ಮೋದಿ ಕನಸು ಭಗ್ನ ಖಂಡಿತ: ದೇವೇಗೌಡ
ಕನ್ನಡಪ್ರಭ ವಾರ್ತೆ ಹಾಸನ ಸೆ.16
ಜಾತಿ ಅಥವಾ ಧರ್ಮದ ಆಧಾರ ಮೇಲೆ ಅಧಿಕಾರ ಹಿಡಿಯಲು ಹೊರಟಿರುವ ಬಿಜೆಪಿಯ ನರೇಂದ್ರ ಮೋದಿ ಅವರ ಕನಸು ಭಗ್ನವಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಹಾಗೂ ಇತರೆ ಹಿಂದೂ ಪರ ಸಂಘಟನೆಗಳು ದೇಶದ ಯಾವ ಯಾವ ಮೂಲೆಗಳಲ್ಲಿ ಇವೆ ಹಾಗೂ ಅವು ಯಾವ ಪರಿಸ್ಥಿತಿಯಲ್ಲಿವೆ ಎಂಬುದು ಎಲ್ಲರಿಗೂ ತಿಳಿದಿದ್ದು, ಇವುಗಳ ಷರತ್ತುಗಳನ್ನು ಒಪ್ಪಿ ಜನರು ತನಗೆ ಅಧಿಕಾರ ನೀಡುತ್ತಾರೆ ಎಂದು ಮೋದಿ ಭಾವಿಸಿರುವುದು ಸರಿಯಲ್ಲ ಎಂದ ಅವರು, ಬಿಜೆಪಿಯವರು ನರೇಂದ್ರ ಮೋದಿಯನ್ನು ದೊಡ್ಡಮಟ್ಟದಲ್ಲಿ ದೇಶಾದ್ಯಂತ ಪ್ರತಿಬಿಂಬಿಸುತ್ತಿದ್ದಾರೆ. ಆದರೆ ಇದು ಪ್ರತಿಫಲಿಸದು ಎಂದರು.
ಈ ಮಾತನ್ನು ಏತಕ್ಕೆ ಪ್ರಸ್ತಾಪಿಸಿದರು: ಹರ್ಯಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನರೇಂದ್ರ ಮೋದಿ ದೇಶದ ಸೈನಿಕ ವ್ಯವಸ್ಥೆಯಲ್ಲಿ ಜಾತಿ-ಧರ್ಮ ಇಲ್ಲ ಅಂದಿದ್ದಾರೆ. ಆದರೆ, ಅವರು ಈ ಮಾತನ್ನು ಏತಕ್ಕೆ ಆ ಸಭೆಯಲ್ಲಿ ಪ್ರಸ್ತಾಪಿಸಿದರು ಎಂಬ ಅಂಶ ತಿಳಿದಿಲ್ಲ ಎಂದ ಗೌಡರು, ದೇಶದ ಸೈನಿಕರು ಯಾವುದೇ ಜಾತಿ ಧರ್ಮದ ಆಧಾರದ ಮೇಲೆ ಹೋರಾಟ ಮಾಡುವುದಿಲ್ಲ. ನಾವೆಲ್ಲರು ಒಂದೇ ಎಂಬ ಭಾವನೆಯಿಂದ ಹೋರಾಟ ಮಾಡುತ್ತಾರೆ. ಒಟ್ಟಿನಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ದೇಶದಲ್ಲಿ ಅಧಿಕಾರವನ್ನು ಹಿಡಿಯುವುದು ಕಷ್ಟಸಾಧ್ಯ ಎಂದು ಹೇಳಿದರು.
ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗುವುದಾದರೆ ನಾನು ಬದುಕಿರಲು ಇಷ್ಟಪಡುವುದಿಲ್ಲ ಎಂದು ಅಪ್ರಕೃತವಾಗಿ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯತೀತ ವ್ಯವಸ್ಥೆಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಹಾಗೂ ಕೇವಲ ಜಾತಿ ಧರ್ಮದ ಆಧಾರದಿಂದ ಯಾರನ್ನೂ ಸೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಅನಂತಮೂರ್ತಿ ನೋವಿನಿಂದ ಈ ರೀತಿ ಹೇಳಿರಬಹುದು ಎಂದು ಭಾವಿಸುತ್ತೇನೆ ಎಂದು ಗೌಡರು ಅಭಿಪ್ರಾಯ ಪಟ್ಟರು.
ದೇಶದ 130 ಕೋಟಿ ಜನ ತೀರ್ಮಾನಿಸುತ್ತಾರೆ, ಯಾರು ಪ್ರಧಾನಮಂತ್ರಿಯಾಗಬೇಕು ಎಂದು. ದೇಶದ ಜನತೆ ಆರ್‌ಎಸ್‌ಎಸ್ ಅಥವಾ ಕಾಂಗ್ರೆಸ್‌ನವರ ಜೇಬಿನಲ್ಲಿ ಇಲ್ಲ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿಯವರೇ ಬಲಿಷ್ಠ ಸರ್ಕಾರ ಬರಬೇಕು ಅಂತ ಹುಡುಕಾಟ ನಡೆಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ 276 ಸೀಟುಗಳು ಬರಬೇಕಾಗಿದೆ ಎಂದು ಹೇಳಿದರು.
ಪಕ್ಷದ ಪದಾಧಿಕಾರಗಳ ನೇಮಕ: ರಾಜ್ಯದಲ್ಲಿ ಜೆಡಿಎಸ್ ನೂತನ ಪದಾಧಿಕಾರಿಗಳ ನೇಮಕದ ಬಗ್ಗೆ ಚರ್ಚೆ ನಡೆಸುತ್ತಿದ್ದು, ತಾಲೂಕು, ಜಿಲ್ಲಾ, ಮಹಿಳಾ ಘಟಕ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಎಸ್ಸಿಎಸ್ಟಿ ಘಟಕಗಳು ಸೇರಿದಂತೆ ರಾಜ್ಯ ಘಟಕಗಳಿಗೆ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ದಪಡಿಸಿ, ಇದಕ್ಕೆ 3 ವಾರಗಳಲ್ಲಿ ಚಾಲನೆ ನೀಡುತ್ತೇವೆ. ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದ ಅವರು, ರಾಷ್ಟ್ರೀಯ ಕಮಿಟಿ ಸಭೆ ಬೆಂಗಳೂರಿನಲ್ಲಿ ಕರೆಯುವುದಾಗಿ ತಿಳಿಸಿದರು.
ಕೊಬ್ಬರಿ ಖರೀದಿ ದಿನಾಂಕ 2 ವಾರ ವಿಸ್ತರಣೆ: ಜಿಲ್ಲೆ ಸೇರಿದಂತೆ ತುಮಕೂರು, ಚಿಕ್ಕಮಗಳೂರಿನ ಕೆಲವು ಕಡೆಗಳಲ್ಲಿ ಕೇಂದ್ರದ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರ ರೈತರಿಂದ ಕೊಬ್ಬರಿ ಖರೀದಿ ದಿನಾಂಕವನ್ನು ಸೆ.16ರಂದು ಕೊನೆ ಮಾಡಿತ್ತು. ಇಲ್ಲಿನ ಶಾಸಕರು ರೈತರ ಹಿತದೃಷ್ಟಿಯಿಂದ ಕೊಬ್ಬರಿ ಖರೀದಿ ಕೊನೆ ದಿನಾಂಕ ವಿಸ್ತರಿಸುವಂತೆ ಒತ್ತಾಯಿಸಿದ್ದರಿಂದ ನಾನು ಕೇಂದ್ರದ ಶರದ್‌ಪವಾರ್ ಗಮನಕ್ಕೆ ತಂದಿದ್ದೆ. ಅವರು ದೂರವಾಣಿಯ ಮೂಲಕ 2 ವಾರಗಳ ಕಾಲ ಅವಧಿ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ.
