ಸುದ್ದಿ ಸಂಕ್ಷೇಪ
ವಿಕಲಚೇತನರ ಹಕ್ಕು ಬಗ್ಗೆ 2 ದಿನದ ತರಬೇತಿ
ಹಾಸನ:ಅಂಗವಿಕಲರನ್ನು ನಿರ್ಲಕ್ಷ್ಯಿಸದೆ ಅವರಿಗೆ ಪ್ರೀತಿ, ಗೌರವ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಿಎಂಎಸ್ಎಸ್ಎಸ್ ಸಂಸ್ಥೆಯ ನಿರ್ದೇಶಕ ಫೆಲಿಕ್ಸ್ ಥಾಮಸ್ ರುಜಾರಿಯೋ ಹೇಳಿದರು.
ಅವರು ಇತ್ತೀಚೆಗೆ ಹಾಸನ ನಗರದ ಬಿ. ಕಾಟೀಹಳ್ಳಿಯ ಸೇವಾ ಸಂಸ್ಥೆಯಲ್ಲಿ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಸಿಯಲ್ ಸರ್ವಿಸ್ ಸೊಸೈಟಿ(ಸಿಎಂಎಸ್ಎಸ್ಎಸ್) ಹಾಗೂ ಸಮುದಾಯ ಅಧಾರಿತ ಪುನರ್ವಸತಿ ಸಂಸ್ಥೆ(ಸಿಬಿಆರ್ ಪೋರಂ) ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ಕಾರ್ಯ ಕ್ಷೇತ್ರಗಳಲ್ಲಿರುವ ವಿಕಲಚೇತನರ ಸಂಘ, ಒಕ್ಕೂಟ ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳಿಗೆ ವಿಕಲಚೇತನರ ಹಕ್ಕುಗಳ ಬಗ್ಗೆ ಎರಡು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಮುಖ್ಯವಾಗಿ ವಿಲಚೇತನರಲ್ಲಿ ಕಾಣುವ ದೌರ್ಬಲ್ಯವೆಂದರೆ ಆತ್ಮವಿಶ್ವಾಸದ ಕೊರತೆ. ಅಲ್ಲದೆ ನಾವು ಇತರರಂತೆ ಇಲ್ಲ ಎಂಬ ಕೀಳರಿಮೆ ಅವರನ್ನು ಕಾಡುತ್ತಿದೆ. ಸಮಾಜ ಅವರಿಗೆ ತೋರುತ್ತಿರುವುದು ಕಳಂಕ ತಾರತಮ್ಯ ಹಾಗೂ ಪ್ರೋತ್ಸಾಹ ನೀಡದೆ ಇರುವುದು. ವಿವಿಧ ಕಚೇರಿಗಳಲ್ಲಿ ಆಗುವ ಅವಮಾನ, ಸರ್ಕಾರದ ಸೌಲಭ್ಯಗಳಿಂದ ವಂಚನೆ, ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಗುವ ತಾರತಮ್ಯ ಇಂದು ನಾವು ನೋಡುತ್ತೀರುವ ವಾಸ್ತವಿಕತೆ ಎಂದರು.
ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಸಿಬಿಆರ್ ಪೋರಂ ವಕಾಲತು ಅಧಿಕಾರಿ ಆರ್. ವೆಂಕಟೇಶರೆಡ್ಡಿ ಮಾತನಾಡಿ, ಇಂದು ಸಮಾಜದಲ್ಲಿ ಬಡವರ ಸ್ಥಿತಿಯು ಶೋಚನೀಯವಾಗಿರುವ ಈ ಸಂದರ್ಭದಲ್ಲಿ ವಿಕಲಚೇತನರ ಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಾಗಾರದಲ್ಲಿ ವಿಕಲಚೇತನರ ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸಂಯೋಜಕ ಮೋಹನ್ ಸ್ವಾಗತಿಸಿದರು. ಶಾಂತ ವಂದಿಸಿದರು. ಕೃಷ್ಣಶೆಟ್ಟಿ ನಿರೂಪಿಸಿದರು.
ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ
ಅರಕಲಗೂಡು:ಗ್ರಾಮೀಣ ಮತ್ತು ದಸರಾ ಕ್ರೀಡೆಗಳು ಹಳ್ಳಿಗಾಡಿನ ಪ್ರತಿಭೆಗಳಿಗೆ ಪ್ರಯೋಜನಕಾರಿಯಾಗಿದ್ದು, ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಧನೆ ಮಾಡಿ ಎಂದು ಜಿಪಂ ಸದಸ್ಯ ವಿ.ಎ. ನಂಜುಂಡಸ್ವಾಮಿ ತಿಳಿಸಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ದಸರಾ ಮತ್ತು ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೇತ್ರ ಶಿಕ್ಷಣಾಧಿಕಾರಿ ಬಿ. ರೇವಣ್ಣ ಅವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಮಾನಸಿಕವಾಗಿ ಸದೃಢರಾದರೆ ಸಾಲದು, ದೈಹಿಕವಾಗಿಯೂ ಬಲಿಷ್ಟಗೊಂಡರೆ ಆರೋಗ್ಯಕ್ಕೆ ಯಾವುದೇ ಕುಂದು ಬರುವುದಿಲ್ಲ ಎಂದು ಹೇಳಿದರು.ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಕಾರ್ಯನಿರ್ವಹಣಾಧಿಕಾರಿ ಶಿವರಾಮು, ಜಿಪಂ ಸದಸ್ಯೆ ಭಾಗ್ಯಮ್ಮ, ಪಪಂ ಸದಸ್ಯರಾದ ಲೋಕೇಶ್, ನಿರಂಜನ್, ಶಿರಸ್ತೆದಾರ್ ಶಂಕರಪ್ಪ, ಹರೀಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್ಕುಮಾರ್ ಇದ್ದರು.
ಪಡುವಲಹಿಪ್ಪೆ ಕಾಲೇಜು: ಎಂಎಸ್ಡಬ್ಲೂ ಪ್ರವೇಶ
ಹಾಸನ: ಮೈಸೂರು ವಿಶ್ವವಿದ್ಯಾನಿಲಯದಿಂದ ಎಂಎ ಇತಿಹಾಸ ಮತ್ತು ಎಂ ಎಸ್ ಡಬ್ಲ್ಯೂ ವಿಷಯಗಳಿಗೆ ನಡೆಸಿದ ಪ್ರವೇಶ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜಿನಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ನಮ್ಮ ಕಾಲೇಜು ವತಿಯಿಂದಲೇ ಪ್ರವೇಶ ಪರೀಕ್ಷೆ ನಡೆಸಿ ಸೆ.17 ರೊಳಗೆ ರೂ.500 ದಂಡ ಶುಲ್ಕದೊಂದಿಗೆ ಪ್ರವೇಶಾತಿ ಮಾಡಿಕೊಳ್ಳಲು ಮೈಸೂರು ವಿಶ್ವವಿದ್ಯಾನಿಲಯ ಅನುಮತಿ ನೀಡಿದೆ.
ಆಸಕ್ತ ವಿದ್ಯಾರ್ಥಿಗಳು ಸೆ. 14 ಶನಿವಾರ ಬೆಳಿಗ್ಗೆ 11ಕ್ಕೆ ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಲ್ಲಾ ಮೂಲ ದಾಖಲಾತಿಗಳು ಮತ್ತು ದ್ವಿಪ್ರತಿಯ ಜೆರಾಕ್ಸ್ ನೊಂದಿಗೆ ಆಗಮಿಸಿ, ಪ್ರವೇಶ ಪರೀಕ್ಷೆ ಬರೆಯುವ ಮೂಲಕ ಪ್ರವೇಶಾತಿ ಮಾಡಿಕೊಳ್ಳಬಹುದೆಂದು ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂ 9845816673 ಸಂಪರ್ಕಿಸಿ.
ಜಿಲ್ಲಾಮಟ್ಟದ ಕುಣಿಯೋಣ ಬಾರಾ ನೃತ್ಯ ಸ್ಪರ್ಧೆ
ಹಾಸನ: ನಗರದ ವಿವೇಕಾನಂದನಗರದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಹಾಗೂ ವಿನಾಯಕ ಯುವಕರ ಸಂಘದ ಆಶ್ರಯದಲ್ಲಿ 23 ನೇ ವರ್ಷದ ಗಣಪತಿ ಮಹೋತ್ಸವದ ಅಂಗವಾಗಿ ಸೆ.13 ರಂದು ಸಂಜೆ 6 ಕ್ಕೆ ಜಿಲ್ಲಾಮಟ್ಟದ ಕುಣಿಯೋಣ ಬಾರಾ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಪ್ರವೇಶ ಉಚಿತವಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.9449865974 ಸಂಪರ್ಕಿಸಬಹುದು.