ಸುದ್ದಿ ಸಂಕ್ಷೇಪ
ಕಲ್ಲಿನ ಕ್ವಾರಿ ಹಗರಣ: ಸಿಓಡಿ ತನಿಖೆಗೆ ಶಿವಪ್ಪ ಆಗ್ರಹ
ಹಾಸನ: ಹಾಸನ-ದುದ್ದ-ತಿಪಟೂರು ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ನಿಗದಿಯಾಗಿದ್ದ ಕಲ್ಲಿನ ಕ್ವಾರಿಯಲ್ಲಿ ನಡೆದಿರುವ ಹಗರಣವನ್ನು ಸಿಓಡಿ ತನಿಖೆಗೆ ಒಳಪಪಡಿಸುವಂತೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಪಟೇಲ್ ಶಿವಪ್ಪ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕಾಗಿ ಕೆಆರ್ಡಿ ಸಿಎಲ್ ನಿಗದಿ ಮಾಡಿದ ಕ್ವಾರಿಯಿಂದ ಅಕ್ರಮವಾಗಿ ಕಲ್ಲು ರಫ್ತಾಗಿದೆ. ಇಲ್ಲಿ ನಿಗದಿ ಪಡಿಸಿದ್ದ 42 ಸಾವಿರ ಕ್ಯೂಬಿಕ್
ಮೀಟರ್ಗಿಂತ ಹೆಚ್ಚು ಕಲ್ಲು ಬೇರೆಡೆಗೆ ಅಕ್ರಮವಾಗಿ ರಫ್ತಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಬಯಲಿಗೆಳೆದಿದ್ದಕ್ಕೆ ಜೆಡಿಎಸ್ ಮುಖಂಡರು ಅಕ್ರೋಶಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದರು.
ಅರಸೀಕೆರೆ ಮತ್ತು ಚನ್ನರಾಯಪಟ್ಟಣಕ್ಕೆ ಇಲ್ಲಿಂದ ಅಕ್ರಮವಾಗಿ ಜಲ್ಲಿ ಸಾಗಿಸಲಾಗಿದ್ದು, ಇದರಿಂದ ಸರ್ಕಾರಕ್ಕೆ ಅಪಾರ ನಷ್ಟ ಉಂಟಾಗಿದೆ. ಈ ಕ್ವಾರೆಯಿಂದ ಎಷ್ಟು ಕಲ್ಲು ಸಾಗಿದೆ ಎಂಬ ಮಾಹಿತಿಯನ್ನು ಗಣಿ ಇಲಾಖೆ ಅಧಿಕಾರಿಗಳು ನೀಡಿದ್ದಾರೆ ಎಂದ ಅವರು, ಜಲ್ಲಿ ಅಕ್ರಮವಾಗಿ ಸಾಗಣೆಯಾಗಿದ್ದರೆ ಕೈ ಕತ್ತರಿಸಿಕೊಳ್ಳುವುದಾಗಿ ಹೇಳುವ ಶಾಸಕ ಕೆ.ಎಂ.ಶಿವಲಿಂಗೇಗೌಡರು, ತಮ್ಮ ವಿರುದ್ಧ ಮಾತನಾಡಿದರೆ ಕೈಕತ್ತರಿಸುವುದಾಗಿ ಪರೋಕ್ಷವಾಗಿ ಬೆದರಿಸಿದ್ದಾರೆ ಎಂದು ದೂರಿದರು.
ಈ ಅಕ್ರಮದಲ್ಲಿ ಅವರು ಭಾಗಿಯಾಗದಿದ್ದಲ್ಲಿ ಶಾಸಕರೇ ಸಿಓಡಿ ತನಿಖೆಗೆ ಒಳಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಿ ಎಂದು ಸವಾಲು ಹಾಕಿದ ಅವರು, ಅರಸೀಕೆರೆ ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದ್ದು, ಅದಕ್ಕೆ ಶಾಸಕರೆ ಹೊಣೆಗಾರರಾಗಿದ್ದು, ಎಲ್ಲಾ ದಾಖಲೆ ಸಮೇತ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಬಾಲಶಂಕರ್ ಇದ್ದರು.
