ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಟ್ಟಲ್ಲೇ ಮ್ಯಾಕ್ಸಿಕ್ಯಾಬ್ ನಿಲ್ದಾಣ

Mainashree
Updated On : 13 Sept 2013, 9:04 am

ಹಾಸನ: ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮ್ಯಾಕ್ಸಿಕ್ಯಾಬ್ ಹಾಗೂ ಸರಕು ಸಾಗಾಣಿಕೆ ವಾಹನಗಳಲ್ಲಿ ಮಿತಿ ಮೀರಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುವುದು ಸಾಮಾನ್ಯವಾಗಿದೆ. ಇದರಿಂದ  ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿದ್ದು, ಸಾವು ನೋವು ಹೆಚ್ಚಾಗುತ್ತಿವೆ. ಆದರೆ ಸಂಬಂಧಪಟ್ಟವರು ಇತ್ತ ಗಮನಹರಿಸುತ್ತಿಲ್ಲ.
ನಗರದ ಎನ್.ಆರ್.ವೃತ್ತ ಸಮೀಪದ ಇಂಪೀರಿಯಲ್ ಥಿಯೇಟರ್ ಹತ್ತಿರ ಮ್ಯಾಕ್ಸಿಕ್ಯಾಬ್ ನಿಲ್ದಾಣ, ಹಳೇ ಅಂಚೆ ಕಚೇರಿ ಸಮೀಪ, ಶ್ರೀಸೀತಾರಾಮಂಜನೇಯಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಮ್ಯಾಕ್ಸಿಕ್ಯಾಬ್ ನಿಲ್ದಾಣವಿದೆ. ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ಇಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.
ಈ ಮ್ಯಾಕ್ಸಿಕ್ಯಾಬ್ ನಿಲ್ದಾಣಗಳಿಂದ ಕಂದಲಿ, ಆಲೂರು, ಪಾಳ್ಳುಪೇಟೆ, ಕೆಂಚಮ್ಮನಹೊಸಕೋಟೆ, ಸಾಲಗಾಮೆ, ನಿಟ್ಟೂರು, ಪುರದಮ್ಮ, ಶಾಂತಿಗ್ರಾಮ, ಉದಯಪುರ, ಚನ್ನರಾಯಪಟ್ಟಣ, ಮೊಸಳೆಹೊಸಳ್ಳಿ, ಹಂಗರಹಳ್ಳಿ, ಹಳೇಕೋಟೆ ಮಾರ್ಗವಾಗಿ ಮ್ಯಾಕ್ಸಿಕ್ಯಾಬ್ ಹಾಗೂ ಸರಕು ಸಾಗಾಣಿಕೆ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿತ್ತವೆ. ಈ ಮಾರ್ಗದ ಹಳ್ಳಿಗಳಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಈ ಭಾಗದ ಜನರು ಮ್ಯಾಕ್ಸಿಕ್ಯಾಬ್ ಹಾಗೂ ಸರಕು ಸಾಗಾಣಿಕೆ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.
ಜೊತೆಗೆ ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳಲ್ಲಿ ಈ ಮ್ಯಾಕ್ಸಿಕ್ಯಾಬ್ ಹಾಗೂ ಸರಕು ಸಾಗಾಣಿಕೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಅತೀ ವೇಗವಾಗಿ ಚಲಾಯಿಸುವುದರಿಂದ ಅಪಘಾತಗಳೂ ಹೆಚ್ಚಾಗುತ್ತಿವೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಬಾರದು ಎಂಬ ನಿಯಮವಿದ್ದರೂ ಅಕ್ರಮವಾಗಿ ಸಾರ್ವಜನಿಕರನ್ನು ಕರೆದೊಯ್ಯಲಾಗುತ್ತಿದೆ.
