ಪಶು ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ ವಾಪಸ್
ಕ.ಪ್ರ.ವಾರ್ತೆ ಹಾಸನ ಸೆ. 13
ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ರೇಣುಕಾಪ್ರಸಾದ್ ಶುಕ್ರವಾರ ಹಾಸನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಳೆದ 10 ದಿನಗಳಿಂದ ನಡೆಸುತ್ತಿದ್ದ ಪ್ರತಿಟನೆಯನ್ನು ಹಿಂಪಡೆದಿದ್ದಾರೆ.
ಕುಲಸಚಿವ ಡಾ.ಜಯಪ್ರಕಾಶ್, ಕರ್ನಾಟಕ ಪಶುವೈದ್ಯಕೀಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ಬುಗ್ಗಿ, ಡೀನ್ ಡಾ.ನರಸಿಂಹಮೂರ್ತಿ, ಯತಿರಾಜ್ ಇತರರು ಭೇಟಿ ನೀಡಿ ಕಾಲೇಜಿಗೆ ಬೇಕಾಗಿರುವ ಅಗತ್ಯ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸುವುದಾಗಿ ಭರವಸೆ ನೀಡಿ, ಪ್ರತಿಭಟನೆ ಹಿಂಪಡೆಯುವಂತೆ ವಿದ್ಯಾರ್ಥಿಗಳನ್ನು ಕೋರಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೂರು ತಿಂಗಳ ಒಳಗೆ ಮಾನ್ಯತೆ ಸಿಗುವಂತೆ ಮಾಡದಿದ್ದರೆ ಮತ್ತೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕುಲಪತಿ ರೇಣುಕಾ ಪ್ರಸಾದ್, ಹಾಸನ ವೈದ್ಯಕೀಯ ಕಾಲೇಜಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತೇವೆ. ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಜೊತೆಗೆ ಆವಶ್ಯಕತೆ ಇರುವ ಉಪಕರಣಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು. ಭಾರತೀಯ ಪಶುವೈದ್ಯಕೀಯ ಪರಿಷತ್ನ ಪ್ರಕಾರ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ. ಆದನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪಶುವೈದ್ಯ ಪರಿಷತ್ತಿನ ಆಣತಿಯಂತೆ ಒಂದು ಕಾಲೇಜಿನಲ್ಲಿ 96 ಬೋಧಕ ಹಾಗೂ 160 ಬೋಧಕೇತರ ಸಿಬ್ಬಂದಿ ಇರಲೇಬೇಕು. 4 ವರ್ಷಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯೇ 256 ಇರಬೇಕು ಎಂಬ ನಿಯಮವಿದೆ. ಆದರೆ ಪ್ರಸ್ತುತ ಕಾಲೇಜಿನಲ್ಲಿ 180 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ಕಾಲೇಜು ವಂಚಿತವಾಗಿದೆ ಎಂಬ ಕಾರಣಕ್ಕೆ ಭಾರತೀಯ ಪಶು ವೈದ್ಯ ಪರಿಷತ್ ಮಾನ್ಯತೆ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂದು ಸ್ವಷ್ಟಪಡಿಸಿದರು.