ಅವರ ಮುಖೇನ ಪಕ್ಷ ಸಂಘಟನೆಗೆ ಚಾಲನೆ ನೀಡುವುದು ಒಂದು ರೀತಿಯಲ್ಲಿ ನಿಜವಾದ ನಾಯಕತ್ವದ ಗುಣ. ಆದರೆ ತಾವು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕೇವಲ ತಮ್ಮ ಗುಂಪಿನವರನ್ನು ಮುಂದಿಟ್ಟುಕೊಂಡು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗೆ ಜಿಲ್ಲಾಧ್ಯಕ್ಷರೇ ಉತ್ತರಿಸ ಬೇಕೆಂದು ಆಗ್ರಹಿಸಿದ್ದಾರೆ.
ಶಿವರಾಂ ಜಿಲ್ಲಾ ಅಧ್ಯಕ್ಷರಾದ ದಿನದಿಂದಲೂ ಜಿಲ್ಲೆಯಲ್ಲಿ ಛಿದ್ರವಾಗಿರುವ ಪಕ್ಷವನ್ನು ಸಂಘಟಿಸುವುದನ್ನು ಕೈಬಿಟ್ಟು ಕೇವಲ ತಮ್ಮದೇ ಗುಂಪು ಕಟ್ಟಿಕೊಂಡು ಪಕ್ಷ ಸಂಘಟಿಸುತ್ತಿದ್ದು, ಕೇವಲ ಪತ್ರಿಕೆ ಹೇಳಿಕೆ ಮತ್ತು ಫೋಸು ನೀಡುತ್ತಿರುವುದರಿಂದ ಯಾವ ಸಾಧನೆ ಮಾಡಲು ಸಾದ್ಯವಿಲ್ಲ ಎಂಬುದನ್ನು ಅವಲೋಕನ ಮಾಡಿಕೊಳ್ಳುವುದು ಲೇಸೆಂದು ಸದಸ್ಯರು ಕಿವಿಮಾತು ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಲವು ಬಾರಿ ಹೊಳೆನರಸೀಪುರ ಕ್ಷೇತ್ರಕ್ಕೆ ಬಂದರೂ ಸೌಜನ್ಯಕ್ಕಾದರೂ ಕ್ಷೇತ್ರದ ಕಾಂಗ್ರೆಸ್ ನಾಯಕಿ ಅನುಪಮ ಅವರನ್ನು ಭೇಟಿ ಮಾಡದಿರುವುದು ಶಿವರಾಂರವರ ಸಂಕುಚಿತ ಮನಸ್ಸು ಎಂಬುದನ್ನು ದೃಢ ಪಡಿಸಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ವಿಜಯದ ಹಾದಿಗೆ ಕೊಂಡೊಯ್ಯುವ ಬಗ್ಗೆ ಸ್ಪಲ್ವವಾದರೂ ನಿಮ್ಮಲ್ಲಿ ಆಸಕ್ತಿ ಇದೆಯೇ ಎಂಬ ಸಂಶಯಗಳು ನಮ್ಮನ್ನು ಕಾಡ ತೊಡಗಿದೆ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.