ಸೌಲಭ್ಯ ಪಡೆಯುವಲ್ಲಿ ದಲಿತರು ಹಿಂದೆ: ಕುಮಾರಸ್ವಾಮಿ
ಚನ್ನರಾಯಪಟ್ಟಣ: ಸ್ವಾತಂತ್ರ್ಯ ಬಂದು 67ವರ್ಷ ಕಳೆದರೂ ಸಂವಿಧಾನಾತ್ಮಕವಾಗಿ ಸಿಗುವ ಸೌಲಭ್ಯ ಪಡೆಯಲು ದಲಿತರು ಹಿಂದೆ ಇದ್ದಾರೆ ಎಂದು ಸಕಲೇಶಪುರ- ಆಲೂರು ಕ್ಷೇತ್ರದ ಶಾಸಕ ಎಚ್.ಕೆ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ದಲಿತ ಸಮುದಾಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ದಲಿತ ವರ್ಗಕ್ಕೆ ಸಂವಿಧಾನಾತ್ಮಕವಾಗಿ ಸಿಗುವ ಸೌಲಭ್ಯಗಳನ್ನು ಚುನಾಯಿತ ಪ್ರತಿನಿಧಿಗಳಾದ ಗ್ರಾಮ ಪಂಚಾಯಿತಿ ಸದಸ್ಯರಿಂದ ಶಾಸಕರವರೆಗೆ ನೀಡುವಲ್ಲಿ ಪ್ರಯತ್ನಿಸಿದರೆ ಮಾತ್ರ ದಲಿತರ ಏಳಿಗೆ ಸಾಧ್ಯ ಎಂದು ಹೇಳಿದರು.
ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಪ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡದ ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ದಲಿತರಿಗೆ ಅಧಿಕಾರ ನೀಡುವಲ್ಲಿ ಹಿಂದೆ ಬಿದ್ದಿದೆ. ಮುಂದಿನ ದಿನಗಳಲ್ಲಾದರೂ ಕಾಂಗ್ರೆಸ್ ಇಂತಹ ತಪ್ಪು ಮಾಡದೆ ದಲಿತರಿಗೆ ಅವಕಾಶ ನೀಡಲಿ ಎಂದು ಆಗ್ರಹಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನವನ್ನು ಮುಂದಿನ ಏಪ್ರಿಲ್ 14ರೊಳಗೆ ಪೂರ್ಣಗೊಳಿಸುವಲ್ಲಿ ಅನುದಾನ ಬಿಡುಗಡೆ ಮಾಡಿಸಲಾಗುವುದು. ಪಟ್ಟಣದಲ್ಲಿ ರುದ್ರಭೂಮಿಗೆ ಮೀಸಲಿಟ್ಟಿರುವ ಪ್ರದೇಶಕ್ಕೆ ತಂತಿ ಬೇಲಿ ಹಾಕಿ ಒತ್ತುವರಿ ತಡೆಯಲಾಗುವುದು ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಅಂಬಿಕಾರಾಮಕೃಷ್ಣ, ತಾಪಂ ಅಧ್ಯಕ್ಷೆ ಹೇಮಾವತಿಕೃಷ್ಣನಾಯಕ್, ರಾಮಚಂದ್ರ, ಗೋವಿಂದರಾಜು, ಭಾರತಿ ರಂಗಸ್ವಾಮಿ, ಸಾಹಿತಿ ಬೆಳಗುಲಿ ಕೆಂಪಯ್ಯ, ಇದ್ದರು. ಶಿವಶಂಕರ್ ಕುಂಠೆ ಅಧ್ಯಕ್ಷತೆ ವಹಿಸಿದ್ದರು.