ತೇಜಸ್ವಿ ಸಾಹಿತ್ಯ ಲೋಕದ ವಿಸ್ಮಯ: ಪ್ರಾಧ್ಯಾಪಕ ಮಲ್ಲೇಶಗೌಡ
ಹಾಸನ: ಪೂರ್ಣಚಂದ್ರ ತೇಜಸ್ವಿ ನಾಡಿನ ಸಾಹಿತ್ಯ ಲೋಕದ ಒಂದು ವಿಸ್ಮಯ. ಅವರ ಎಲ್ಲಾ ಬರಹಗಳು ಆಂಗ್ಲಭಾಷೆಗೆ ತರ್ಜಿಮೆಯಾಗಿದ್ದಲ್ಲಿ ನೋಬೆಲ್ ಬಹುಮಾನವನ್ನೇ ಪಡೆಯುವ ಸಾಧ್ಯತೆಯಿತ್ತು. ಅಲ್ಲದೆ ಇನ್ನೂ ಒಂದೆರಡು ವರ್ಷ ಕಾಲ ಬದುಕಿದ್ದಲ್ಲಿ ಖಂಡಿತ ಜ್ಞಾನಪೀಠ ಪ್ರಶಸ್ತಿ ಅವರ ಮುಡಿಗೇರುತ್ತಿತ್ತು ಎಂದು ಎ.ವಿ.ಕೆ.ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮಲ್ಲೇಶಗೌಡ ಅಭಿಪ್ರಾಯಪಟ್ಟರು.
ನಗರದ ಕಸಾಪ ಭವನದಲ್ಲಿ ಏರ್ಪಡಿಸಿರುವ ಪೂರ್ಣಚಂದ್ರ ತೇಜಸ್ವಿಯವರ ನೆನಪಿನ ಸಪ್ತಾಹ ಕಾರ್ಯಕ್ರಮದಲ್ಲಿ ತೇಜಸ್ವಿಯವರ ಸಾಹಿತ್ಯದಲ್ಲಿ ವೈಚಾರಿಕತೆ ಕುರಿತ ವಿಚಾರಸಂಕಿರಣ ಕುರಿತು ಮಾತನಾಡಿದ ಅವರು, ತೇಜಸ್ವಿ ಒಬ್ಬ ಮಹಾನ್ ತಪಸ್ವಿ, ಪ್ರಕೃತಿ ಒಡನಾಟದಲ್ಲಿ ತಮ್ಮ ಮೈಮನಗಳನ್ನು ಒಡ್ಡಿಕೊಂಡು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಅಧ್ಯಯನ ಮಾಡಿ, ಅದನ್ನು ನವಿರಾಗಿ ಓದುಗರಿಗೆ ಉಣಬಡಿಸಿದ್ದಾರೆ. ನವ್ಯ ಸಾಹಿತ್ಯಕ್ಕೂ ಅವರ ಕೊಡುಗೆ ಅಪಾರವಾದದ್ದು ಎಂದು ಅವರು ಹೇಳಿದರು.
ಪೂರ್ಣಚಂದ್ರ ತೇಜಸ್ವಿ ಮತ್ತು ಕುವೆಂಪು ಕನ್ನಡ ಸಾಹಿತ್ಯ ಲೋಕದ ಒಂದು ಅಪರೂಪದ ತಂದೆ ಮಗನ ಜೋಡಿ, ಆದರೆ ತೇಜಸ್ವಿಯವರು ಯಾವುದೇ ಸಂದರ್ಭದಲ್ಲಿ ತಮ್ಮ ತಂದೆಯ ಪ್ರಭಾವವನ್ನು ಬಳಸಿಕೊಳ್ಳಲು ಇಚ್ಚಿಸದೆ ಸಾಹಿತ್ಯ ಲೋಕದಲ್ಲಿ ಬೆಳೆದವರು. ತೇಜಸ್ವಿಯವರ ಅನೇಕ ಸಾಹಿತ್ಯಗಳಲ್ಲಿ ಮೌಢ್ಯದ ವಿರುದ್ಧದ ಧ್ವನಿ ಇದೆ. ತಿಳಿ ಹಾಸ್ಯದ ಮೂಲಕವೇ ಅದನ್ನು ಹೇಳುವುದರ ಜೊತೆಗೆ ಜನರಲ್ಲಿ ವೈಚಾರಿಕತೆ ಬಿಂಬಿಸಲು ಪ್ರಯತ್ನಿಸಿದ್ದಾರೆ.
ಸಾಹಿತಿ ಗೊರೂರು ಶಿವೇಶ್ ಮಾತನಾಡಿ ತೇಜಸ್ವಿಯವರು ನಗರ ಬದುಕನ್ನು ಬಿಟ್ಟು ಮಲೆನಾಡಿನ ಮೂಡಿಗೆರೆಯಲ್ಲಿ ಮನೆ ಮಾಡಿ ಸಾಹಿತ್ಯ ಕೃಷಿಯ ಜೊತೆಗೆ ಅಪರೂಪದ ಛಾಯಾಗ್ರಾಹಕರಾಗಿಯೂ ಬೆಳೆದರು. ಎಲ್ಲಾ ರೀತಿಯ ಸಾಹಿತ್ಯ ಪ್ರಕಾರಗಳಲ್ಲಿಯೂ ತಮ್ಮ ಸಾಮಥ್ರ್ಯ ಪ್ರದರ್ಶಿಸಿದ ಅವರು ಸಣ್ಣ ಕಥೆಗಳು ಹಾಗೂ ಅನುವಾದ, ವಿಜ್ಞಾನ ಪುಸ್ತಕಗಳಿಂದ ಜನರಿಗೆ ಹೆಚ್ಚು ಪ್ರಿಯವಾದವರು ಎಂದರು.
ಹಾಸನ ವೈದ್ಯಕೀಯ ಮಹಾ ವಿದ್ಯಾಲಯದ ನಿರ್ದೇಶಕ ಡಾ..ರಂಗೇಗೌಡ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಜನಾರ್ದನ್ ಅವರು ತೇಜಸ್ವಿಯವರ ಸ್ಮರಣೆಗಾಗಿ ಸಾಹಿತ್ಯ ಪರಿಷತ್ತು ವಾರ ಕಾಲ ನಾನಾ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿದೆ. ಯುವ ಪೀಳಿಗೆಗೆ ತೇಜಸ್ವಿಯವರ ಬದುಕು ಬರಹಗಳನ್ನು ಪರಿಚಯಿಸುವುದರ ಜೊತೆಗೆ ಪರಿಸರ ಪ್ರೇಮ, ವೈಚಾರಿಕೆತೆಗಳನ್ನು ಬಿತ್ತುವ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎಂದರು. ವಾರ್ತಾಧಿಕಾರಿ ವಿನೋದ್‌ಚಂದ್ರ ಮಾತನಾಡಿ, ತೇಜಸ್ವಿ ಸಾಹಿತ್ಯ ಶ್ರೀಮಂತಿಕೆ, ವ್ಯಕ್ತಿತ್ವ ಬಣ್ಣಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಹಾಸನ ತಾಲೂಕು ಘಟಕದ ಪದಾಧಿಕಾರಿ ಮತೇಶ್ ವೇದಿಕೆಯಲ್ಲಿ ಇದ್ದರು. ಡಾ.ನಾಗೇಶ್ ನಿರೂಪಿಸಿದರು.