ಬಸ್‌ಗಳಿಗಿಂತ ಮ್ಯಾಕ್ಸಿಕ್ಯಾಬ್‌ಗಳಲ್ಲಿ ಒಂದೆರಡು ರು. ದರ ಕಡಿಮೆ ಇರುವುದರಿಂದ ಗ್ರಾಮೀಣ ಪ್ರದೇಶ ಕೂಲಿ ಕಾರ್ಮಿಕರು ಹಾಗೂ ಬಡವರು ಇದರಲ್ಲಿಯೇ ಪ್ರಯಾಣಿಸುತ್ತಾರೆ. ಚಾಲಕರ ಅಜಾಗರೂಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ವಾಹನಗಳಿಂದ ಅಪಘಾತ ಸಂಭವಿಸಲು ಕಾರಣ ಎಂದರೆ ತಪ್ಪಾಗದು.
ಆದ್ದರಿಂದ ಮ್ಯಾಕ್ಸಿಕ್ಯಾಬ್ ಮಾಲೀಕರು ತಮ್ಮ ವಾಹನಗಳ ನಿರ್ವಹಣೆ ಹಾಗೂ ಜಾಗರೂಕತೆಯಿಂದ ವಾಹನಗಳನ್ನು ಚಾಲಾಯಿಸುವಂತೆ ಚಾಲಕರಿಗೆ ಕಟ್ಟು ನಿಟ್ಟಾಗಿ ಸೂಚಿಸುವ ಮೂಲಕ ಹೆಚ್ಚಾಗುತ್ತಿರುವ ವಾಹನಗಳ ಅಪಘಾತಗಳನ್ನು ತಡೆಗಟ್ಟಬಹುದು.
ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯವರು ವಾಹನಗಳನ್ನು ನಿತ್ಯ ಪರಿಶೀಲನೆ ಮಾಡುತ್ತಿಲ್ಲ ಕಾರಣ ಅವಘಡಗಳು ಹೆಚ್ಚಾಗಿವೆ. ಶಿಸ್ತು ಕಾಪಾಡಿದರೆ ಅನಾಹುತಗಳು ನಡೆಯದಂತೆ ನಿಯಂತ್ರಣಕ್ಕೆ ತರಬಹುದಾಗಿದೆ. ಮ್ಯಾಕ್ಸಿಕ್ಯಾಬ್ ಮಾಲೀಕರು ಕಾನೂನು ಚೌಕಟ್ಟಿನೊಳಗೆ ಸೇವೆ ಒದಗಿಸುವಂತಾದರೆ ಅಪಘಾತಗಳನ್ನು ತಡೆಗಟ್ಟ ಬಹುದಾಗಿದೆ.
ಸುಗಮ ಸಂಚಾರಕ್ಕೆ ಅಡ್ಡಿ: ನಗರದಲ್ಲಿ ಮ್ಯಾಕ್ಸಿಕ್ಯಾಬ್‌ಗಳ ನಿಲ್ದಾಣ ಅಲ್ಲಲ್ಲಿ ತಲೆ ಎತ್ತಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಹಾಗೂ ಮ್ಯಾಕ್ಸಿಕ್ಯಾಬ್‌ಗಳು ರಸ್ತೆ ಬದಿಯಲ್ಲಿಯೇ ನಿಲ್ಲುವುದರಿಂದ ಕಿರಿದಾದ ರಸ್ತೆಗಳಾಗಿರುವುದರಿಂದ ಸಾರ್ವಜನಿಕರು ಸಂಚಾರಕ್ಕೆ ಭಾರೀ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮ್ಯಾಕ್ಸಿಕ್ಯಾಬ್ ನಿಲ್ದಾಣಗಳು ನಗರದ ಹೃದಯ ಭಾಗದಲ್ಲಿ ಇರುವುದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತಿದೆ.
ದಿನೇ ದಿನೇ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಎನ್.ಆರ್.ವೃತ್ತ ಸಮೀಪ ಮ್ಯಾಕ್ಸಿಕ್ಯಾಬ್‌ಗಳು ಅಡ್ಡರಸ್ತೆಯಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ಮ್ಯಾಕ್ಸಿಕ್ಯಾಬ್ ನಿಲ್ದಾಣವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಗರದೊಳಗಿರುವ ಮ್ಯಾಕ್ಸಿಕ್ಯಾಬ್ ನಿಲ್ದಾಣವನ್ನು ಬೇರೆಡೆ ಸ್ಥಳಾಂತರಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕಾಗಿದೆ.

ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement