ದಸಂಸ ಕಾರ್ಯಕರ್ತರಿಂದ ತಮಟೆ ಚಳವಳಿ
ಅರಕಲಗೂಡು: ತಾಲೂಕಿನ ಗೋಮಾಳ ಜಮೀನಿನಲ್ಲಿ ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಎಲ್ಲಾ ವರ್ಗದ ಬಡವರಿಗೆ ಕೂಡಲೇ ಬಗರ್ ಸಾಗುವಳಿ ಚೀಟಿಯನ್ನು ನೀಡಬೇಕೆಂದು ಆಗ್ರಹಿಸಿ ದಸಂಸ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಸಮುದಾಯ ಭವನದಿಂದ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಅ.ನ.ಕೃ. ವೃತ್ತದ ಮೂಲಕ ಘೋಷಣೆಗಳನ್ನು ಕೂಗುತ್ತಾ ತಹಸೀಲ್ದಾರ್ ಕಚೇರಿ ಆವರಣ ತೆರಳಿ ಕೆಲ ಸಮಯ ಧರಣಿ ಕುಳಿತರು.
ತಾಲೂಕಿನ ಬಹುತೇಕ ರೈತರಿಗೆ ಸ್ವಂತ ಜಮೀನು ಇರುವುದಿಲ್ಲ. ಸರ್ಕಾರಿ ಗೋಮಾಳದಲ್ಲಿ ಹಲವು ವರ್ಷಗಳಿಂದ ಉಳುಮೆಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಈ ಜಮೀನೇ ಇವರಿಗೆ ಆಶ್ರಯವಾಗಿದ್ದು, ಇದನ್ನು ಸಕ್ರಮಗೊಳಿಸುವುದು ಅತ್ಯವಶ್ಯಕವಾಗಿದೆ. ಈ ಸಂಬಂಧ ನಮೂನೆ 50-53ರಲ್ಲಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ಸಕ್ರಮ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ದಸಂಸ ರಾಜ್ಯ ಸಂಚಾಲಕ ಎಂ.ವೆಂಕಟಗಿರಿಯಯ್ಯ ಆರೋಪಿಸಿದರು.
ಕಳೆದ ಆರು ತಿಂಗಳಿಂದ ಶಾಸಕರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣೆ ಕುರಿತು ಸಭೆ ಕರೆದಿಲ್ಲ.ಈ ಸಭೆ ನಿಗದಿಯಂತೆ ನಡೆದರೇ ದಲಿತರ ಮೂಲಭೂತ ಸೌಲಭ್ಯಗಳ ಕುರಿತು ಪ್ರಸ್ತಾಪಿಸಬಹುದು.ಇದರಿಂದಲೂ ಸಹ ದಲಿತರು ವಂಚನೆಗೆ ಒಳಗಾಗಿದ್ದಾರೆ.ಕೂಡಲೇ ಸಭೆ ಕರೆದು ದಲಿತರ ಸಮಸ್ಯೆ ಆಲಿಸುವಂತೆ ಒತ್ತಾಯಿಸಿದರು.
ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಜಿಲ್ಲೆಯ ಯೋಧ ವೆಂಕಟ ಅವರ ಸ್ಮರಣೆಯನ್ನು ತಾಲೂಕು ಆಡಳಿತ ಕೈಗೊಂಡಿಲ್ಲ. ತಹಸೀಲ್ದಾರ್ ಕಚೇರಿ ಆವರಣದಲ್ಲಿ ಯೋಧನ ಪ್ರತಿಮೆ ಸ್ಥಾಪನೆ ಮಾಡಿದರೇ ಆತನ ನೆನಪು ಮತ್ತು ಸಾಧನೆ ಇಂದಿನ ಯುವ ಜನತೆ, ವಿದ್ಯಾರ್ಥಿಗಳಲ್ಲಿ ಉಳಿಯಲಿದೆ.ಈ ಬಗ್ಗೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕೆಂದು ದಸಂಸ ಮುಖಂಡ ಸೋಮಶೇಖರ್ ಮನವಿ ಮಾಡಿದರು.
ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸದ ಆಹಾರ ನಿರೀಕ್ಷಕ ಪ್ರಭುಶಂಕರ್ರನ್ನು ಬೇರೆಡೆಗೆ ವರ್ಗಾಯಿಸಿ ಪ್ರಾಮಾಣಿಕ ಹಾಗೂ ಜನಸಾಮಾನ್ಯರೊಂದಿಗೆ ಬೆರೆಯುವ ಅಧಿಕಾರಿಯನ್ನು ನೇಮಿಸಬೇಕು.
ಅಲ್ಲದೆ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ವಿಧವಾ,ಅಂಗವಿಕಲ,ಸಂಧ್ಯಾಸುರಕ್ಷ ವೇತನವನ್ನು ಒಂದು ಸಾವಿರ ರು.ಗೆ ಹೆಚ್ಚಿಸಬೇಕು. ಎಲ್ಲಾ ಗ್ರಾಪಂಗಳಲ್ಲಿ ಪರಿಶಿಷ್ಟರ ಅನುದಾನ ಸದ್ಬಳಕೆ ಮಾಡಿಕೊಳ್ಳದೆ ಬಗ್ಗೆ ಮಾಹಿತಿ ಪಡೆಯಬೇಕು ಹಾಗೂ ಎಲ್ಲಾ ವರ್ಗದ ವಿದ್ಯಾರ್ಥ್ಥಿನಿಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಈಶ್ವರಪ್ಪ ಹಾಗೂ ತಾಪಂ ವ್ಯವಸ್ಥಾಪಕರಿಗೆ ಮನವಿ ಪತ್ರ ಅರ್ಪಿಸಿದರು.
ದಸಂಸ ತಾಲೂಕು ಸಂಚಾಲಕ ಮುತ್ತಿಗೆ ಬೊಮ್ಮಯ್ಯ,ಮುಖಂಡ ಮೋಕಲಿ ಪುಟ್ಟರಾಜು,ಸುನಂದ ಕುಮಾರ್,ರಾಮು ಅಜ್ಜೂರು,ಕೆಲ್ಲೂರು ಪ್ರದೀಪುಕುಮಾರ್,ವೆಂಕಟಚಲ,ರತ್ನರಾಜ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.