ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹನಿಕೆ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 12 Sept 2013, 10:20 am

ಬೇಲೂರು: ಹೆದ್ದಾರಿ ರಸ್ತೆ ಕಾಮಗಾರಿ ವಿಳಂಬ ಹಾಗೂ ಮಲ್ಲನಹಳ್ಳಿ ಹನಿಕೆ ಮಾರ್ಗದ ರಸ್ತೆ ದುರಸ್ತಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ತಾಲೂಕು ಪಂಚಾಯ್ತಿ ಸದಸ್ಯ ಪರ್ವತಯ್ಯ ನೇತೃತ್ವದಲ್ಲಿ  ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ಮಾತನಾಡಿ, ಜಿಲ್ಲೆ ಹಾಗೂ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹೆದ್ದಾರಿ, ಗ್ರಾಮೀಣ ರಸ್ತೆಗಳು ಹಾಳಾಗಿ ಗುಂಡಿಬಿದ್ದು ಅಪಘಾತ ಸಂಭವಿಸಿ ಜನತೆ ಅವಸ್ಥೆ ಪಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರಾಗಲಿ ಸಾರ್ವಜನಿಕರ ನೋವಿಗೆ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಬೇಲೂರು ಬಸ್ ದುರಂತದಂದು ಸೌಜನ್ಯಕ್ಕೂ ಭೇಟಿ ನೀಡಿ ಸಾಂತ್ವನ ಹೇಳದಿರುವುದೇ ಸಾಕ್ಷಿ ಎಂದು ಹೇಳಿದರು. ಇದಲ್ಲದೆ, ಯಗಚಿ ಜಲಾಶಯ ಭರ್ತಿಯಾಗಿ 2 ತಿಂಗಳು ಕಳೆದರೂ ವಾಡಿಕೆಯಂತೆ ಜಲಾಶಯಕ್ಕೆ ಬಾಗಿನ ಅರ್ಪಿಸಲು ಉಸ್ತುವಾರಿ ಸಚಿವ ಮಹದೇವಪ್ಪ, ಶಾಸಕ ರುದ್ರೇಶಗೌಡರಾಗಲಿ ಇನ್ನೂ ಬಾಗಿನ ಅರ್ಪಿಸಲು ಮನಸ್ಸು ಮಾಡಿಲ್ಲ. ಇದನ್ನು ಖಂಡಿಸಿ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಯಗಚಿ ನದಿಗೆ ಬಾಗೀನ ಅರ್ಪಿಸಿದಾಗ ಶಾಸಕ ಹಾಗೂ ಉಸ್ತುವಾರಿ ಸಚಿವರು ಸಂಘಟಕರ ಮೇಲೆ ದೂರು ದಾಖಲಿಸಿ ಕೇಸು ಹಾಕಿಸಿದ್ದಾರೆ. ಈಗಲಾದರು ಉಸ್ತುವಾರಿ ಸಚಿವರು ಬಾಗಿನ ಅರ್ಪಿಸಿ ಶಾಸಕರ ಮಾನ ಕಾಪಾಡಬೇಕು ಎಂದು ಒತ್ತಾಯಿಸಿದರು.    
ಜಿಲ್ಲಾ ಉಸ್ತುವಾರಿ ಸಚಿವರು ಹಾಸನ ಜಿಲ್ಲೆಗೆ ಬರುವದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಜಿಲ್ಲೆಯ ಬಹುತೇಕ ರಸ್ತೆಗಳು ಹಾಳಾಗಿದ್ದು ಕೂಡಿದ್ದು, ಹೆದ್ದಾರಿ ರಸ್ತೆಗಳು ಗುಂಡಿಬಿದ್ದು ಜನ ಪ್ರಾಣಕ್ಕೆ ಕುತ್ತು ತಂದಿವೆ. ಶಾಸಕರು 2 ನೇ ಬಾರಿ ವಿಧಾನಸಭೆಗೆ ಪ್ರವೇಶ ಮಾಡಿದ್ದು, ಮಲ್ಲನಹಳ್ಳಿ ಮತ್ತು ಹನಿಕೆ ರಸ್ತೆಯ ಬಗ್ಗೆ ಅವರಿಗೆ ಅರಿವು ಇಲ್ಲವಾಗಿದೆ, ತಮ್ಮ ಹಿಂಬಾಲಕರಿಗೆ ಕಾಮಗಾರಿ ಕೆಲಸ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದರು.  
ತಾಪಂ ಸದಸ್ಯ ಹಾಗೂ ಜಿಲ್ಲಾ ಬಿಜೆಪಿ ಎಸ್‌ಇ ಮೋರ್ಚಾ ಅಧ್ಯಕ್ಷ ಪರ್ವತಯ್ಯ ಮಾತನಾಡಿ ಮಲ್ಲನಹಳ್ಳಿ ಹನಿಕೆಯ ಸುಮಾರು 12 ಕಿ ಮೀ ರಸ್ತೆ ಕಳೆದ 20 ವರ್ಷದಿಂದ ಹಾಳಾಗಿದ್ದು, ಶಾಸಕರು ರಸ್ತೆ ಕಾಮಗಾರಿ ಕೈಗೊಳ್ಳಲು ಮೀನ ಮೇಷ ಮಾಡುತ್ತಿದ್ದಾರೆ ಎಂದರು. ಹನಿಕೆಯಲ್ಲಿ ರಾಜ್ಯದಲ್ಲೇ ಗಮನ ಸೆಳೆಯುವ ದನಗಳ ಸಂತೆ ನಡೆಯುತ್ತದೆ. ಈ ರಸ್ತೆಯಲ್ಲಿ ಮಲ್ಲನಹಳ್ಳಿ, ಮುತ್ತುಗನ್ನೆ, ತಿಮ್ಮನಹಳ್ಳಿ, ದೊಡ್ಡಬ್ಯಾಡಿಗೆರೆ, ಹೆಬ್ಬಾಳು, ಜೋಗಿಹಳ್ಳಿ,ಸಂಶೇಟ್ಟಿಹಳ್ಳಿ, ಹೋನ್ನೆನಹಳ್ಳಿ, ಕೀರೇಹಳ್ಳಿ ಹಾಗೂ ಮಾಳೇನಹಳ್ಳಿಯ ಸೇರಿದಂತೆ ಹಲವಾರು ಗ್ರಾಮಗಳ ರಸ್ತೆಗೆ ಡಾಂಬರೀಕರಣ ಮಾಡಬೇಕು. ಹಾಗೂ ಬಾಣವಾರ ಬೇಲೂರು ಮಾರ್ಗದ ಹೆದ್ಧಾರಿ ಕಾಮಗಾರಿ ವಿಳಂಬವಾಗುತ್ತಿದ್ದು, ಅಧಿಕಾರಿಗಳು  ಶೀಘ್ರ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement