ಮರಗಳ್ಳರ ಜಾಲ ಪತ್ತೆ: 6 ಬಂಧನ
ಅರಕಲಗೂಡು: ಮರ ಕಳವು ಮಾಡುವುದನ್ನೇ ಕಸುಬು ಮಾಡಿಕೊಂಡಿದ್ದ ಜಾಲದ 8 ಜನರ ಪೈಕಿ 6 ಜನರನ್ನು ಬಂಧಿಸುವಲ್ಲಿ ಅರಕಲಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ. ಸೆ.8ರಂದು ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಮುದಿಗೆರೆ ಗ್ರಾಮದ ಪಾಪೇಗೌಡ ಎಂಬುವವರಿಗೆ ಸೇರಿದ ಮಸರಂಗಾಲದ ಸರ್ವೇ ನಂಬರು 116 ಮತ್ತು 117 ರಲ್ಲಿ ಬೆಳೆದಿದ್ದ 3 ತೇಗದ ಮರಗಳನ್ನು ಕಳವು ಮಾಡಿದ್ದರು.
ದೂರಿನಲ್ಲಿ ಸೋಮಶೇಖರ, ಮೂರ್ತಿ ಮತ್ತು ಜಗದೀಶ ಎಂಬುವರ ಮೇಲೆ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಲಾಗಿತ್ತು.
12ರಂದು ಖಚಿತ ವರ್ತಮಾನದ ಮೇಲೆ ವಾಹನಗಳ ತಪಾಸಣೆಗೆ ಮುಂದಾದ ಪೊಲೀಸರು ಟಾಟಾ ಎಸಿ ಯಲ್ಲಿ ತುಂಬಿಕೊಂಡು ಕೊಡ್ಲಿಪೇಟೆ ಕಡೆಗೆ ಹೋಗುತ್ತಿದ್ದ ವಾಹನವನ್ನು ಮುದ್ಲಾಪುರ ಗೇಟ್ ಬಳಿ ತಡೆದು ವಿಚಾರಿಸಿದಾಗ ಚಾಲಕ ರವಿ, ಕೃಷ್ಣೇಗೌಡ(ಮೂರ್ತಿ) ಇವರನ್ನು ವಶಕ್ಕೆ ತೆಗೆದುಕೋಂಡು ವಿಚಾರಣೆ ನಡೆಸಿದಾಗ ಬಬ್ಬುಗಳಲೆ ಗ್ರಾಮದ ಬಿ.ಸಿ.ಸುರೇಶ, ರಂಗಯ್ಯ ಮತ್ತು ಯೋಗೇಶ, ತೇಜೂರು ಗ್ರಾಮದ ಲೋಕೇಶ, ಮಸರಂಗಾಲದ ವಸಂತ, ಬಿ.ಸಿ.ಜಗದೀಶ ಇವರು ಪಾಲುದಾರರಾಗಿರುವುದು ತಿಳಿದು ಬಂದಿದ್ದು, ಈ ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ. ಬಬ್ಬಗಳಲೆ ಯೋಗೇಶ ಮತ್ತು ಮಸರಂಗಾಲದ ವಸಂತ ತಲೆ ಮರೆಸಿಕೊಂಡಿದ್ದಾರೆ.
ಮತ್ತೆರಡು ಪ್ರಕರಣ ಪತ್ತೆ: ಸಿಕ್ಕಿಬಿದ್ದ ಮರಕಳ್ಳರು ಇನ್ನೂ ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬಯಲಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಇದೇ ಆರೋಪಿಗಳು ಮಾವಿನಹಳ್ಳ ಗ್ರಾಮದ ಹುಚ್ಚಯ್ಯ ಎಂಬುವವರ ಜಮೀನಿನಲ್ಲಿದ್ದ ಒಂದು ತೇಗದ ಮರ ಮತ್ತು 20 ದಿನಗಳ ಹಿಂದೆ ಆಲೂರು ತಾಲೂಕಿನ ನಾಗಾವರ ಗ್ರಾಮದ ಬಳಿಯ ರಕ್ಷಿತಾರಣ್ಯದಲ್ಲಿ 5 ತೇಗದ ಮರಗಳನ್ನು ಕಳವು ಮಾಡಿದ್ದರೆಂಬುದು ಬಯಲಾಗಿದೆ.
ಹರಗಲು ಬಳಕೆ: ಹೇಮಾವತಿ ಹಿನ್ನೀರಿನ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಕಳವು ಮಾಡುತ್ತಿದ್ದ ಇವರು ಕದ್ದ ಮರಗಳನ್ನು ್ಡಹೇಮಾವತಿ ಹಿನ್ನೀರಿನಲ್ಲಿ ಬಚ್ಚಿಡುತ್ತಿದ್ದರು. ನಾಗಾವರದ ಅರಣ್ಯದಲ್ಲಿ ಕದ್ದ ಮರಗಳನ್ನು ಹರಗಲಕ್ಕೆ ಕಟ್ಟಿ ನೀರಿನಲ್ಲಿ ಮುಳುಗಿಸಿ ಸುಲಭ ಮಾರ್ಗದಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ತರುವ ಉಪಾಯ ಬಳಸಿದ್ದರು.
ಪೊಲೀಸ್ ಕಾರ್ಯಾಚರಣೆಯಲ್ಲಿ ಒಟ್ಟು ಮೂರೂವರೆ ಲಕ್ಷ ರು. ಮೊತ್ತದ ಮರ ಮತ್ತು ಅವುಗಳನ್ನು ಸಾಗಿಸುತ್ತಿದ್ದ ಟಾಟಾ ಎಸಿ ವಾಹನ ವಶಪಡಿಸಿಕೊಳ್ಳಲಾಗಿದೆ. ಸಿಪಿಐ ರಾಜು ನಿರ್ದೇಶನದಲ್ಲಿ ಪಿಎಸ್ಐ ಎಂ.ಎಂ.ಭರತಸಿಬ್ಬಂದಿ ಮಂಜೇಗೌಡ, ಭೈರೇಶ್, ಅಣ್ಣೇಗೌಡ, ದೇವರಾಜು ಭಾಗವಹಿಸಿದ್ದರು.