ದೇಗುಲ ಬೀದಿಯಲ್ಲಿ ಶ್ವಾನಗಳದ್ದೇ ಕಾರುಬಾರು: ದೂರು
ಹಾಸನ: ನಗರದ ಹೃದಯ ಭಾಗದಲ್ಲಿರುವ ಸೀತಾರಾಮಾಂಜನೇಯ ದೇವಸ್ಥಾನ ಬೀದಿಯಲ್ಲಿ ನಾಯಿಗಳದ್ದೇ ಕಾರುಬಾರು. ಈ ರಸ್ತೆಯಲ್ಲಿ ಸದಾ ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಸಾರ್ವಜನಿಕರು ಈರಸ್ತೆಯಲ್ಲಿ ಓಡಾಡಲು ಅಂಜುತ್ತಾರೆ. ಶ್ವಾನಗಳ ಕಿವಿಗಡುಚುವ ಧ್ವನಿಗೆ ನಾಗರಿಕರ ನೆಮ್ಮದಿ ಹಾಳಾಗಿದ್ದು, ಮನೆಯಿಂದ ಹೊರಬರಲು ಆತಂಕ ಪಡುವಂತಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
ಉತ್ತರ ಬಡಾವಣೆಯ ಸೀತಾರಾಮಾಂಜನೇಯ ದೇವಸ್ಥಾನದ ಬೀದಿ ಸುಮಾರು ತಿಂಗಳುಗಳಿಂದ ಶ್ವಾನಗಳ ವಾಸಸ್ಥಾನವಾಗಿದೆ. ಈ ಬೀದಿಯಲ್ಲಿ ದೇವಸ್ಥಾನ, ಕಲ್ಯಾಣಮಂಟಪ, ಶಾಲೆಗಳು, ಕಂಪ್ಯೂಟರ್ ತರಬೇತಿ ಕೇಂದ್ರ, ಅಂಗಡಿಗಳು, ಪಕ್ಕದ ರಸ್ತೆಯಲ್ಲಿ ಪದವಿ ಪೂರ್ವ ಕಾಲೇಜು, ಪಕ್ಕದಲ್ಲೇ ಮಹಾರಾಜ ಉದ್ಯಾನವನಗಳಿವೆ. ವಾಯುವಿಹಾರಕ್ಕಾಗಿ ಹಾಗೂ ಟ್ಯೂಷನ್ಗೆ ಹೋಗುವ ವಿದ್ಯಾರ್ಥಿಗಳು ಹೆದರುವಂತಾಗಿದೆ.
ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಶಾಲೆಯ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳ ಓಡಾಟ, ದೇವಸ್ಥಾನ, ಕಲ್ಯಾಣಮಂಟಪ, ಅಂಗಡಿಗಳಿಗೆ ಹೋಗಿ ಬರುವವರು, ಚಿಂದಿ ಆಯುವವರು ಅಥವಾ ಆಹಾರ ಅರಸಿ ಸಾಗುವ ದನಕರುಗಳು ಕಂಡಾಗ ಹೊರಹೊಮ್ಮುವ ನಾಯಿಗಳ ಕರ್ಕಶ ಧ್ವನಿ. ಸಂಜೆ 4ರ ವೇಳೆಗೆ ಶಾಲೆಗಳು ಬಿಟ್ಟಾಗ ಮಕ್ಕಳ ಸಂದಣಿ, ನಂತರ ಟ್ಯೂಷನ್ಗೆ ಹೋಗಿಬರುವ ವಿದ್ಯಾರ್ಥಿಗಳು, ಹೊರ ಊರುಗಳಿಗೆ ತೆರಳಿದ್ದವರು ತಡರಾತ್ರಿ ಆಗಮಿಸಿದಾಗ ಅವರಲ್ಲಿ ಜೀವ ಭಯ ಮೂಡಿಸಿದೆ ಎಂದು ಜನತೆ ದೂರಿದ್ದಾರೆ.
ಒಟ್ಟಾರೆ ನಾಯಿಗಳ ಹಾವಳಿಯಿಂದ ಈ ಬೀದಿಯ ಮಕ್ಕಳು, ವೃದ್ಧರು ಯುವಕರೆನ್ನದೆ ಪ್ರತಿಯೊಬ್ಬರೂ ದಿನವಿಡೀ ಜೀವ ಭಯದಿಂದ ಕಾಲ ದೂಡುವಂತಾಗಿದೆ. ತಿಂಡಿ ತಿನಿಸು ಕೊಂಡೊಯ್ಯುವ ಮಕ್ಕಳು, ದನ ಕರುಗಳ ಮೇಲೆ, ನಾಯಿಗಳ ಆಕ್ರಮಣ ನಡೆದಿವೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಬೀದಿ ನಾಯಿಗಳ ತಡೆಗೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.