ಕಲಿಕೆಗೆ ವಯಸ್ಸಿನ ಮಿತಿಯಿಲ್ಲ, ಶ್ರದ್ಧೆ ಮುಖ್ಯ: ಶಾಸಕ ಪ್ರಕಾಶ್
ಹಾಸನ: ಮಾನವನ ಏಳಿಗೆಯಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವವಾದುದು. ಅದೇ ರೀತಿ ಗುರು ಶಿಷ್ಯರ ಸಂಬಂಧವೂ ಅಷ್ಟೇ ಪವಿತ್ರವಾದದ್ದು ಎಂದು ಶಾಸಕ ಎಚ್.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.
ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಹಾಸನ ಪ್ರಾದೇಶಿಕ ಕೇಂದ್ರದ ವತಿಯಿಂದ ನಗರದ ಬಿ.ಈ.ಜಿ.ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ 2013-14ನೇ ಸಾಲಿನ ವಿವರಣಾ ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಆಸಕ್ತಿ ಶ್ರದ್ಧೆ ಮತ್ತು ಪರಿಶ್ರಮ ಮುಖ್ಯ ಎಂದರು.
ಇಂದಿನ ಸಮಾಜದಲ್ಲಿ ಶಿಕ್ಷಣ ಕೂಡ ವ್ಯಾಪಾರೀಕರಣವಾಗಿದೆ ಈ ಹಿನ್ನೆಲೆಯಲ್ಲಿ ಮುಕ್ತ ವಿಶ್ವವಿದ್ಯಾನಿಲಯ ಅವಕಾಶ ವಂಚಿತರಿಗೆ ತಮ್ಮ ಶೈಕ್ಷಣಿಕ ಆಸೆಯನ್ನು ಈಡೇರಿಸಿಕೊಳ್ಳಲು ಒಳ್ಳೆ ವೇದಿಕೆಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಕ್ತ ಗಂಗೋತ್ರಿ ಹಾಸನ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಪಿ. ಹರೀಶ್ ಮಾತನಾಡಿ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ 1.25 ಲಕ್ಷ ಮಂದಿ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಬಹುತೇಕ ಎಲ್ಲಾ ರೀತಿಯ ಪ್ರಮುಖ ಕೋರ್ಸ್‌ಗಳು ಇಲ್ಲಿ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ನುಡಿದರು. ಕಾಲೇಜು ಹಾಗೂ ದೂರ ಶಿಕ್ಷಣ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಈ ಬಗ್ಗೆ ಗೊಂದಲ ಬೇಡ. ಚೆನ್ನಾಗಿ ಕಲಿಯುವ ಎಲ್ಲರಿಗೂ ಸಮಾಜದಲ್ಲಿ ಒಂದೇ ರೀತಿಯ ಅವಕಾಶ ದೊರೆಯುತ್ತದೆ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಪಿ.ಎಲ್. ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಕೂಡ ಇದೆ. ನೊಂದಣಿಗೆ ಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ ಎಂದು ಅವರು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ವಿನೋದ್‌ಚಂದ್ರ ಮಾತನಾಡಿ, ಮುಕ್ತ ವಿಶ್ವವಿದ್ಯಾನಿಲಯವು ಶಿಕ್ಷಣ ಅವಕಾಶ ವಂಚಿತರ ಪಾಲಿಗೆ ಬಹುದೊಡ್ಡ ಆಶಾಕಿರಣ. ಇದು ವಿದ್ಯಾವಂತ ಜನ ಸಮುದಾಯವನ್ನು ಕಟ್ಟುವ ಮೂಲಕ ಜಾಗೃತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಅಭಿನಂದನಾರ್ಹ ಎಂದು ನುಡಿದರು. ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಆಂಗ್ಲ ಭಾಷೆ ಜ್ಞಾನವನ್ನೂ ಪಡೆದಲ್ಲಿ ಉದ್ಯೋಗದಲ್ಲಿ ಇನ್ನೂ ಹೆಚ್ಚು ಅವಕಾಶ ಪಡೆಯಬಹುದಾಗಿದೆ ಎಂದು ತಿಳಿಸಿದರು. ಆಂಗ್ಲ ಉಪನ್ಯಾಸಕ ಡಿ.ಆರ್.ವಾಸು ನಿರೂಪಿಸಿದರು. ವಿದ್ಯಾರ್ಥಿನಿ ರಂಜಿತ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕಿ ಸಂಗೀತ ಸ್ವಾಗತಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ಕೆ.ಎಸ್.ಜಯಕುಮಾರ್ ವಂದಿಸಿದರು.