ಬೈಲಾ ತಿದ್ದುಪಡಿ ಚರ್ಚಾ ಸಭೆಯಲ್ಲಿ ಘರ್ಷಣೆ
ಚನ್ನರಾಯಪಟ್ಟಣ: ಪಟ್ಟಣದ ಟಿಎಪಿಸಿಎಂಎಸ್ ಸಹಕಾರ ಸಂಘದ ಸಾಮಾನ್ಯ ಸಭೆಯಲ್ಲಿ ಬೈಲಾ ತಿದ್ದುಪಡಿ ಚರ್ಚೆ ವೇಳೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಪೊಲೀಸರ ಮಧ್ಯ ಪ್ರವೇಶದಿಂದ ಗೊಂದಲ ಅಂತ್ಯ ಕಂಡಿತು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕಾಳೇಗೌಡ ಅಧ್ಯಕ್ಷತೆಯಲ್ಲಿ ಕರೆದಿದ್ದ ಸರ್ವ ಸದಸ್ಯರ ಸಭೆಯಲ್ಲಿ ಬೈಲಾ ತಿದ್ದುಪಡಿ ಕುರಿತು ಚರ್ಚೆ ನಡೆಯುತ್ತಿದ್ದಾಗ ಸಹಕಾರ ಸಂಘಗಳಿಂದ ಹಾಗೂ ಷೇರುದಾರರಿಂದ ನಿರ್ದೇಶಕರ ಆಯ್ಕೆ ಮೀಸಲಾತಿ ವಿಷಯ ಗೊಂದಲ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಉಂಟಾದ ಗಲಾಟೆಯಿಂದ ಸಭೆಯಲ್ಲಿ ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳದೆ ಸಭೆ ಅರ್ಧಕ್ಕೆ ಸ್ಥಗಿತಗೊಂಡಿತು.
ಮೀಸಲಾತಿ ಪ್ರಕಟಿಸಿ ಚುನಾವಣೆ: ಸರ್ಕಾರ ಸಹಕಾರ ಸಂಘಗಳಿಗೆ ಪ್ರಸಕ್ತ ಸಾಲಿನಲ್ಲಿ ಸಹಕಾರ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅದರನ್ವಯ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸುವಂತೆ ಆದೇಶ ಪ್ರಕಟಿಸಿದ್ದು, ಸಂಘಕ್ಕೆ ಸಹಕಾರ ಸಂಘಗಳಿಂದ 7 ನಿರ್ದೇಶಕ ಸ್ಥಾನ ಹಾಗೂ ಷೇರುದಾರರಿಂದ 5 ಸ್ಥಾನಗಳನ್ನು ನೀಡುವ ಅಭಿಪ್ರಾಯವನ್ನು ಅಧ್ಯಕ್ಷ ಕಾಳೇಗೌಡ ಅವರು ಸಭೆಯ ಗಮನಕ್ಕೆ ತಂದ ಸಂದರ್ಭದಲ್ಲಿ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಹಕಾರ ಸಂಘಗಳು ಹಾಗೂ ಷೇರುದಾರರಿಂದ ತಲಾ 6 ಸ್ಥಾನಗಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದ ಸಂದರ್ಭದಲ್ಲಿ ಗೊಂದಲ ಮೂಡಿತು.
ಹಿಂದಿನಿಂದಲೂ 7 ಸ್ಥಾನಗಳು ಸಹಕಾರ ಸಂಘಗಳಿಂದ ಆಯ್ಕೆಯಾಗುತ್ತಾ ಬರುತ್ತಿದ್ದು, ಅದನ್ನೇ ಮುಂದುವರಿಸಬೇಕು ಎಂದು ಮಾಜಿ ನಿರ್ದೇಶಕ ಮಂಜುನಾಥ್, ರಾಜಣ್ಣ, ತಾರಾನಾಥ್, ಶಿವಣ್ಣ ಪಟ್ಟುಹಿಡಿದರೆ ನಿರ್ದೇಶಕ ಆನಂದ್ ಸರ್ವ ಸದಸ್ಯರ ತೀರ್ಮಾನ ಅಂತಿಮವಾಗಿದ್ದು, ಅವರ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಬೇಕು ಎಂದು ತಿಳಿಸಿದ ಸಂದರ್ಭದಲ್ಲಿ ಕೆಲವರು ಗೊಂದಲ ಮೂಡಿ ವೇದಿಕೆಯತ್ತಾ ಕೆಲವರ ವಿರುದ್ಧ ಕೂಗುತ್ತಾ ಕೈ ಕೈ ಮಿಲಾಯಿಸಲು ಮುಂದಾದರು. ಈ ಸಂದರ್ಭದಲ್ಲಿ ಮತ್ತೊಂದು ಗುಂಪು ಅದನ್ನು ತಡೆಯಲು ಮುಂದಾಗಿ ಪರಸ್ಪರ ಗಲಾಟೆ ಪ್ರಾರಂಭವಾಯಿತು. ಪೋಲಿಸರು ಎರಡು ಗುಂಪುಗಳನ್ನು ಚದುರಿಸಿದರು.
ಗೊಂದಲದಿಂದ ಅಧ್ಯಕ್ಷ ಕಾಳೇಗೌಡ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮುಂದೂಡಿದರು.
ನಿರ್ದೇಶಕ ಆನಂದ್ ಮಾತನಾಡಿ ಸಂಘದಲ್ಲಿ 2385 ಸದಸ್ಯರಿದ್ದು, ಸಾಮಾನ್ಯ ಸಭೆಯಲ್ಲಿ ಯಾವುದೇ ತಿದ್ದುಪಡಿ ತರಲು ಬಹುಮತ ಅಗತ್ಯವಿದ್ದು, ಸಭೆಯಲ್ಲಿ ಕೇವಲ 124 ಮಂದಿ ಸಹಿ ಮಾಡಿ ತಮ್ಮ ಹಾಜರಾತಿ ತೋರಿದ್ದಾರೆ.
ಬೈಲಾ ತಿದ್ದುಪಡಿಗೆ ಬಹುಮತ ಅಗತ್ಯವಿದ್ದು, 2385 ಸದಸ್ಯರಲ್ಲಿ ಕೇವಲ 124ಮಂದಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿರುವುದರಿಂದ ಇಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ತಿಳಿಸಿದರು.