ಮಾದಿಗ ದಂಡೋರ ಕಾರ್ಯಕರ್ತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನ ಸೆ.16
ಸದಾಶಿವ ಆಯೋಗದ ವರದಿ ಶಿಫಾರಸು ಸೇರಿದಂತೆ ನಾನಾ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪರಿಶಿಷ್ಟ ಜಾತಿಯಲ್ಲಿ ನಿಜವಾಗಿಯೂ ತುಳಿತಕ್ಕೆ ಒಳಪಟ್ಟ ಜಾತಿಗಳಿಗೆ ಒಳಮೀಸಲಾತಿ ವರ್ಗೀಕರಣ ಕೇಳುವ ವ್ಯವಸ್ಥೆ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ, ಜಾತ್ಯತೀತ ಹಾಗೂ ಧರ್ಮಾತೀತವಾಗಿ ಹೋರಾಟ ಮಾಡಲಾಗುತ್ತಿದೆ. ಶೋಷಣೆಗೆ ಒಳಪಟ್ಟ ಅಸಂಘಟಿತ ಕಾರ್ಮಿಕರ ಪರವಾಗಿ ಧ್ವನಿ ಎತ್ತಿ 10,450 ಗ್ರಾಮ ಸಹಾಯಕರ ಪರವಾಗಿ ಹೋರಾಟವನ್ನು ರೂಪಿಸಿ 3500 ರು.ಗಳಿಂದ 7500 ರು. ವೇತನ ಹೆಚ್ಚಿಸಲು ಹೋರಾಟ ನಡೆಸಲಾಗಿದೆ.
ಸಂವಿಧಾನದ ಅನುಚ್ಛೇದ 309ನೇ ಅಡಿಯಲ್ಲಿ ಡಿ. ಗ್ರೂಪ್ ಮಾಡಬೇಕು. 2400 ಆರೋಗ್ಯ ಕವಚ, 108 ನೌಕರರ ಬೇಡಿಕೆಗಳನ್ನು ಈಡೇರಿಸಬೇಕು. ಅದೇ ರೀತಿ ಗುತ್ತಿಗೆ ಪೌರ ಕಾರ್ಮಿಕರು ವಂಶಕಾಲಿಕ ಪೌರ ಕಾರ್ಮಿಕರು, ಕೆಪಿಟಿಸಿಎಲ್ ಗುತ್ತಿಗೆ ಕಾರ್ಮಿಕರು, ಆರೋಗ್ಯ ಇಲಾಖೆ ಗುತ್ತಿಗೆ ಕಾರ್ಮಿಕರು, ಅರಣ್ಯ ಇಲಾಖೆ ದಿನಗೂಲಿ ನೌಕರರು, ಹೋಂ ಗಾಡ್ಸ್, ಗಾರ್ಮೆಂಟ್ಸ್ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ತಮ್ಮ ಹುದ್ದೆ ಕಾಯಂಗೊಳ್ಳದ ಪರಿಣಾಮ ಭಾರೀ ತೊಂದರೆ ಅನುಭವಿಸುತ್ತಿದ್ದು, ಅವರ ಹುದ್ದೆಗೆ ಭದ್ರತೆ ಇಲ್ಲದಂತಾಗಿದೆ. ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ಹಾಗೂ ಹೆಚ್ಚಿನ ಅವಧಿ ಕೆಲಸವನ್ನು ಮಾಡಿಸಿಕೊಂಡು ಕನಿಷ್ಟ ವೇತನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರು ಸೇರಿದಂತೆ ಇತರೆ ನಾನಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಡಿ ಗ್ರೂಪ್ ನೌಕರರ ಸ್ಥಿತಿ ಅತಂತ್ರವಾಗಿದ್ದು, ಇವರ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಹೋರಾಟಗಳು, ಪ್ರತಿಭಟನೆಗಳು ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಾಗಲಿ ಪೌರ ಕಾರ್ಮಿಕರ ಹೋರಾಟಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಜನಪರ ಕಾಳಜಿಯಿಂದ ಒಳಮೀಸಲಾತಿ ವರ್ಗೀಕರಣ ಮಾಡುವಂತೆ ಹಾಗೂ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿ, ಇನ್ನಾದರೂ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯಕುಮಾರ್,ಸಂದೇಶ್, ನಾರಾಯಣದಾಸ್, ಪ್ರವೀಣಕಲ್ಕೆರೆ, ಸೋಮಶೇಖರ್, ರಾಜಣ್ಣ, ದೇವರಾಜು ಇತರರು ಇದ್ದರು.
ಬೇಡಿಕೆಗಳು
- ಒಳಮೀಸಲಾತಿಗೆ ಸಂಬಂಧಪಟ್ಟಂತೆ ನ್ಯಾ. ಸದಾಶಿವ ಆಯೋಗ ವರದಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು.
- 10,450 ಗ್ರಾಮ ಸಹಾಯಕರನ್ನು ಡಿ. ಗ್ರೂಪ್ ನೌಕರರರೆಂದು ಪರಿಗಣಿಸಬೇಕು.
- ಪೌರ ಕಾರ್ಮಿಕ ಗುತ್ತಿಗೆ ಪದ್ಧತಿ ರದ್ದು ಮಾಡಿ, ಆ ಕಾರ್ಮಿಕರನ್ನು ಕಾಯಂಗೊಳಿಸಬೇಕು.
- ಎಲ್ಲಾ ಇಲಾಖೆಗಳಲ್ಲಿ ದಿನಗೂಲಿ, ಸಫಾಯಿ ಕರ್ಮಚಾರಿ ನೌಕರರನ್ನು ಕಾಯಂ ಗೊಳಿಸಬೇಕು.
- ಚರ್ಮ, ಕುಶಲಕರ್ಮಿ ಕೆಲಸಗಾರರಿಗೆ ವಿಶೇಷ ಸಾಲ ಸೌಲಭ್ಯಗಳನ್ನು ಒದಗಿಸಬೇಕು.
- ಬ್ಯಾಕ್‌ಲಾಗ್ ಹುದ್ದೆಗಳನ್ನು ಸದಾಶಿವ ವರದಿ ಮೀಸಲಾತಿ ಅನುಸಾರ ಭರ್ತಿ ಮಾಡಬೇಕು.