ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರು. 90 ಕೋಟಿ ನಷ್ಟದಲ್ಲಿ ಹಾಸನ ಪಶು ಆಹಾರ ಘಟಕ: ರೇವಣ್ಣ

Mainashree
Updated On : 13 Sept 2013, 11:14 am

ಹಾಸನ: ಇಲ್ಲಿನ ಪಶು ಆಹಾರ ಘಟಕ 90 ಕೋಟಿ ರು.ಗಳ ನಷ್ಟದಲ್ಲಿದೆ ಎಂದು ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
  ಹಾಸನ ಸಹಕಾರಿ ಹಾಲು ಒಕ್ಕೂಟದ ಸರ್ವಸದಸ್ಯರ ಸಭೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಪಶು ಆಹಾರ ಕಾರ್ಖಾನೆಗಳ ಹಾವಳಿಯಿಂದ ನಷ್ಟವು ಹೆಚ್ಚಾಗುತ್ತಿದೆ. ಇದರಿಂದ ಸರ್ಕಾರಿ ಸ್ವಾಮ್ಯದಲ್ಲಿರುವ ಪಶು ಆಹಾರ ಕಾರ್ಖಾನೆಗಳ ಮೇಲೆ ಪೆಟ್ಟು ಬಿದ್ದಂತಾಗಿದೆ ಎಂದು ಹೇಳಿದರು.
 ಹಾಸನ ಹಾಲು ಒಕ್ಕೂಟದಲ್ಲಿ ಹಾಲಿನ ಪುಡಿಯನ್ನು ಮಾರಾಟದಿಂದ 1.5  ಕೋಟಿ ರು. ಲಾಭ ಗಳಿಸಲಾಗಿದೆ. ಇದರಲ್ಲಿ 50 ಲಕ್ಷ ರು.ಗಳನ್ನು ಹಾಲು ಉತ್ಪಾದಕರಿಗೆ ನೇರವಾಗಿ ನೀಡಲಾಗುತ್ತದೆ. 75 ಲಕ್ಷ ರು.ಗಳನ್ನು ಹಾಲು ಒಕ್ಕೂಟದ ಅವಶ್ಯಕತೆಗಳಿಗೆ ನೀಡಲಾಗುತ್ತಿದೆ. ಉಳಿದ ಬಾಕಿ ಹಣವನ್ನು ವಿವಿದೋದ್ದೇಶಗಳಿಗೆ ನೀಡಲಾಗುತ್ತದೆ. 2000 ಟನ್ ಹಾಲಿನ ಪುಡಿಯನ್ನು ಪ್ಯಾಕೇಜ್‌ಗೆ 170 ರು. ಮಾರಾಟ ಮಾಡಲಾಗಿದೆ ಎಂದರು.
 ಈ ಹಿಂದೆ 120 ರು.ನಂತೆ ಒಂದು ಕೆಜಿ ಹಾಲಿನ ಪುಡಿಯನ್ನು ಮಾರಾಟ ಮಾಡಲಾಗುತ್ತಿತ್ತು. ಆದನ್ನು 170 ರು.ಗಳ ಹೆಚ್ಚಿನ ದರದಲ್ಲಿ ಮಾರಾಟ ಮಾಡಿರುವುದರಿಂದ ಇಷ್ಟು ಲಾಭ ಬರಲು ಸಾಧ್ಯವಾಗಿದೆ.
ಹಾಸನ ಹಾಲು ಒಕ್ಕೂಟ ಪ್ರತಿನಿತ್ಯ 5.70 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದು, 1.30 ಲಕ್ಷ ಲೀಟರ್ ಹಾಲನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. 2.70 ಲಕ್ಷ ಲೀಟರ್ ಹಾಲನ್ನು ವಿವಿದೋದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. 30 ಸಾವಿರ ಲೀಟರ್ ಹಾಲನ್ನು ಕೇರಳಕ್ಕೆ ಕಳಿಸಿ ಕೊಡುಲಾಗುತ್ತಿದೆ. ಜೊತೆಗೆ 1.50 ಲಕ್ಷ ಲೀಟರ್ ಹಾಲನ್ನು ಮಂಗಳೂರಿಗೆ ಕಳುಹಿಸಲಾಗುತ್ತದೆ.
 ಅರಸೀಕೆರೆಯಲ್ಲಿ 15 ಕೋಟಿ ರು.ವೆಚ್ಚದಲ್ಲಿ 1.50 ಲಕ್ಷ ಲೀಟರ್ ಸಾಮರ್ಥ್ಯವುಳ್ಳ ಹಾಲು ಶೀತಲಿಕರಣ ಕೇಂದ್ರವನ್ನು ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಗುವುದು ಎಂದರು.
 ಜೊತೆಗೆ ಹಾಸನದಲ್ಲಿ 22 ಕೋಟಿ ರು.ವೆಚ್ಚದಲ್ಲಿ ಡೈರಿ, ಚನ್ನರಾಯಪಟ್ಟಣದಲ್ಲಿ 10 ಕೋಟಿ ರು.ವೆಚ್ಚದಲ್ಲಿ ಡೈರಿ ನಿರ್ಮಾಣ ಮತ್ತು ಹೊಳೆನರಸೀಪುರದ ಡೈರಿಯನ್ನು 1 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ಏರಿಸಲಾಗುತ್ತದೆ ಎಂದರು.
 ಶಾಸಕ ಸಿ.ಎನ್.ಬಾಲಕೃಷ್ಣ, ಒಕ್ಕೂಟದ ನಿರ್ದೇಶಕ ಎಸ್.ಎಲ್.ಧರ್ಮೇಗೌಡ, ಎನ್.ಸಿ.ನಾರಾಯಣಗೌಡ, ಜಿ.ಆರ್.ರಾಮಚಂದ್ರೇಗೌಡ, ಎಚ್.ಎಸ್.ಜಯರಾಂ, ಎಚ್.ಸಿ.ಚನ್ನೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement