ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಡೆಗೋಡೆ ನಿರ್ಮಾಣಕ್ಕೆ ನಿರ್ಲಕ್ಷ್ಯ

Mainashree
Updated On : 12 Sept 2013, 10:19 am

ಹಾಸನ: ಜಿಲ್ಲೆಯ ಬೇಲೂರಿನ ವಿಷ್ಣು ಸಮುದ್ರ ಕೆರೆ ಏರಿ ಮೇಲೆ ಸಾರಿಗೆ ಬಸ್ ದುರಂತ ಸಂಭವಿಸಿ 8 ಮಂದಿ ಬಲಿಯಾದ ನಂತರವೂ, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೆರೆ ಏರಿ ಮೇಲಿನ ರಸ್ತೆಗಳಿಗೆ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗಿಲ್ಲ. ಈ ಬಗ್ಗೆ ನಿರ್ಲಕ್ಷ್ಯತನ ಪ್ರದರ್ಶಿಸಲಾಗುತ್ತಿದೆ.
ಇದರಿಂದಾಗಿ ವಿಷ್ಣುಸಮುದ್ರ ಕೆರೆ ಏರಿ ಸೇರಿದಂತೆ ರಕ್ಷಣೆ ಇಲ್ಲದ ಜಿಲ್ಲೆಯ ಹತ್ತಾರು ಕೆರೆ ಏರಿಗಳ ಮೇಲೆ ಪ್ರಯಾಣಿಕರು ಮತ್ತು ವಾಹನ ಸವಾರರು ಜೀವಭಯದಿಂದಲೇ ಓಡಾಡುವಂತಾಗಿದೆ.
ಯಾವುದೇ ದುರಂತ ಸಂಭವಿಸಿದಾಗ ಅದಕ್ಕೆ ಪರಿಹಾರ, ಸಮಸ್ಯೆಗೆ ಕಾರಣ ಮತ್ತು ಲೋಪ-ದೋಷಗಳ ಬಗ್ಗೆ ಸಭೆ, ಚರ್ಚೆಗಳು ನಡೆಯುತ್ತವೆ. ಆದಾದ ನಂತರ ಆಡಿದ ಮಾತು ನೀಡಿದ ಭರವಸೆ ಎಲ್ಲವೂ ಉಸಿಯಾಗುತ್ತವೆ.
ಇದಕ್ಕೊಂದು ನಿದರ್ಶನ ಬೇಲೂರಿನ ವಿಷ್ಣು ಸಮುದ್ರ ಕೆರೆ ಏರಿ ಮೇಲೆ ಕಳೆದ ಜು.23 ರಂದು ಸಂಭವಿಸಿದ ಸಾರಿಗೆ ಬಸ್ ದುರಂತ. ಈ ದುರಂತದಲ್ಲಿ 8 ಮಂದಿ ಬಲಿಯಾದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಡೆ ಗೋಡೆ ನಿರ್ಮಿಸುವ ಭರವಸೆ ನೀಡಿ ಹೋಗಿದ್ರು. ಆದ್ರೆ ಇಷ್ಟು ದಿನ ಕಳೆದರೂ, ತಡೆಗೋಡೆಯಿರಲಿ, ಆ ಲಕ್ಷಣವೂ ಕಾಣುತ್ತಿಲ್ಲ. ಇದು ಒಂದೆಡೆಯಾದ್ರೆ ಜಿಲ್ಲೆಯ ನಾನಾ ಕಡೆ ಇದೇ ರೀತಿ ತಡೆಗೋಡೆ ಇಲ್ಲದೆ, ಕೆರೆ ಏರಿ ಮೇಲಿನ ರಸ್ತೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಪ್ರಮುಖವಾಗಿ ದುದ್ದ ರಸ್ತೆ ಕೆರೆ ಏರಿ ಮೇಲಿನ ರಸ್ತೆ. ಒಂದೆಡೆ ಡಾಂಬರ್ ಇಲ್ಲ, ಮತ್ತೊಂದೆಡೆ ತಡೆಗೋಡೆ ಇಲ್ಲ. ಹೀಗಾಗಿ ಆ ಕಡೆ ಕೆರೆ, ಈ ಕಡೆ ಹಳ್ಳ ಇರುವುದರಿಂದ ಭಯದಿಂದಲೇ ಪ್ರಯಾಣ ಮಾಡುವಂತಾಗಿದೆ. ಇದೇ ರೀತಿ ತಾಲೂಕಿನ ಶಾಂತಿಗ್ರಾಮ, ಹೊಂಗೆರೆ ಬಂಡಿಹಳ್ಳಿ, ಕಸ್ತೂರವಳ್ಳಿ ಕೆರೆ, ಹೆರಗು ಕೆರೆ, ಕಂದಲಿ ಸಮೀದ ಕೆರೆ, ಸಾಲಗಾಮೆ ಕೆರೆ, ಬೈಲಹಳ್ಳಿ ಕೆರೆಯ ಏರಿಯೂ ಕಿರಿದಾಗಿದೆ.
ಬೇಲೂರು ತಾಲೂಕಿನ ಅಡಗೂರು ಕೆರೆ, ಹಳೇಬೀಡು ಕೆರೆ, ಅರಸೀಕೆರೆ ಬಂಡೀಹಳ್ಳಿ, ಚನ್ನರಾಯಪಟ್ಟಣ ತಾಲೂಕು ಜನಿವಾರ, ಜಾವಗಲ್, ಅಡಗೂರು, ಯಲಿಯೂರು, ಗ್ಯಾರಳ್ಳಿ, ಬರಗೂರು ಕೆರೆ ಏರಿಗಳ ರಸ್ತೆಗಳಿಗೂ ತಡೆಗೋಡೆಗಳಿಲ್ಲದೆ ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ. ಈ ಕೆರೆಯ ಏರಿಯಲ್ಲಿ ಯಾವ ಸಂದರ್ಭದಲ್ಲಿ ಅಪಘಾತ ಸಂಭವಿಸುತ್ತವೆ ಹಾಗೂ ತಡೆಗೋಡೆ ಇಲ್ಲದೆ ವಾಹನಗಳು ಕೆರೆಯೊಳಗೆ ಬೀಳುತ್ತವೋ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ.
ಗ್ರಹಚಾರ ಕೆಟ್ಟರೆ ಯಮಕೂಪ ಗ್ಯಾರಂಟಿ:  ಮೊದಲೇ ವಾಹನ ದಟ್ಟಣೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಕೊಂಚ ಮೈಮರೆತರೆ ಇಲ್ಲವೇ ಗ್ರಹಚಾರ ಕೆಟ್ಟರೆ ಯಮಕೂಪಕ್ಕೆ ಬೀಳೋದು ಗ್ಯಾರಂಟಿ. ಕೆಲ ರಸ್ತೆಗಳು ಡಾಂಬರ್ ಕಂಡಿದ್ರೆ, ಮತ್ತೆ ಕೆಲವಕ್ಕೆ ಡಾಂಬರ್ ಇನ್ನು ಆಗಿಲ್ಲ. ರಸ್ತೆ ಸರಿ ಇಲ್ಲದಿರುವುದು ಒಂದೆಡೆಯಾದ್ರೆ, ಇನ್ನೊಂದೆಡೆ ರಕ್ಷಣಾ ತಡೆ ಇಲ್ಲದಿರುವುದು. ಹೀಗಾಗಿ ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಅನ್ನೋದು ಸಾರ್ವಜನಿಕರ ಆಗ್ರಹ.
ಮತ್ತೊಂದು ವಿಷಾದದ ಸಂಗತಿ ಅಂದ್ರೆ ಯಾರದೋ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದ್ರೆ ಅದನ್ನು ಖಂಡಿಸಿ ಪ್ರತಿಭಟನೆ ಅಥವಾ ಬಂದ್ ನಡೆಸುವ ಸಂಘಟನೆಗಳು ಈಗ ಅದೇಕೋ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಕಟ ಬಂದಾಗ ವೆಂಕಟರಮಣ ಎನ್ನುವುದನ್ನು ಬಿಟ್ಟು, ಅಪಾಯ ಎದುರಾಗುವ ಮುನ್ನವೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.
ಶಾಂತಿಗ್ರಾಮ, ದುದ್ಧ ಕೆರೆಗೆ ತಡೆಗೋಡೆ:  ಅರಸೀಕೆರೆ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್, ಲಾರಿ ಸೇರಿದಂತೆ ಇತರೆ ವಾಹನಗಳು ನಗರದ ಡೈರಿ ವೃತ್ತದಿಂದ ದೊಡ್ಡಪುರ ಮಾರ್ಗವಾಗಿ ಚಲಿಸುವ ಬದಲಾಗಿ ಶಾಂತಿಗ್ರಾಮದ ಮಾರ್ಗವಾಗಿ ಚಲಿಸಿ ದುದ್ದವನ್ನು ಸೇರುತ್ತಿವೆ. ಇದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಶಾಂತಿಗ್ರಾಮ ಮತ್ತು ದುದ್ದ ಕೆರೆಗಳು ಬೃಹತ್ ಕೆರೆಗಳಾಗಿರುವುದರಿಂದ ಅವಘಡ ಸಂಭವಿಸುವುದಕ್ಕೂ ಮುನ್ನ ಎಚ್ಚೆತ್ತುಕೊಂಡು ತಡೆಗೋಡೆ ನಿರ್ಮಿಸುವುದು ಅತಿ ಅವಶ್ಯಕವಾಗಿದೆ.

ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement