ಜಿಲ್ಲೆಗೆ ಮೊದಲು ಸಚಿವ ಸ್ಥಾನ ಕೊಡಿ: ಕಾರ್ಯಕರ್ತರ ಖಡಕ್ ಮಾತು
ಸಕಲೇಶಪುರ: ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಮೊದಲು ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿ. ಇಲ್ಲದಿದ್ದರೆ ಸುಮ್ಮನೆ ಹೋಗಿ ಎಂದು ಕಾಂಗ್ರೆಸ್ ವೀಕ್ಷಕರನ್ನು ಕಾರ್ಯಕರ್ತರು ಒತ್ತಾಯಿಸಿದ ಘಟನೆ ಗುರುವಾರ ಸಂಜೆ ಪಟ್ಟಣದಲ್ಲಿ ನಡೆಯಿತು.
ಲೋಕಸಭೆಗೆ ಪಕ್ಷದ ಸೂಕ್ತ ಅಭ್ಯರ್ಥಿ ಕುರಿತು ಕಾಂಗ್ರೆಸ್ ಮುಖಂಡರು ಹಾಗೂ ವೀಕ್ಷಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ಎ. ಮಂಜು ಅವರಿಗೆ ಮಂತ್ರಿ ಸ್ಥಾನ ನೀಡಿ, ಪಕ್ಷವನ್ನು ಜಿಲ್ಲೆಯಲ್ಲಿ ಗಟ್ಟಿಗೊಳಿಸಿ, ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎಂದು ಸ್ಪಷ್ಟವಾಗಿ ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಶಬ್ಬೀರ್ಖಾನ್, ಪಕ್ಷಗೆಲ್ಲಲು ಪೂರ್ವ ಸಿದ್ದತೆಗಳು ಅವಶ್ಯಕ. ಜಿಲ್ಲೆಗೆ ಮಂತ್ರಿ ಸ್ಥಾನ ನೀಡಿದರೆ ಮಾತ್ರ ಇಲ್ಲಿ ಗೆಲ್ಲಲು ಸಾಧ್ಯ. ದೇವೇಗೌಡರ ಕೋಟೆಯನ್ನು ಭೇದಿಸಲು ಮಂತ್ರಿ ಮಾಡಲೇಬೇಕು ಎಂದು ಆಗ್ರಹಿಸಿದರು.
ಹಾಸನ ಲೋಕಸಭಾ ಕ್ಷೇತ್ರಕ್ಕೆ ಕೆಪಿಸಿಸಿ ವೀಕ್ಷಕರಾಗಿ ನೇಮಕಗೊಂಡಿರುವ ಮಾಜಿ ಸಚಿವ ಪ್ರೊ. ಬಿ.ಕೆ ಚಂದ್ರಶೇಖರ್ ಜೊತೆ ವೀಕ್ಷಕರಾದ ಮಲ್ಲಿಗೆ ವೀರೇಶ್, ತಾರಾದೇವಿ, ಆಶ್ವಿನ್ಕುಮಾರ್, ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರ ದಂಡೇ ಆಗಮಿಸಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ, ಮಾಜಿ ಅಧ್ಯಕ್ಷ ಎಸ್.ಎಂ ಆನಂದ್, ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ ಜವರೇಗೌಡ, ಮಾಜಿ ಶಾಸಕ ಪುಟ್ಟೇಗೌಡ, ಎಚ್.ಎಂ ವಿಶ್ವನಾಥ್, ಡಿ.ಮಲ್ಲೇಶ್ ಇನ್ನು ಮುಂತಾದವರು ಇದ್ದರು.
ಕೆಪಿಸಿಸಿ ವೀಕ್ಷಕ ಹಾಗೂ ಮಾಜಿ ಸಚಿವ ಪ್ರೊ.ಬಿ.ಕೆ ಚಂದ್ರಶೇಖರ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆಯೆಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಯಾರು ಸೂಕ್ತ ಮತ್ತು ಏಕೆ ಸೂಕ್ತ ಎಂದು ಅಭಿಪ್ರಾಯ ಪಡೆದರು. ವೀಕ್ಷಕರ ಭೇಟಿಗೆ ಅವಕಾಶ ದೊರೆಯದ ಕೆಲವು ಕಾರ್ಯಕರ್ತರು ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.