2ನೇ ಮದುವೆಗೆ ಮುಂದಾದ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿತ
ಸಕಲೇಶಪುರ: ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಲು ಸಿದ್ದತೆ ನಡೆಸುತ್ತಿದ್ದ ವಂಚಕನೊಬ್ಬನಿಗೆ ಯುವತಿಯ ಪೋಷಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಭಾನುವಾರ ಪಟ್ಟಣದ ಆಜಾದ್ ರಸ್ತೆಯಲ್ಲಿ ನಡೆದಿದೆ. ಭದ್ರಾವತಿ ತಾಲೂಕಿನ ಹೊಳಲು ಗ್ರಾಮದವನೆಂದು ಹೇಳಲಾದ ಮಹಮ್ಮದ್ ಹನೀಫ್ (40) ಹಿಗ್ಗಾ ಮುಗ್ಗ ಥಳಿತಕ್ಕೆ ಒಳಗಾದ ವಂಚಕನಾಗಿದ್ದಾನೆ. ಹನೀಫ್ ತನಗೆ ಮದುವೆಯಾಗಿಲ್ಲ, ವರದಕ್ಷಿಣೆ ವಿರೋಧಿಯಾಗಿರುವ ನನಗೆ ಹೆಣ್ಣು ಕೊಟ್ಟರೆ ಸಾಕು ಎಂದು ಹೇಳಿ ಆಜಾದ್ ರಸ್ತೆ ನಿವಾಸಿಯೊಬ್ಬರ ಮಗಳನ್ನು ಮದುವೆಯಾಗಲು ಮಾತುಕತೆ ನಡೆಸಿದ್ದ. ಇನ್ನೆರಡು ದಿನಗಳಲ್ಲಿ ಮದುವೆ ನಡೆಯುವದರಲ್ಲಿತ್ತು. ಈ ವೇಳೆಗೆ ಮೊದಲ ಮದುವೆಯಾಗಿ ಮೂರು ಮಕ್ಕಳಿರುವ ವಿಚಾರ ತಿಳಿದ ಸಂಬಂಧಿಕರು ಉಪಾಯವಾಗಿ ಹನೀಫ್‌ನನ್ನು ಯುವತಿಯ ಮನೆಗೆ ಕರೆಸಿಕೊಂಡು ಥಳಿಸಿ ಸಮೀಪದ ಮಸೀದಿ ಮುಖಂಡರಿಗೆ ಒಪ್ಪಿಸಿದ್ದಾರೆ.