ಅರಕಲಗೂಡು ತಾಲೂಕಲ್ಲಿ ಪುಷ್ಪ ಕೃಷಿಯತ್ತ ರೈತರ ಆಕರ್ಷಣೆ
ರಾಮನಾಥಪುರ: ಅತ್ಯಧಿಕ ಲಾಭದ ನಿರೀಕ್ಷೆಯಲ್ಲಿ ವಾಣಿಜ್ಯ ಬೆಳೆಗಳ ಮೇಲೆ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿರುವ ಸಾಕಷ್ಟು ರೈತರು ಬೆಲೆ ಕುಸಿತದಿಂದ ಕೈಸುಟ್ಟು ಕೊಂಡಿದ್ದಾರೆ. ಹಾಗಾಗಿ ಅರಕಲಗೂಡು ತಾಲೂಕಿನಲ್ಲಿ ಇತ್ತೀಚೆಗೆ ರೈತರು ಪುಷ್ಪ ಕೃಷಿಯತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ.
ಹೂವಿನ ಕೃಷಿಯಲ್ಲಿ ತೊಡಗಿದವರ ಆರ್ಥಿಕ ಸ್ಥಿತಿ ಸುಧಾರಿಸಿರುವುದು ಈ ಕೃಷಿಯತ್ತ ಹೆಚ್ಚಿನ ರೈತರು ಆಕರ್ಷಿತರಾಗಲು ಕಾರಣವಾಗಿದೆ. ವಾಣಿಜ್ಯ ಬೆಳೆಗಳು ಒಂದು ರೀತಿಯಲ್ಲಿ ಲಾಟರಿ ಇದ್ದಂತೆ. ಬಂದರೆ ಬಂಪರ್, ಇಲ್ಲದಿದ್ದರೆ ಪಾಪರ್. ಆದರೆ ಇಂತಹ ವಾಣಿಜ್ಯ ಬೆಳೆಗಳನ್ನು ನಂಬಿಕೊಂಡು ಹಲವಾರು ರೈತರು ಪಾಪರ್ ಆಗಿದ್ದೆ ಹೆಚ್ಚು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ತಾಲೂಕಿನ ರಾಮನಾಥಪುರ ಹೋಬಳಿ ವ್ಯಾಪ್ತಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಸ್ತುತ ಪುಷ್ಪ ಕೃಷಿಯೆಡೆಗೆ ವಾಲಿದ್ದಾರೆ.
ಪುಷ್ಪ ಕೃಷಿಗೆ ಕಡಿಮೆ ಖರ್ಚು, ಉತ್ತಮ ಬೆಲೆ. ಕಡಿಮೆ ಕಾರ್ಮಿಕರು ಸಾಕು. ಜೊತೆಗೆ ತೋಟಗಾರಿಕಾ ಇಲಾಖೆ ರಾಷ್ಟ್ರೀಯ ತೋಟಗಾರಿಕಾ ಇಲಾಖೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಸಣ್ಣ ಹಿಡುವಳಿದಾರರಿಗೆ ಎಕರೆಗೆ 4,800 ರು. ಮತ್ತು ಇತರರಿಗೆ 3.138 ರು. ಸಹಾಯಧನವನ್ನೂ ನೀಡುತ್ತಿರುವುದು ಹೆಚ್ಚು ಹೆಚ್ಚು ರೈತರು ಪುಷ್ಪ ಕೃಷಿಯತ್ತ ಮನಸ್ಸು ಮಾಡಲು ಮುಖ್ಯ ಕಾರಣ.
ಹೋಬಳಿಯಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯೇ ಆದರೂ, ಈ ಬೆಳೆಯಿಂದ ಕೆಲವರು ಉದ್ದಾರವಾಗಿ ದ್ದರೆ ಇನ್ನೂ ಸಾಕಷ್ಟು ಜನರ ಆರ್ಥಿಕ ಸ್ಥಿತಿ ಇದ್ದಂತೆಯೇ ಇದೆ. ಇನ್ನು ಕೆಲವರು ಮೊದಲಿದ್ದ ಸ್ಥಿತಿಗಿಂತ ಇನ್ನೂ ಕೆಳಮಟ್ಟಕ್ಕೂ ಹೋಗಿದ್ದಾರೆ. ಹಾಗಾಗಿ ತಂಬಾಕು ಅಥವಾ ಇತರೆ ವಾಣಿಜ್ಯ ಬೆಳೆಗಳಿಂದ ಕೈಸುಟ್ಟುಕೊಂಡ ರೈತರು ಪುಷ್ಪ ಕೃಷಿಯಿಂದ ಸುಧಾರಿಸಿದವರನ್ನು ಕಂಡು ತಾವೇಕೆ ಇನ್ನೂ ವಾಣಿಜ್ಯ ಬೆಳೆಗಳಿಗೆ ಜೋತು ಬಿದ್ದಿದ್ದೇವೆ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಮುಂದಾಲೋಚನೆಯಿಂದ ಈ ಬಾರಿ ರಾಮನಾಥಪುರ ಕೇರಳಾಪುರ, ಕೊಣನೂರು, ದೊಡ್ಡಮಗ್ಗೆ, ಕಸಬಾ ಹೋಬಳಿಗಳ ರೈತರು ಅನಗತ್ಯವಾಗಿ ಬಳಕೆಗೆ ಇಲ್ಲದ ಉಳಿದಿರುವ ಭೂಮಿಯಲ್ಲಿ ಮತ್ತು ಅಂತರ ಬೇಸಾಯದಲ್ಲಿ ಸೇವಂತಿಗೆ, ಚೆಂಡು ಹೂ ಬೇಸಾಯ ಮಾಡಿದ್ದಾರೆ. ಇವುಗಳನ್ನು ಕೇವಲ ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಬೇಸಾಯಕ್ಕೆ ತುಂಬಾ ಬೇಡಿಕೆ ಬಂದಿದೆ.
ಮಂಗಳೂರು, ಮಡಿಕೇರಿ, ಹಾಸನ, ಬೆಂಗಳೂರು ಮುಂತಾದ ಊರುಗಳಿಗೆ ಇಲ್ಲಿಯ ಸೇವಂತಿಗೆ ಸರಬರಾಜಾ ಗುತ್ತದೆ. ಜಮೀನು ಬಳಿಯೇ ಕೊಳ್ಳುವವರು ತೆರಳಿ ದೊಡ್ಡ ಮಟ್ಟದ ಹೂ ಬೇಕು ಎಂದು ಮುಂಗಡ ಹಣ ನೀಡಿ ಬರುತ್ತಾರೆ. ಅದೇ ರೀತಿ ಚೆಂಡು ಹೂ ಕೂಡ ಬಣ್ಣ ತಯಾರಿಸಲು ಕಾರ್ಖಾನೆಗಳಿಗೆ ಸರಬರಾಜಾಗುತ್ತಿದ್ದು, ಈ ಕಂಪನಿಯವರು ಸಹ ಜಮೀನು ಬಳಿಯೇ ಹೆಚ್ಚಿನ ಪ್ರಮಾಣದಲ್ಲಿ ಹೂವು ಖರೀದಿಸುತ್ತಿದ್ದಾರೆ.
ಕಳೆದ ವಾರ ವರಮಹಾಲಕ್ಷ್ಮೀ ಹಬ್ಬದ ವೇಳೆ ಮಾರು ಸೇವಂತಿಗೆ 40 ರು. ದರದಲ್ಲಿ ಮಾರಾಟವಾಗಿತ್ತು.
ಇನ್ನು ದಸರಾ ಹಬ್ಬ ಸಮೀಪಿಸುತ್ತಿರುವುದು ಹೂ ಬೇಸಾಯಗಾರರಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ಅದೇ ರೀತಿ ಚೆಂಡು ಹೂ ಕೂಡಾ ಕೆಜಿಗೆ 5 ರಿಂದ 10 ರು. ದರದಲ್ಲಿ ಜಮೀನಿನ ಬಳಿಯಲ್ಲಿಯೇ ಕಂಪನಿಯವರು ಕೊಂಡು ಹೋಗುತ್ತಿದ್ದಾರೆ. ಈ ಬಾರಿ ಕೆಲವು ರೈತರು ಶುಂಠಿ, ಆಲೂಗಡ್ಡೆ ಮತ್ತು ಜೋಳ ಬೆಳೆಯುವ ಭಾಗದಲ್ಲಿಯೇ ಹೂ ಬೇಸಾಯ ಕೈಕೊಂಡಿದ್ದಾರೆ.