ಆದ್ದರಿಂದ ಯಾವುದೇ ರೈತರು ನೂಕುನುಗ್ಗಲಿನಿಂದ ಕೊಬ್ಬರಿಯನ್ನು ಮಾರಾಟ ಮಾಡದೆ ಇನ್ನು 2 ವಾರಗಳ ಕಾಲಾವಕಾಶವಿದೆ ಎಂದ ಅವರು, ಸೋಮವಾರ ಕೇಂದ್ರ ಸಚಿವರಿಂದ ಈ ಬಗ್ಗೆ ಅಧಿಕೃತ ಪತ್ರ ಬರಲಿದೆ ಎಂದು ಹೇಳಿದರು.
ರು. 1380 ಕೋಟಿ ತೆಂಗು ನಷ್ಟ: ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ಇತರೆ ಕಡೆಗಳಲ್ಲಿ ತೇವಾಂಶ ಕೊರತೆಯಿಂದಾಗಿ ಉಂಟಾಗಿರುವ ತೆಂಗು ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ತಂಡ ಇಲ್ಲಿಗೆ ಬಂದು ಪರಿಶೀಲಿಸಿ 1380 ಕೋಟಿ ರು.ಗಳು ನಷ್ಟವಾಗಿದೆ ಎಂದು ವರದಿ ನೀಡಿದೆ.
ಆದರೆ ರಾಜ್ಯ ಸರ್ಕಾರ ಮೂವರು ಸಚಿವರ ಉಪಸಮಿತಿ ರಚಿಸಿದೆ. ತೆಂಗು ಬೆಳೆ ಎಷ್ಟು ನಾಶವಾಗಿದೆ ಹಾಗೂ ಎಲ್ಲೆಲ್ಲಿ ಮತ್ತೆ ತೆಂಗು ನಾಟಿ ಮಾಡಬೇಕು ಎಂಬುದರ ಬಗ್ಗೆ ಯಾವ ಕ್ರಮ ಕೈಗೊಂಡಿದೆ ಎಂಬುದು ತಿಳಿದಿಲ್ಲ ಎಂದ ಅವರು, ಈ ಬಗ್ಗೆ ಸಭೆ ನಡೆಸುವುದಾಗಿ ಹೇಳಿದರು.
ಅತಿವೃಷ್ಟಿ, ಅನಾವೃಷ್ಟಿಗೆ ಪರಿಹಾರ: ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಾಕಷ್ಟು ಆಸ್ತಿಪಾಸ್ತಿ ನಾಶವಾಗಿದೆ. ಈ ಬಗ್ಗೆ ಪಕ್ಷದ ವತಿಯಿಂದ ತಂಡವನ್ನು ರಚಿಸಿ ಪ್ರವಾಸ ಕೈಗೊಂಡು ಎಷ್ಟು ನಷ್ಟವಾಗಿದೆ ಎಂಬ ವರದಿ ತಯಾರಿಸಿ ಪರಿಹಾರ ಕಾಮಗಾರಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ನುಡಿದರು.
ಶಾಸಕ ಎಚ್.ಎಸ್.ಪ್ರಕಾಶ್, ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮುಖಂಡ ಕೆ.ಎಂ.ರಾಜೇಗೌಡ, ಬಿ.ವಿ.ಕರೀಗೌಡ ಇತರರು ಇದ್ದರು.
ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗುವು ದಾದರೆ ನಾನು ಬದುಕಿರಲು ಇಷ್ಟಪಡುವುದಿಲ್ಲ ಎಂದು ಅಪ್ರಕೃತವಾಗಿ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯಾತೀತ ವ್ಯವಸ್ಥೆಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಹಾಗೂ ಕೇವಲ ಜಾತಿ ಧರ್ಮದ ಆಧಾರದಿಂದ ಯಾರನ್ನೂ ಸೆಳೆಯಲು ಸಾಧ್ಯವಿಲ್ಲ.
- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